ADVERTISEMENT

ಬಾಗೇಪಲ್ಲಿ: ಬಾಗೇಪಲ್ಲಿಯಲ್ಲಿ ಬೀದಿನಾಯಿಗಳ ಉಪಟಳ

ಅಧಿಕಾರಿಗಳ ಜಾಣಕುಡುತನಕ್ಕೆ ಸಾರ್ವಜನಿಕರ ಅಕ್ರೋಶ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2024, 15:36 IST
Last Updated 26 ಡಿಸೆಂಬರ್ 2024, 15:36 IST
ಬಾಗೇಪಲ್ಲಿ ಡಿವಿಜಿ ಮುಖ್ಯರಸ್ತೆಯಲ್ಲಿ ವಾಹನ ಸವಾರರನ್ನು ಅಡ್ಡಗಟ್ಟಿರುವ ಬೀದಿನಾಯಿಗಳು
ಬಾಗೇಪಲ್ಲಿ ಡಿವಿಜಿ ಮುಖ್ಯರಸ್ತೆಯಲ್ಲಿ ವಾಹನ ಸವಾರರನ್ನು ಅಡ್ಡಗಟ್ಟಿರುವ ಬೀದಿನಾಯಿಗಳು   

ಬಾಗೇಪಲ್ಲಿ: ಪಟ್ಟಣದ ಡಿವಿಜಿ ಮುಖ್ಯರಸ್ತೆ, ಶಾಲಾ, ಕಾಲೇಜು ಹಾಗೂ ಬೀದಿಬೀದಿಗಳಲ್ಲಿ ಬೀದಿನಾಯಿಗಳ ಹಿಂಡು ಹೆಚ್ಚಾಗಿದ್ದು, ಮಕ್ಕಳು, ಮಹಿಳೆಯರು ರಸ್ತೆಗಳಲ್ಲಿ ಸಂಚರಿಸಲು ಭಯಪಡುವಂತಾಗಿದೆ. ಬೈಕ್‌–ಸ್ಕೂಟರ್‌ಗಳ ಸವಾರರ ಬೆನ್ನು ಹತ್ತಿ ಓಡುವ, ಕೆಲವೊಮ್ಮೆ ನಡೆದುಹೋಗುವವರನ್ನೂ ಅಟ್ಟಿಸಿಕೊಂಡು ಹೋಗುವ ಬೀದಿನಾಯಿಗಳನ್ನು ಕಂಡೂ ಕಾಣದಂತೆ ಇರುವ ಪುರಸಭೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪಟ್ಟಣದಲ್ಲಿ ಮುಖ್ಯರಸ್ತೆಯಲ್ಲಿ ಸರ್ಕಾರಿ ಕಿರಿಯ, ಹಿರಿಯ, ಪ್ರೌಢಶಾಲೆಗಳು ಇವೆ. 23 ವಾರ್ಡ್‍ಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಇವೆ. ಈ ಬೀದಿಗಳಲ್ಲೆಲ್ಲಾ ನಾಯಿಗಳ ಹಾವಳಿ ಹೆಚ್ಚಾಗಿದೆ. 10 ರಿಂದ 20 ಬೀದಿನಾಯಿಗಳು ಸೇರಿ ಹಿಂಡುಹಿಂಡಾಗಿ ಬೀದಿ–ರಸ್ತೆಗಳು, ಫುಟ್‌ಪಾತ್‌ ಮೇಲೆಲ್ಲಾ ಓಡಾಡುತ್ತವೆ. ಕೆಲವು ಹಿಂಡುಗಳಂತೂ ಮುಖ್ಯರಸ್ತೆಯ ವಿಭಜಕದ ಮೇಲೆಯೇ ಬೀಡುಬಿಟ್ಟಿವೆ. ಶಾಲಾ ಮಕ್ಕಳು ರಸ್ತೆ ದಾಟುವಾಗ, ವಿಭಜಕದಲ್ಲಿ ಸಂಚರಿಸಲು ಹೋದರೆ ಬೊಗಳುತ್ತವೆ, ಓಡಿಸಿಕೊಂಡು ಬರುತ್ತವೆ. ಕಾಲಿಗೆ ಕಚ್ಚಲು ಬರುತ್ತವೆ. 

