ADVERTISEMENT

ರಾಜ್ಯ ಬಜೆಟ್‌: ಚಿಂತಾಮಣಿ ಅಭಿವೃದ್ಧಿಗೆ ಸಿಗುವುದೇ ಅನುದಾನ?

ಪ್ರತಿವರ್ಷ ಬಜೆಟ್ ಮಂಡನೆ ಕೇವಲ ಯಾಂತ್ರಿಕ: ಸಾರ್ವಜನಿಕರ ಟೀಕೆ

ಎಂ.ರಾಮಕೃಷ್ಣಪ್ಪ
Published 18 ಫೆಬ್ರುವರಿ 2025, 7:19 IST
Last Updated 18 ಫೆಬ್ರುವರಿ 2025, 7:19 IST
ಚಿಂತಾಮಣಿಯ ಜೋಡಿರಸ್ತೆಯಲ್ಲಿ ನಿರುಪಯುಕ್ತವಾಗಿರುವ ಹಳೆ ತಾಲ್ಲೂಕು ಪಂಚಾಯಿತಿ ಕಟ್ಟಡ
ಚಿಂತಾಮಣಿಯ ಜೋಡಿರಸ್ತೆಯಲ್ಲಿ ನಿರುಪಯುಕ್ತವಾಗಿರುವ ಹಳೆ ತಾಲ್ಲೂಕು ಪಂಚಾಯಿತಿ ಕಟ್ಟಡ    

ಚಿಂತಾಮಣಿ: ಬಜೆಟ್‌ಗೆ ಕಳೆದ 10 ವರ್ಷಗಳ ಹಿಂದೆ ಇದ್ದ ಮಹತ್ವ ಈಗ ಉಳಿದಿಲ್ಲ. ಬಜೆಟ್‌ನಲ್ಲಿ ಸೇರ್ಪಡೆಯಾದ ಹಲವು ಯೋಜನೆಗಳು ಅನುಷ್ಠಾನವಾಗುವುದೇ ಇಲ್ಲ. ಪ್ರತಿವರ್ಷ ಬಜೆಟ್ ಮಂಡನೆ ಕೇವಲ ಯಾಂತ್ರಿಕವಾಗುತ್ತಿದೆ. ಈಗ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಸಾಮಾನ್ಯ ಆರೋಪವಾಗಿದೆ.

ಚಿಂತಾಮಣಿ ಆಂಧ್ರಪ್ರದೇಶದ ಗಡಿಭಾಗದಲ್ಲಿದೆ. ನಂಜುಂಡಪ್ಪ ವರದಿ ಅನ್ವಯ ಹಿಂದುಳಿದ ತಾಲ್ಲೂಕು ಹಣೆಪಟ್ಟಿಯಲ್ಲಿರುವ ಚಿಂತಾಮಣಿ ತಾಲ್ಲೂಕಿನ ಜನರು ಯಾವ ಯೋಜನೆಗಳು ಬಜೆಟ್‌ನಲ್ಲಿ ಸೇರ್ಪಡೆಯಾಗಬಹುದು, ವಿಶೇಷ ಅನುದಾನ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

ಜಿಲ್ಲೆಯಲ್ಲಿ ಚಿಂತಾಮಣಿ ದೊಡ್ಡ ಹಾಗೂ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ. ವ್ಯಾಪಾರ, ವಹಿವಾಟಿನಲ್ಲಿ ಜಿಲ್ಲಾ ಕೇಂದ್ರಕ್ಕಿಂತ ಮುಂದಿದೆ. ನಗರದ ಸಂಚಾರ ವ್ಯವಸ್ಥೆ ಉತ್ತಮಪಡಿಸಲು ಸಂಚಾರ ಠಾಣೆ ಅಗತ್ಯವಿದೆ. ಕಳೆದ 10ವರ್ಷಗಳಿಂದ ಪ್ರತಿವರ್ಷ ಇಲಾಖೆಯಿಂದ ಪ್ರಸ್ತಾವ ಸಲ್ಲಿಕೆಯಾಗುತ್ತಿದೆ. ಮಂಜೂರು ಮಾತ್ರ ಆಗದೆ ನನೆಗುದಿಗೆ ಬಿದ್ದಿದೆ. ಈ ಬಾರಿ ಬಜೆಟ್‌ನಲ್ಲಾದರೂ ಪರಿಹಾರ ಸಿಗುವುದೇ ಎಂಬುದು ನಾಗರಿಕರ ಪ್ರಶ್ನೆಯಾಗಿದೆ.

