ADVERTISEMENT

ಚಿಕ್ಕಬಳ್ಳಾಪುರ: ಏಪ್ರಿಲ್‌ವರೆಗೆ ವಿಶೇಷ ಮಧ್ಯಸ್ಥಿಕೆ ಅಭಿಯಾನ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 7:10 IST
Last Updated 3 ಜನವರಿ 2026, 7:10 IST
ರಾಮಲಿಂಗೇಗೌಡ
ರಾಮಲಿಂಗೇಗೌಡ   

ಚಿಕ್ಕಬಳ್ಳಾಪುರ: ಏಪ್ರಿಲ್‌ವರೆಗೆ 90 ದಿನಗಳ ಕಾಲ ವಿಶೇಷ ಮಧ್ಯಸ್ಥಿಕೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಸಾರ್ವಜನಿಕರು ಸದುಪಯೋಗ ಪಡೆಯಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ರಾಮಲಿಂಗೇಗೌಡ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಳೆದ ವರ್ಷ ಜು.1ರಿಂದ ನವೆಂಬರ್‌ವರೆಗೆ ಮಧ್ಯಸ್ಥಿಕೆ ಅಭಿಯಾನ ನಡೆದಿತ್ತು. ಆಗ 2,092 ಪ್ರಕರಣಗಳು ಮಧ್ಯಸ್ಥಿಕೆಗೆ ನೋಂದಣಿಯಾಗಿತ್ತು. ಈ ಪೈಕಿ 1,069 ಪ್ರಕರಣಗಳನ್ನು ಮಧ್ಯಸ್ಥಿಕೆ ಅಭಿಯಾನ ಪ್ರಕ್ರಿಯೆಗೆ ಒಳಪಡಿಸಿ 190 ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿತ್ತು. ಈ ವರ್ಷದ ಆರಂಭದಲ್ಲೇ ಎರಡನೇ ಹಂತದ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಸುಪ್ರೀಂಕೋರ್ಟ್ ನಿರ್ದೇಶನದಂತೆ ಜ.2 ರಿಂದ ಏಪ್ರಿಲ್‌ವರೆಗೆ 90 ದಿನ ಜಿಲ್ಲೆಯಲ್ಲಿಯೂ ವಿಶೇಷ ಮಧ್ಯಸ್ಥಿಕೆ 2.0 ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲಾ ಮತ್ತು ತಾಲ್ಲೂಕು ನ್ಯಾಯಾಲಯಗಳಲ್ಲಿ ಬಾಕಿಯಿರುವ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತಿದೆ ಎಂದು ಹೇಳಿದರು. 

ADVERTISEMENT

ಚೆಕ್‌ಬೌನ್ಸ್, ವೈವಾಹಿಕ, ಅಪಘಾತ, ಕೌಟುಂಬಿಕ ದೌರ್ಜನ್ಯ, ವಾಣಿಜ್ಯ ವಿವಾದ, ಸೇವಾ ವಿಷಯ, ಸಾಲದ ವಸೂಲಾತಿ, ಕಾರ್ಮಿಕ, ಭೂ ಸ್ವಾಧೀನ ಪ್ರಕರಣಗಳು ಸೇರಿದಂತೆ ಸೂಕ್ತ ಕ್ರಿಮಿನಲ್ ಮತ್ತು ಸಿವಿಲ್ ಪ್ರಕರಣಗಳನ್ನು ಅಭಿಯಾನದಲ್ಲಿ ಇತ್ಯರ್ಥಪಡಿಸಲಾಗುವುದು ಎಂದು ತಿಳಿಸಿದರು.

ಕೆಲವು ಪ್ರಕರಣಗಳಲ್ಲಿ ಮಧ್ಯಸ್ಥಿಕೆವಹಿಸುವವರ ಪಾತ್ರ ಹಾಗೂ ಮಧ್ಯಸ್ಥಿಕೆಯು ಬಹಳ ಮುಖ್ಯವಾಗಿರುತ್ತದೆ. ಈ ಅಭಿಯಾನದಡಿ ಕಕ್ಷಿದಾರ ಹಾಗೂ ಎದುರುದಾರರ ಮಧ್ಯೆ ಸೂಕ್ತ ಸಂವಹನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಿದರು.

ಪರಸ್ಪರರು ತಮ್ಮ ಸಮ್ಮತಿ ಮತ್ತು ಒಪ್ಪಿಗೆ ಮೂಲಕ ವಿವಾದಗಳನ್ನು ಪರಿಹರಿಸಿಕೊಳ್ಳುವುದರಿಂದ ಉನ್ನತ ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿರುವುದಿಲ್ಲ. ಕಾನೂನು ಸೇರಿದಂತೆ ಇತರ ದೃಷ್ಟಿಕೋನಗಳಲ್ಲಿಯೂ ಪ್ರಕರಣಗಳನ್ನು ಅವಲೋಕಿಸಿ ಅಭಿಯಾನದಲ್ಲಿ ಇತ್ಯರ್ಥಪಡಿಸಲಾಗುತ್ತದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಜಿ. ಪ್ರಭು, ಜಿಲ್ಲಾ ಪಂಚಾಯಿತಿ ಸಿಇಒ ಡಾ. ವೈ.ನವೀನ್ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್  ಚೌಕ್ಸೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ. ಶಿಲ್ಪಾ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಭಿಲಾಷ್ ಇದ್ದರು.