ADVERTISEMENT

ಶಿಡ್ಲಘಟ್ಟ | ಕಪ್ಪುಪಟ್ಟಿ ಧರಿಸಿ ಪ್ರತಿಭಟನೆಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 5:49 IST
Last Updated 17 ನವೆಂಬರ್ 2025, 5:49 IST
ಶಿಡ್ಲಘಟ್ಟದಲ್ಲಿ ರೇಷ್ಮೆ ರೀಲರುಗಳ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು
ಶಿಡ್ಲಘಟ್ಟದಲ್ಲಿ ರೇಷ್ಮೆ ರೀಲರುಗಳ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು   

ಶಿಡ್ಲಘಟ್ಟ: ರೇಷ್ಮೆ ರೀಲರುಗಳ ಬೇಡಿಕೆ ಈಡೇರಿಸದ ಸರ್ಕಾರದ ತಾರತಮ್ಯ ನೀತಿ ಖಂಡಿಸಿ ನವೆಂಬರ್ 24ರಂದು ಹೈಟೆಕ್ ಗೂಡಿನ ಮಾರುಕಟ್ಟೆ ಉದ್ಘಾಟನೆಗೆ ಬರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸುತ್ತೇವೆ ಎಂದು ತಾಲ್ಲೂಕು ರೇಷ್ಮೆ ನೂಲು ಬಿಚ್ಚಾಣಿಕೆದಾರರ ಕಲ್ಯಾಣ ಸಂಘದ ಅಧ್ಯಕ್ಷ ಅನ್ಸರ್ ಖಾನ್ ತಿಳಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಿಂದಿನ ಸರ್ಕಾರದ ಅವಧಿಯಲ್ಲಿ ರೇಷ್ಮೆ ರೀಲರುಗಳಿಗೆ ಬಡ್ಡಿ ರಹಿತ ಮೂರು ಲಕ್ಷ ವರ್ಕಿಂಗ್ ಕ್ಯಾಪಿಟಲ್ ನೀಡುವುದಾಗಿ ಭರವಸೆ ನೀಡಲಾಗಿತ್ತು. ಈ ಅವಧಿಯಲ್ಲಿ ಆ ಮೊತ್ತವನ್ನು ₹5 ಲಕ್ಷಕ್ಕೆ ಹೆಚ್ಚಿಸುವುದಾಗಿ ಘೋಷಿಸಿದರೂ, ಇಂದಿನವರೆಗೂ ಅದು ಕಾರ್ಯಗತವಾಗಿಲ್ಲ ಎಂದರು.

ರೀಲರುಗಳು ಉತ್ಪಾದಿಸುವ ಕಚ್ಚಾ ರೇಷ್ಮೆಯನ್ನು ಮಾರಾಟ ಮಾಡಲು ಸರ್ಕಾರಿ ಮಾರುಕಟ್ಟೆ ಸ್ಥಾಪಿಸಬೇಕು. ಐವತ್ತು ವರ್ಷಗಳಿಂದ ರೇಷ್ಮೆ ಕೈಗಾರಿಕೆಯಲ್ಲಿ ಯಾವುದೇ ಪ್ರಮುಖ ನವೀಕರಣವಾಗಿಲ್ಲ. ರೀಲರುಗಳಿಗೆ ಆಧುನಿಕ ಸೌಲಭ್ಯಗಳಿರುವ ರೀಲಿಂಗ್ಪಾರ್ಕ್ ಮಾಡಬೇಕು. ರೀಲರುಗಳ ಕುಟುಂಬಗಳಲ್ಲಿ ಶೇ 80ರಷ್ಟು ಮಂದಿ ಉಸಿರಾಟ ಸಂಬಂಧಿತ ಸಮಸ್ಯೆ ಮತ್ತು ಅಸ್ತಮಾದಿಂದ ಬಳಲುತ್ತಿದ್ದಾರೆ. ಇದಕ್ಕಾಗಿ ವಿಶೇಷ ಟಿ.ಬಿ ಮತ್ತು ಶ್ವಾಸಕೋಶ ಚಿಕಿತ್ಸಾ ಆಸ್ಪತ್ರೆ ಸ್ಥಾಪನೆ ಅಗತ್ಯ. ರೇಷ್ಮೆ ಕೃಷಿಕರು ಮಾರುಕಟ್ಟೆಯ ಹೊರಗೆ ರೇಷ್ಮೆ ಗೂಡನ್ನು ಮಾರಾಟ ಮಾಡದಂತೆ ಜಾಗೃತಿ ಮೂಡಿಸಿ ಎಂದು ಒತ್ತಾಯಿಸಿದರು.