ಸರ್ಕಾರಿ ಕಚೇರಿಗಳ, ಶಾಲಾ ಕಾಲೇಜುಗಳ, ಮನೆಗಳ ಮುಂದೆ ಬೀದಿನಾಯಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಜನರ ಹಾಗೂ ವಾಹನ ಸವಾರರ ಮೇಲೆ ಏಕಾಏಕಿ ದಾಳಿ ಮಾಡುತ್ತಿವೆ. ಪ್ರತಿದಿನ 4 ರಿಂದ 5 ಮಂದಿ ಸರ್ಕಾರಿ ಆಸ್ಪತ್ರೆಯಲ್ಲಿ ವಾಹನ ಸವಾರರು, ಮಕ್ಕಳು ಬೀದಿನಾಯಿಗಳ ಹಾವಳಿಗೆ ತುತ್ತಾಗಿ ಚಿಕಿತ್ಸೆಗೆ ಆಗಮಿಸುತ್ತಿದ್ದಾರೆ. ದ್ವಿಚಕ್ರ ವಾಹನಗಳಿಗೆ, ಕಾರು, ಆಟೋಗಳಿಗೆ ಏಕಾಏಕಿ ಅಡ್ಡ ಬರುವ ನಾಯಿಗಳು ಅಪಘಾತಕ್ಕೂ ಕಾರಣವಾಗುತ್ತಿವೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಪೊಲೀಸರಿಗೂ ಬೀದಿನಾಯಿಗಳ ಕಾಟ ತಪ್ಪಿದ್ದಲ್ಲ. 

ADVERTISEMENT

‘ಪಟ್ಟಣದ ಮುಖ್ಯರಸ್ತೆಯ ಪಕ್ಕದಲ್ಲಿ ಬಾಲಕರ ಸರ್ಕಾರಿ ಶಾಲೆ ಇದೆ. ಮಕ್ಕಳು ರಸ್ತೆಯ ಹಾಗೂ ವಿಭಜಕದ ಮೇಲೆ ಓಡಾಡುತ್ತಾರೆ. ಅಲ್ಲೆಲ್ಲಾ ಬೀದಿನಾಯಿಗಳು ಬೀಡುಬಿಟ್ಟಿದ್ದು, ಮಕ್ಕಳ ಮೇಲೆ ಏಕಾಏಕಿ ದಾಳಿ ಮಾಡುತ್ತಿದೆ. ಇದರಿಂದ ಮಕ್ಕಳಲ್ಲಿ ಭಯ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕಬೇಕಾದ ಪುರಸಭೆ ಅಧಿಕಾರಿಗಳು ಜಾಣಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಎ.ಬಾಬಾಜಾನ್ ತಿಳಿಸಿದರು.

ಅಧಿಕಾರಿಗಳು ಕೂಡಲೇ ಬೀದಿ ನಾಯಿಗಳನ್ನು ಬೇರೆ ಕಡೆ ಸ್ಥಳಾಂತರಿಸದೇ ಇದ್ದಲ್ಲಿ ಸಾರ್ವಜನಿಕರೆಲ್ಲಾ ಸೇರಿ ಹೋರಾಟ ಮಾಡಬೇಕಾಗುತ್ತದೆ ಎನ್ನುತ್ತಾರೆ ಪಟ್ಟಣದ ನಿವೃತ್ತ ಶಿಕ್ಷಕ ಪಿ.ಜಿ.ಶಿವಶಂಕರಾಚಾರಿ.

ಡಿವಿಜಿ ಮುಖ್ಯರಸ್ತೆ ವಿಭಜಕದ ಮೇಲೆ ಬೀಡುಬಿಟ್ಟಿರುವ ನಾಯಿಗಳ ನಡುವೆ ಅಳುಕುತ್ತಲೇ ರಸ್ತೆ ದಾಟುವ ವಿದ್ಯಾರ್ಥಿಗಳು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.