ADVERTISEMENT

ರಾಸುಗಳ ಚಿಕಿತ್ಸೆಗಿಲ್ಲ ಸಿಬ್ಬಂದಿ

ಜಿಲ್ಲಾ ಪಶುಪಾಲನಾ ಇಲಾಖೆಯಲ್ಲಿ ಅರ್ಧದಷ್ಟು ಹುದ್ದೆಗಳು ಖಾಲಿ

ಡಿ.ಎಂ.ಕುರ್ಕೆ ಪ್ರಶಾಂತ
Published 21 ಮಾರ್ಚ್ 2021, 2:31 IST
Last Updated 21 ಮಾರ್ಚ್ 2021, 2:31 IST
ಚಿಕ್ಕಬಳ್ಳಾಪುರದಲ್ಲಿ ರಾಸುಗಳು
ಚಿಕ್ಕಬಳ್ಳಾಪುರದಲ್ಲಿ ರಾಸುಗಳು   

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಪ್ರಮುಖವಾಗಿ ಹಾಲು ಉತ್ಪಾದನೆ ಮಾಡುವ ಜಿಲ್ಲೆಗಳಲ್ಲಿ ಚಿಕ್ಕಬಳ್ಳಾಪುರ ಸಹ ಪ್ರಮುಖವಾದುದು. ಇಂತಿಪ್ಪ ಜಿಲ್ಲೆಯಲ್ಲಿ ಪಶುಪಾಲನಾ ಇಲಾಖೆಯನ್ನು ಸಿಬ್ಬಂದಿ ಕೊರತೆ ಬಾಧಿಸುತ್ತಿದೆ. ಪೂರ್ಣ ಪ್ರಮಾಣದಲ್ಲಿ ಹುದ್ದೆಗಳು ಭರ್ತಿಯಾಗದ ಕಾರಣ ಜಾನುವಾರುಗಳಿಗೆ, ಕುರಿ, ಮೇಕೆಗಳಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ.

ಉಪ ನಿರ್ದೇಶಕರಿಂದ ಹಿಡಿದು ‘ಡಿ’ ದರ್ಜೆ ಸಹಾಯಕರವರೆಗೆ ಜಿಲ್ಲೆಗೆ 459 ಹುದ್ದೆಗಳು ಮಂಜೂರಾಗಿವೆ. 224 ಹುದ್ದೆಗಳು ಮಾತ್ರ ಭರ್ತಿಯಾಗಿವೆ. 235 ಹುದ್ದೆಗಳು ಖಾಲಿ ಇವೆ. ಈ ಕಾರಣದಿಂದ ರಾಸುಗಳಿಗೆ ಚಿಕಿತ್ಸೆಗೆ ಸಮಸ್ಯೆ ಆಗಿದೆ. ಶಿಡ್ಲಘಟ್ಟ ತಾಲ್ಲೂಕು ಹೊರತುಪಡಿಸಿ ಎಲ್ಲ ತಾಲ್ಲೂಕುಗಳಲ್ಲಿಯೂ ಶೇ 50ರಷ್ಟು ಸಿಬ್ಬಂದಿ ಖಾಲಿ ಇದ್ದಾರೆ.

2019ರ ಜಾನುವಾರು ಗಣತಿ ಪ್ರಕಾರ ಜಿಲ್ಲೆಯಲ್ಲಿ 2,13,815 ಜಾನುವಾರುಗಳು, 26,397 ಎಮ್ಮೆಗಳು, 6,13,193 ಕುರಿಗಳು, 1,88,392 ಮೇಕೆಗಳು, 2,481 ಹಂದಿಗಳು ಇವೆ. ಇವುಗಳನ್ನು ನಂಬಿಕೊಂಡೇ ಜಿಲ್ಲೆಯಲ್ಲಿ ಸಾವಿರಾರು ಕುಟುಂಬಗಳು ಬದುಕು ಕಟ್ಟಿಕೊಂಡಿವೆ.

ADVERTISEMENT

ಇಷ್ಟೊಂದು ಪ್ರಮಾಣದ ಹುದ್ದೆಗಳು ಖಾಲಿ ಆಗಿರುವುದರಿಂದ ಪಶುಪಾಲನಾ ಇಲಾಖೆಯ ಸೇವೆ ಕುರಿಗಾಹಿಗಳಿಗೆ ಮತ್ತು ರೈತರಿಗೆ ಸಕಾಲದಲ್ಲಿ ದೊರೆಯುತ್ತಿಲ್ಲ. ಮತ್ತೊಂದು ಕಡೆ ಈಗ ಇರುವ ಸಿಬ್ಬಂದಿಯ ಕೆಲಸದ ಹೊರೆಯನ್ನು ಹೆಚ್ಚಿಸಿದೆ. ಜಿಲ್ಲೆಯ ಬಹುತೇಕ ಗ್ರಾಮೀಣ ಭಾಗಗಳಲ್ಲಿ ರೈತರು ಮತ್ತು ಕುರಿಗಾಹಿಗಳು ಚಿಕಿತ್ಸೆಗಾಗಿ ಪರದಾಡಬೇಕಾಗಿದೆ.