ADVERTISEMENT

ತಾಲ್ಲೂಕಿನಲ್ಲಿ ಹೆಚ್ಚಾಗಿ ಬೆಳೆಯುವ ಟೊಮೆಟೊ, ಮಾವು ಸಂಸ್ಕರಣಾ ಘಟಕಗಳನ್ನು ತೆರೆಯುವುದು, ನಗರದಲ್ಲಿ ಎಂ.ಜಿ.ರಸ್ತೆ ವಿಸ್ತರಣೆ, ಜನರಿಗೆ ಉದ್ಯೋಗ ಒದಗಿಸುವ ಕೈಗಾರಿಕಾ ವಲಯಗಳ ಸ್ಥಾಪನೆಯ ಬಹುವರ್ಷಗಳ ಬೇಡಿಕೆಗಳಿಗೆ ಸ್ಪಂದನೆ ಸಿಗುವುದೇ ಎಂಬ ಕಾತುರದಲ್ಲಿ ಜನರು ಇದ್ದಾರೆ.

ಬಯಲು ಸೀಮೆ ಕೆರೆಗಳಿಗೆ ನೀರು ಹರಿಸುವ ಕೆ.ಸಿ ಮತ್ತು ಎಚ್.ಎನ್ ವ್ಯಾಲಿ ಯೋಜನೆಗಳಲ್ಲಿ ತಾಲ್ಲೂಕು ವಂಚಿತವಾಗಿದೆ. ತಾರತಮ್ಯಕ್ಕೆ ಒಳಗಾಗಿರುವ ತಾಲ್ಲೂಕಿಗೆ ಎರಡು ಯೋಜನೆಗಳನ್ನು ಸಾಕಾರಗೊಳಿಸಿ ಕೆರೆಗಳನ್ನು ತುಂಬಿಸಬೇಕು ಎಂಬುದು ರೈತರ ಬೇಡಿಕೆ ಆಗಿದೆ.

ಚಿಂತಾಮಣಿ ಜನಸಂಖ್ಯೆ ಒಂದು ಲಕ್ಷಕ್ಕೆ ಏರಿಕೆ ಆಗಿದೆ. ಉತ್ತಮ ಶೈಕ್ಷಣಿಕ ಕೇಂದ್ರವಾಗಿದ್ದು ನೂರಾರು ಶಾಲಾ, ಕಾಲೇಜುಗಳಿವೆ. ವಾಣಿಜ್ಯ ಹಾಗೂ ಶಾಲಾ ವಾಹನಗಳು ಸೇರಿ ನಗರದಲ್ಲಿ ಸಂಚರಿಸುವ ವಾಹನಗಳ ಸಂಖ್ಯೆ ವಿಪರೀತ ಹೆಚ್ಚಾಗಿದೆ. ಸಂಚಾರ ಠಾಣೆ ಮಂಜೂರು ಮಾಡಿಸಬೇಕಿದೆ.

