
ಚಿಕ್ಕಬಳ್ಳಾಪುರ: ‘ನಮ್ಮ ದೇಶದ ಯುವಶಕ್ತಿಗೆ ರಾಷ್ಟ್ರಮಟ್ಟದ ಅವಕಾಶ ದೊರೆತಿರುವುದು ನಿಜಕ್ಕೂ ಶ್ಲಾಘನೀಯ. ಪ್ರತಿಯೊಬ್ಬ ಸ್ಪರ್ಧಾರ್ಥಿಯೂ ತಮ್ಮಲ್ಲಿರುವ ಪ್ರಾಯೋಗಿಕ ಮತ್ತು ತಂತ್ರಜ್ಞಾನ ಕೌಶಲವನ್ನು ಜಗತ್ತಿನ ಮುಂದೆ ಪ್ರದರ್ಶಿಸಬೇಕಿದೆ’ ಎಂದು ನಾಗಾರ್ಜುನ ಎಂಜಿನಿಯರಿಂಗ್ ಮತ್ತು ತಾಂತ್ರಿಕ ವಿದ್ಯಾಲಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾನು ಚೈತನ್ಯ ವರ್ಮಾ ಹೇಳಿದರು.
ತಾಲ್ಲೂಕಿನ ಬೀಡಗಾನಹಳ್ಳಿ ಬಳಿಯ ನಾಗಾರ್ಜುನ ಎಂಜಿನಿಯರಿಂಗ್ ವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ - ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ದೇಶದಾದ್ಯಂತ ಲಕ್ಷಾಂತರ ಮಂದಿ ಯುವಜನರು ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ನಮ್ಮ ಸಂಸ್ಥೆಗೆ ದೇಶದ 11 ರಾಜ್ಯಗಳಿಂದ 120 ವಿದ್ಯಾರ್ಥಿಗಳು ಬಂದಿದ್ದು, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇದೊಂದು ಸದಾವಕಾಶ. ಎಲ್ಲರೂ ಇದರ ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಹೇಳಿದ್ದರು.
‘ಶಿಕ್ಷಣ ಸಚಿವಾಲಯ ಮತ್ತು ಎಐಸಿಟಿಇ ನಮ್ಮಲ್ಲಿ ನಂಬಿಕೆಯಿಟ್ಟು ಈ ಸದಾವಕಾಶ ಕಲ್ಪಿಸಿದ್ದಕ್ಕಾಗಿ ಧನ್ಯವಾದ. ಇಂತಹ ಕಾರ್ಯಕ್ರಮಗಳಿಗೆ ಸೂಕ್ತ ವೇದಿಕೆ ಕಲ್ಪಿಸಲು ನಾಗಾರ್ಜುನ ಸಂಸ್ಥೆ ಸದಾ ಬದ್ಧವಾಗಿರುತ್ತದೆ’ ಎಂದು ಹೇಳಿದರು.
ನವದೆಹಲಿ ಡಿಆರ್‌ಡಿಒ ಮುಖ್ಯಕಚೇರಿ ನಿರ್ದೇಶಕ ಎನ್.ರಂಜನ ಮಾತನಾಡಿ, ‘ಎಸ್‌ಐಎಚ್-2025 ನಮ್ಮ ದೇಶದ ರಕ್ಷಣೆಗಾಗಿ ನಡೆಯುತ್ತಿರುವ ಕಾರ್ಯಕ್ರಮ. ಯಾವುದೇ ಸಮಸ್ಯೆಯನ್ನು ಒಂದು ಆಯಾಮದಿಂದ ಬಗೆಹರಿಸಲು ಸಾಧ್ಯವಿಲ್ಲ, ಬಹುಶಿಸ್ತೀಯ ಆಯಾಮಗಳಿಂದ ಪ್ರಯತ್ನಿಸಿದಾಗ ಮಾತ್ರ ಸಮಸ್ಯೆಗಳ ಬಗೆಹರಿಸುವಿಕೆ ಸಾಧ್ಯವಾಗುತ್ತದೆ’ ಎಂದು ಹೇಳಿದರು.
ಕೆಲವರು ಕೋಡಿಂಗ್ ಮಾಡುತ್ತಾರೆ. ಇನ್ನೂ ಕೆಲವರು ಬೇರೆ ರೀತಿಯ ತಂತ್ರಜ್ಞಾನ ಪ್ರಾವೀಣ್ಯ ಹೊಂದಿರುತ್ತಾರೆ. ಆದ್ದರಿಂದ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಇದರಿಂದ ಯಾವುದೇ ಸಮಸ್ಯೆಯನ್ನು ಬಗೆಹರಿಸಬಹುದು. ಎಲ್ಲರೂ ಒಟ್ಟಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಿರಿ. ನಿಮ್ಮ ಪರಿಹಾರ ಎಲ್ಲಾ ರೀತಿಯಲ್ಲೂ ಸರಿಯಾಗಿದ್ದರೆ, ಅದನ್ನೇ ಮುಂದಿನ ದಿನಗಳಲ್ಲಿ ಕಂಪನಿಗಳಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದು ವಿದ್ಯಾರ್ಥಿಗಳನ್ನು ಭರವಸೆ ನೀಡಿದರು.
ವಾಲ್‌ಮಾರ್ಟ್ ಇಂಡಿಯಾ ಲಿಮಿಟೆಡ್‌ನ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ರಾಧಾಕೃಷ್ಣನ್ ಮಾತನಾಡಿ, ನಿಮ್ಮಲ್ಲಿ ಆವಿಷ್ಕಾರ ಶಕ್ತಿ ಇದೆ ಎಂಬುದನ್ನು ಹೊರಜಗತ್ತಿಗೆ ತೋರಿಸಬೇಕಿದೆ. ಅದಕ್ಕಾಗಿ ಯುವಜನರು ಒಗ್ಗಟ್ಟಾಗಬೇಕು. ಇದರಿಂದ ಸಮಸ್ಯೆಗೆ ಪರಿಹಾರ ಸಾಧ್ಯ ಎಂದು ಹೇಳಿದರು.
ಟಿಸಿಎಸ್ ಕಂಪನಿಯ ವಿಜ್ಞಾನಿ ರಾಜನ್ ಎಂ.ಎ, ಜ್ಞಾನಕ್ಕೆ ಸಮನಾದ ಶಕ್ತಿ ಮತ್ತೊಂದಿಲ್ಲ. ನಾವು ನಿರಂತರವಾಗಿ ಚುರುಕುತನ ಹೊಂದುವ ಮೂಲಕ ಅತ್ಯುತ್ತಮ ಸಾಧನೆಗಳನ್ನು ಮಾಡಬಹುದು ಎಂದು ಹೇಳಿದರು.
ಸಂಸ್ಥೆ ನಿರ್ದೇಶಕ ಎ.ಜಿ.ಗೋಪಾಲಕೃಷ್ಣ,ಪ್ರಾಂಶುಪಾಲ ತಿಪ್ಪೇಸ್ವಾಮಿ, ಆಡಳಿತ ಮಂಡಳಿ ಪ್ರಮುಖರಾಗಿ ಕಿಶನ್, ದಾಖಲಾತಿ ವಿಭಾಗದ ಶಿಬು, ಯೋಗೇಶ, ಸರ್ವೇಶ್, ಗೋಪಿನಾಥ್, ಲೋಹಿತ್, ವೆಂಕಟೇಶ್, ಗೋವರ್ಧನಸ್ವಾಮಿ, ಮಹೇಶ್ ಕೆ.ಕೆ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.