ಪ್ರತಿ ಆಸ್ಪತ್ರೆಗಳಿಗೆ ‘ಡಿ’ ದರ್ಜೆ ನೌಕರರು ಪ್ರಮುಖವಾಗಿ ಬೇಕು. ರಾಸುಗಳನ್ನು ರೈತರು ಆಸ್ಪತ್ರೆಗೆ ಕರೆತಂದಾಗ ಅವುಗಳ ಆರೈಕೆ, ಚಿಕಿತ್ಸೆ ನೀಡುವಾಗ ಸಹಾಯ ಮಾಡುವುದು, ಆಸ್ಪತ್ರೆಗಳ ನಿರ್ವಹಣೆ ಹೀಗೆ ನಾನಾ ರೀತಿಯಲ್ಲಿ ‘ಡಿ’ ದರ್ಜೆ ನೌಕರರು ಕೆಲಸ ಮಾಡುತ್ತಾರೆ. ಆದರೆ, ಜಿಲ್ಲೆಯಲ್ಲಿ 172 ಹುದ್ದೆಗಳಲ್ಲಿ 122 ‘ಡಿ’ ದರ್ಜೆ ನೌಕರರ ಹುದ್ದೆಗಳು ಖಾಲಿ ಇವೆ. ಎಷ್ಟೋ ಕಡೆ ಆಸ್ಪತ್ರೆಗಳ ಬಾಗಿಲು ತೆಗೆದು ಕಸ ಹೊಡೆಯಲು ಅಗತ್ಯದ ಸಿಬ್ಬಂದಿ ಇಲ್ಲ! ಇದು ಆಸ್ಪತ್ರೆಗಳ ನಿರ್ವಹಣೆಯ ಮೇಲೆ ಪರಿಣಾಮ ಸಹ
ಬೀರುತ್ತಿದೆ.

ಒಂದೆರೆಡು ಕುರಿ, ಮೇಕೆಗಳಿಗೆ ರೋಗಗಳು ತಗುಲಿದರೆ ಅವುಗಳನ್ನು ಆಸ್ಪತ್ರೆಗಳಿಗೆ ಕರೆತರಬಹುದು. ಆದರೆ 20, 30 ಕುರಿಗಳಿಗೆ ರೋಗ ತಗುಲಿದರೆ ಆಟೊಗಳಲ್ಲಿ ಆಸ್ಪತ್ರೆಗೆ ಕರೆತರಬೇಕು. ಇದು ಸಹಜವಾಗಿ ಕುರಿಗಾಹಿಗಳಿಗೆ ಹೊರೆ ಆಗುತ್ತದೆ. ಇದರ ಬದಲು ಸಂಚಾರಿ ಪಶು ಚಿಕಿತ್ಸಾಲಯಗಳನ್ನು ಹೆಚ್ಚು ಮಾಡಬೇಕು ಎನ್ನುವ ಆಗ್ರಹ ಕುರಿಗಾಹಿಗಳದ್ದು.

ಜಿಲ್ಲೆಯಲ್ಲಿ ಗೌರಿಬಿದನೂರು ತಾಲ್ಲೂಕಿನಲ್ಲಿ ಅತಿಹೆಚ್ಚು 48,455 ಜಾನುವಾರುಗಳಿವೆ. ಈ ತಾಲ್ಲೂಕು ಹೊರತುಪಡಿಸಿದರೆ ಚಿಂತಾಮಣಿ ನಂತರದ ಸ್ಥಾನದಲ್ಲಿದೆ. ಎಮ್ಮೆ, ಕುರಿ, ಮೇಕೆಗಳ ಸಂಖ್ಯೆಯು ಜಿಲ್ಲೆಯಲ್ಲಿ ಚಿಂತಾಮಣಿ ತಾಲ್ಲೂಕಿನಲ್ಲಿ ಅತ್ಯಂತ ಹೆಚ್ಚಿದೆ. ಆದರೆ, ಈ ತಾಲ್ಲೂಕಿನಲ್ಲಿಯೇ ಅರ್ಧದಷ್ಟು ಹುದ್ದೆಗಳು ಭರ್ತಿಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.