ADVERTISEMENT

ಚಿಕ್ಕಬಳ್ಳಾಪುರ ಬೆಚ್ಚಿ ಬೀಳಿಸಿದ ಬೆಳ್ಳಿ ಕಳ್ಳತನ

ಸಾಧ್ಯವಾಗದ ಚಿನ್ನ ಕಳ್ಳತನ; ಪೊಲೀಸರ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 7:25 IST
Last Updated 24 ಡಿಸೆಂಬರ್ 2025, 7:25 IST
ಬೆಳ್ಳಿ ಕಳ್ಳತನ ನಡೆದಿರುವ ಅಂಗಡಿ ಬಳಿ ಪೊಲೀಸರ ಪರಿಶೀಲನೆ
ಬೆಳ್ಳಿ ಕಳ್ಳತನ ನಡೆದಿರುವ ಅಂಗಡಿ ಬಳಿ ಪೊಲೀಸರ ಪರಿಶೀಲನೆ   

ಚಿಕ್ಕಬಳ್ಳಾಪುರ: ನಗರದ ಬಿ.ಬಿ ರಸ್ತೆಯ ಎಯು ಚಿನ್ನಾಭರಣ ಮಾರಾಟ ಮಳಿಗೆಯಲ್ಲಿ ನಡೆದ ಬೆಳ್ಳಿ ಕಳ್ಳತನ ನಗರದ ಚಿನ್ನಾಭರಣ ಮಾರಾಟಗಾರರು ಸೇರಿದಂತೆ ನಾಗರಿಕ ವಲಯವನ್ನು ಬೆಚ್ಚಿ ಬೀಳಿಸಿದೆ. 

ಚಿಕ್ಕಬಳ್ಳಾಪುರ ಇತಿಹಾಸದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಳ್ಳಿ ಕಳ್ಳತನ  ನಡೆದಿರುವುದು ಇದೇ ಮೊದಲು. ಸೋಮವಾರ ನಡುರಾತ್ರಿ ಇಲ್ಲವೆ ಮಂಗಳವಾರ ಬೆಳಗಿನ ಜಾವ ಘಟನೆ ನಡೆದಿದೆ. ಬೆಳಿಗ್ಗೆ ಮಾಲೀಕರು ಅಂಗಡಿಯ ಬಾಗಿಲು ತೆರೆಯಲು ಬಂದ ವೇಳೆ ಘಟನೆ ಬೆಳಕಿಗೆ ಬಂದಿದೆ.

ಎ.ಯು ಚಿನ್ನಾಭರಣ ಮಾರಾಟ ಮಳಿ ಇರುವ ಬಿ.ಬಿ ರಸ್ತೆಯು ಸದಾ ಜನನಿಬಿಡವಾಗಿರುತ್ತದೆ. ಅಂಗಡಿಯ ಬಾಗಿಲು ಮುರಿದಿರುವ ಕಳ್ಳರು 140 ಕೆ.ಜಿ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿದ್ದಾರೆ. ಬಂಗಾರವನ್ನು ಲಾಕರ್‌ನಲ್ಲಿ ಇಟ್ಟಿದ್ದರು. ಲಾಕರ್ ಮುರಿಯಲು ಸಾಧ್ಯವಾಗದ ಕಾರಣ ಚಿನ್ನ ಕಳ್ಳತನವಾಗಿಲ್ಲ. ಅಂಗಡಿಯ ಬಾಗಿಲಿನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. ಇದರ ಡಿವಿಆರ್ ಸಹ ಕೊಂಡೊಯ್ದಿದ್ದಾರೆ.  

ADVERTISEMENT

ಸ್ಥಳಕ್ಕೆ ಪೊಲೀಸರ ದಂಡ: ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಎಎಸ್‌ಪಿ ಜಗನ್ನಾಥ್ ರೈ, ಡಿವೈಎಸ್‌ಪಿ ಶಿವಕುಮಾರ್ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ  ಭೇಟಿ ನೀಡಿದ್ದರು. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದರು.  

ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದ ಕುಶಾಲ್ ಚೌಕ್ಸೆ, ‘ಅನುಭವಿ ಕಳ್ಳರ ತಂಡ ಕೃತ್ಯ ನಡೆಸಿರುವ ಸಾಧ್ಯತೆ ಇದೆ. ಯೋಜನಾಬದ್ಧವಾಗಿ ಕೃತ್ಯ ಎಸಗಿದ್ದಾರೆ. ನೆರೆಹೊರೆಯ ಅಂಗಡಿಗಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸಲಾಗುತ್ತಿದೆ. ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ’ ಎಂದು ವಿವರಿಸಿದರು. 

ಮಾಹಿತಿ ಕಲೆ ಹಾಕುತ್ತಿರುವ ಬೆರಳಚ್ಚು ತಜ್ಞರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.