ADVERTISEMENT

ಈಗಿರುವ ರೇಷ್ಮೆ ಗೂಡಿನ ಮಾರುಕಟ್ಟೆಗೇ ರೇಷ್ಮೆಗೂಡಿನ ಆವಕ ಕುಂಠಿತವಾಗಿದೆ. ಹೀಗಿರುವಾಗ ಹೈಟೆಕ್ ಗೂಡಿನ ಮಾರುಕಟ್ಟೆಯ ಪ್ರಯೋಜನವೇನು. ರೈತರು ಮತ್ತು ರೀಲರುಗಳು ಚೆನ್ನಾಗಿದ್ದಾಗ ಮಾತ್ರ ಮಾರುಕಟ್ಟೆಯ ವ್ಯವಸ್ಥೆಗೆ ಅರ್ಥ ಬರುತ್ತದೆ. ಹೈಟೆಕ್ ಗೂಡಿನ ಮಾರುಕಟ್ಟೆಯಲ್ಲಿ ಏನೇನು ಸೌಲಭ್ಯಗಳಿರುತ್ತವೆ. ಅಷ್ಟು ಕೋಟಿ ಹಣ ಖರ್ಚು ಮಾಡುವುದರಿಂದ ರೈತರು ಮತ್ತು ರೀಲರುಗಳಿಗೆ ಹೇಗೆ ಅನುಕೂಲವಾಗುತ್ತದೆ ಎಂಬುದನ್ನು ಇದುವರೆಗೂ ಯಾರೂ ಚರ್ಚಿಸಿಲ್ಲ ಎಂದರು.

ರೈತರಿಗೆ ಇ ಹರಾಜು ಮೂಲಕ ಆಯಾ ದಿನವೇ ಹಣ ಸಿಗುವಂತಹ ವ್ಯವಸ್ಥೆ ಆಗಿದೆ. ಆದರೆ ರೀಲರುಗಳು ಉತ್ಪಾದಿಸಿದ ರೇಷ್ಮೆಗೆ ಆ ರೀತಿಯ ಹಣ ಸಿಗುವ ಸರ್ಕಾರಿ ವ್ಯವಸ್ಥೆಯಿಲ್ಲ. ಬಲಿಷ್ಠ ಮಗ್ಗದ ವ್ಯಾಪಾರಿಗಳಿಂದ ನಿರಂತರವಾಗಿ ಶೋಷಣೆಗೆ ಒಳಗಾಗುತ್ತಿರುವ ರೀಲರುಗಳನ್ನು ರಕ್ಷಿಸುವ ಮಾರುಕಟ್ಟೆ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕಿದೆ. ಆಗ ಮಾತ್ರ ಈ ಉದ್ದಿಮೆ ಉಳಿಯುತ್ತದೆ ಎಂದರು.

ರೀಲರುಗಳ ಸಂಘದ ಜಿ.ರೆಹಮಾನ್, ಕೆ.ಆನಂದ್ ಕುಮಾರ್, ಕೆ.ಸಾದಿಕ್ ಪಾಷ, ಕೆ.ಬಿ.ಮಂಜುನಾಥ್, ಮುನಿಕೃಷ್ಣಪ್ಪ, ಸಾದಿಕ್ ಪಾಷ, ಮುರ್ತುಜ್ ಪಾಷ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.