ಪ್ರಸಿದ್ಧ ಕೇಂದ್ರಗಳಾದ ಕೈವಾರ, ಮುರುಗಮಲ್ಲ ಪ್ರವಾಸಿ ಕೇಂದ್ರಗಳಲ್ಲಿ ಸೌಲಭ್ಯ ಕೊರತೆ ಇದೆ. ಕೈವಾರ ತಪೋವನ ಮುಚ್ಚುವ ಹಂತಕ್ಕೆ ಬಂದಿದೆ. ಪುರಾಣ ಪ್ರಸಿದ್ಧ ಅಮರನಾರೇಯಣಸ್ವಾಮಿ ದೇವಾಲಯ ಅಭಿವೃದ್ಧಿ ಕಂಡಿಲ್ಲ. ದೇವಾಲಯದ ಸುತ್ತಲೂ ಇದ್ದ ಕಟ್ಟಡಗಳು ಶಿಥಿಗೊಂಡಿವೆ. ಕನಿಷ್ಠ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲವಾಗಿದೆ. ಕೈವಾರದಲ್ಲಿ ಧಾರ್ಮಿಕ ಪ್ರವಾಸೋದ್ಯಮ ಪ್ರಗತಿಗೆ ವಿಫುಲ ಅವಕಾಶವಿದೆ. ಮುರುಗಮಲ್ಲ ದರ್ಗಾ ಅಭಿವೃದ್ಧಿ ಯೋಜನೆಗೆ ನೀಲನಕ್ಷೆ, ಅಂದಾಜುಪಟ್ಟಿ ತಯಾರಿಸಿ ಸಲ್ಲಿಸಲಾಗಿದೆ. ಈ ಬಾರಿಯಾದರೂ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗುವುದೇ ಎಂಬ ನಿರೀಕ್ಷೆ ಜನರಲ್ಲಿದೆ.

ಈ ಭಾಗದಲ್ಲಿ ಟೊಮೆಟೊ, ಮಾವು ಹೆಚ್ಚಾಗಿ ಬೆಳೆಯುತ್ತಾರೆ. ಬೆಲೆ ಕುಸಿತದಿಂದ ರೈತರು ಫಸಲನ್ನು ರಸ್ತೆಗೆ ಸುರಿದು ಪ್ರತಿಭಟಿಸುವುದು ಸಾಮಾನ್ಯವಾಗಿದೆ. ಈ ಸಮಸ್ಯೆಗೆ ಪರಿಹಾರ ಕಲ್ಪಿಸಲು ಜ್ಯೂಸ್, ಉಪ್ಪಿಕಾಯಿ ಮತ್ತಿತರ ಉತ್ಪನ್ನಗಳನ್ನು ತಯಾರಿಸುವ ಸಂಸ್ಕರಣ ಘಟಕಗಳನ್ನು ಸ್ಥಾಪಿಸಬೇಕು ಎಂಬ ಕೂಗು ವರ್ಷಗಳಿಂದ ಕೇಳಿ ಬಂದಿದೆ. ಇದು ಕೂಡ ಸಾಕಾರಗೊಂಡಿಲ್ಲ.

ಮಸ್ತೇನಹಳ್ಳಿ, ಸಿದ್ದೇಪಲ್ಲಿ ಕ್ರಾಸ್ ನಲ್ಲಿ ನನೆಗುದಿಗೆ ಬಿದ್ದಿರುವ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಪಡಿಸಿ ಯುವಜನರಿಗೆ ಉದ್ಯೋಗ ಸೃಷ್ಟಿಸಬೇಕಿದೆ. ಚಿಂತಾಮಣಿಗೆ ನೀರು ಪೂರೈಸಲು ರೂಪಿಸಿರುವ ಅರಸೀಕೆರೆ ಭಕ್ತರಹಳ್ಳಿ ಕೆರೆ ವಿಸ್ತರಣೆ, ಕನಂಪಲ್ಲಿ ಕೆರೆ ನೀರು ಸಂಗ್ರಹ ಹೆಚ್ಚಳ, ನೆಕ್ಕುಂದಿ ಕೆರೆ ಅಭಿವೃದ್ಧಿಗೆ ಸಚಿವರು ಹೆಚ್ಚಿನ ಅನುದಾನದ ಬೇಡಿಕೆಗೆ ಪ್ರಸ್ತಾವ ಸಲ್ಲಿಸಿದ್ದಾರೆ. 

ನಗರದ ರಾಮಕುಂಟೆ ಪ್ರದೇಶದಲ್ಲಿ ಟ್ರಕ್ ಟರ್ಮಿನಲ್, ಖಾಸಗಿ ಬಸ್ ನಿಲ್ದಾಣ, ಜೋಡಿ ರಸ್ತೆಯಲ್ಲಿ ನಿರುಪಯುಕ್ತವಾಗಿರುವ ಹಳೆ ತಾಲ್ಲೂಕು ಪಂಚಾಯಿತಿ ಕಟ್ಟಡದ ಸದುಪಯೋಗಕ್ಕೆ ಅನುದಾನ, ಅಂಗನವಾಡಿ ಮತ್ತು ಶೈಕ್ಷಣಿಕ ವಲಯದ ಶಾಲಾ ಕಟ್ಟಡಗಳಿಗೆ ಹೆಚ್ಚಿನ ಅನುದಾನ ನಿರೀಕ್ಷೆಯಲ್ಲಿ ತಾಲ್ಲೂಕಿನ ಜನರು ಇದ್ದಾರೆ.

ಮಸ್ತೇನಹಳ್ಳಿ ಮತ್ತು ಸಿದ್ದೇಪಲ್ಲಿ ಕೈಗಾರಿಕಾ ಪ್ರಾಂಗಣಗಳು ಅಭಿವೃದ್ಧಿಯಾದರೆ ಯುವಜನರಿಗೆ ಅನುಕೂಲವಾಗಲಿದೆ.
ಸಿ.ಎ.ರಮೇಶ್, ಚಿಂತಾಮಣಿ
ಕಳೆದ 10ವರ್ಷಗಳಿಂದ ಕೆ.ಸಿ ಮತ್ತು ಎಚ್.ಎನ್ ವ್ಯಾಲಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಲ್ಲಿ ತಾಲ್ಲೂಕಿಗೆ ತಾರತಮ್ಯವಾಗಿದೆ. ಅನುಷ್ಠಾನಗೊಳಿಸಲು ಬಜೆಟ್‌ನಲ್ಲಿ ಅನುದಾನ ಮಂಜೂರು ಮಾಡಬೇಕು.
ರಘುನಾಥರೆಡ್ಡಿ, ರೈತ ಮುಖಂಡ, ಚಿಂತಾಮಣಿ
ಗ್ರಾಮೀಣ ಮಹಿಳೆಯರು ಆರ್ಥಿಕವಾಗಿ ಸಮಾಜದ ಮುಖ್ಯವಾಹಿನಿಗೆ ತರಲು ಗಾರ್ಮೆಮೆಂಟ್ ಉದ್ಯಮ ಪ್ರಾರಂಭಿಸಬೇಕು. ಗುಡಿ ಕೈಗಾರಿಕೆಗಳನ್ನು ಸ್ಥಾಪಿಸಲು ಬಜೆಟ್‌ನಲ್ಲಿ ಅನುದಾನ ನೀಡಬೇಕು.
ಲಕ್ಷ್ಮಿನರಸಮ್ಮ, ಕಾರ್ಯದರ್ಶಿ ಅಂಗನವಾಡಿ ನೌಕರರ ಸಂಘ
ಬಯಲುಸೀಮೆ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಬೇಕು. ದುಡಿಯುವ ಯುವ ಜನರಿಗೆ ಉದ್ಯೋಗ ನೀಡುವ ಕೈಗಾರಿಕೆಗಳನ್ನು ಆರಂಭಿಸಬೇಕು
ಎಂ.ಆರ್.ಲೋಕೇಶ್, ಕರವೇ, ಜಿಲ್ಲಾ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.