ADVERTISEMENT

ಶಿಡ್ಲಘಟ್ಟ | ಬೀದಿ ನಾಯಿ ದಾಳಿ: ಬಾಲಕನಿಗೆ ತೀವ್ರ ಗಾಯ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 5:16 IST
Last Updated 20 ಆಗಸ್ಟ್ 2025, 5:16 IST
ಶಿಡ್ಲಘಟ್ಟದಲ್ಲಿ ಪೌರಾಯುಕ್ತೆ ಜಿ.ಅಮೃತ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಬೀದಿ ನಾಯಿ ದಾಳಿಯಿಂದ ಗಾಯಗೊಂಡ ಬಾಲಕನ ಆರೋಗ್ಯ ವಿಚಾರಿಸಿದರು
ಶಿಡ್ಲಘಟ್ಟದಲ್ಲಿ ಪೌರಾಯುಕ್ತೆ ಜಿ.ಅಮೃತ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಬೀದಿ ನಾಯಿ ದಾಳಿಯಿಂದ ಗಾಯಗೊಂಡ ಬಾಲಕನ ಆರೋಗ್ಯ ವಿಚಾರಿಸಿದರು   

ಶಿಡ್ಲಘಟ್ಟ: ನಗರದ ನೆಹರು ಕ್ರೀಡಾಂಗಣದಲ್ಲಿ ಬೀದಿ ನಾಯಿಗಳು ದಾಳಿ ನಡೆಸಿದ್ದರಿಂದಾಗಿ 13 ವರ್ಷದ ಬಾಲಕನಿಗೆ ತೀವ್ರ ಗಾಯಗಳಾಗಿವೆ. ಚರಣ್ (13) ಎಂಬ ಬಾಲಕ ಸೋಮವಾರ ಕ್ರೀಡಾಂಗಣದಲ್ಲಿ ಆಟವಾಡುತ್ತಿದ್ದಾಗ ಇದ್ದಕ್ಕಿದ್ದಂತೆ 15ಕ್ಕೂ ಹೆಚ್ಚು ಬೀದಿ ನಾಯಿಗಳ ಹಿಂಡು ಆತನ ಮೇಲೆ ದಾಳಿ ಮಾಡಿ ಕಚ್ಚಿದೆ.

ಆಟದಲ್ಲಿ ತಲ್ಲೀನನಾಗಿದ್ದ ಬಾಲಕನ ಮೇಲೆ ಏಕಾಏಕಿ ದಾಳಿ ಮಾಡಿದ ನಾಯಿಗಳ ಹಿಂಡು, ಚರಣ್‌ನ ಕಾಲು, ಕೈ ಮತ್ತು ಬೆನ್ನಿನ ಭಾಗಗಳಲ್ಲಿ ಆಳವಾದ ಗಾಯ ಮಾಡಿದೆ. ಬಾಲಕನ ಕಿರುಚಾಟ ಕೇಳಿ ಕ್ರೀಡಾಂಗಣದಲ್ಲಿ ಆಡುತ್ತಿದ್ದ ಯುವಕರು ಧಾವಿಸಿ ನಾಯಿಗಳನ್ನು ಓಡಿಸಿ ಬಾಲಕನನ್ನು ರಕ್ಷಿಸಿದ್ದಾರೆ. ತಕ್ಷಣವೇ ಗಾಯಾಳುವನ್ನು ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗೆ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ.

ಘಟನೆಯ ಮಾಹಿತಿ ತಿಳಿದ ತಕ್ಷಣ ಪೌರಾಯುಕ್ತೆ ಜಿ. ಅಮೃತ ಆಸ್ಪತ್ರೆಗೆ ಭೇಟಿ ನೀಡಿ ಬಾಲಕನ ಆರೋಗ್ಯ ವಿಚಾರಿಸಿದರು. ಬಳಿಕ ಮಾತನಾಡಿದ ಅವರು, ನಗರದಲ್ಲಿ ನಿರ್ಬಂಧವಿಲ್ಲದೆ ಹೆಚ್ಚುತ್ತಿರುವ ಬೀದಿ ನಾಯಿಗಳ ನಿಯಂತ್ರಣಕ್ಕೆ ಈಗಾಗಲೇ ಟೆಂಡರ್ ಕರೆದಿದ್ದು, ಅತೀ ಶೀಘ್ರದಲ್ಲೇ ಕ್ರಮ ಜರುಗಿಸಲಾಗುತ್ತದೆ. ಜೊತೆಗೆ ಮಾಂಸಾಹಾರಿ ಅಂಗಡಿಗಳನ್ನು ಒಂದೇ ಪ್ರದೇಶಕ್ಕೆ ಒಗ್ಗೂಡಿಸಲು ಶಾಸಕರ ಜೊತೆ ಚರ್ಚೆ ನಡೆಯಲಿದೆ ಎಂದರು.

ADVERTISEMENT

ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೊಸದಲ್ಲ. ಕೆಲ ತಿಂಗಳಲ್ಲೇ ಹಲವರು ಗಾಯಗೊಂಡಿದ್ದಾರೆ. ಆದರೂ ಸಮಸ್ಯೆ ಬಗೆಹರಿಯದೇ ಇರುವುದರಿಂದ ಸಾರ್ವಜನಿಕರಲ್ಲಿ ಭೀತಿ ಹೆಚ್ಚಾಗಿದೆ. ಸ್ಥಳೀಯರು ಮಾತನಾಡಿ, ಅಧಿಕಾರಿಗಳು ಮಾತಿನ ಭರವಸೆ ನೀಡುವುದರಲ್ಲೇ ಸೀಮಿತವಾಗಿದ್ದಾರೆ. ಯಾವುದೇ ಸ್ಪಷ್ಟ ಕ್ರಮ ಗೋಚರಿಸುತ್ತಿಲ್ಲ. ಇದೇ ರೀತಿ ಮುಂದುವರೆದರೆ ಹೋರಾಟ ನಡೆಸುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದ್ದಾರೆ.

ಸ್ಥಳೀಯರು ನಗರಸಭೆಯ ನಿರ್ಲಕ್ಷ್ಯ, ನಾಯಿಗಳಿಗೆ ಆಹಾರ ಒದಗಿಸುವ ಮಾಂಸ ಅಂಗಡಿಗಳ ನಿರ್ಬಂಧವಿಲ್ಲದಿರುವುದು ಮತ್ತು ನಾಯಿಗಳಿಗೆ ಸಮರ್ಪಕ ಶಸ್ತ್ರಚಿಕಿತ್ಸಾ ಕಾರ್ಯಕ್ರಮಗಳ ಕೊರತೆ ಪ್ರಮುಖ ಕಾರಣವೆಂದು ಆರೋಪಿಸುತ್ತಿದ್ದಾರೆ. ಈ ಘಟನೆ ಬಳಿಕ ನಗರದಲ್ಲಿ ಒಂದೆಡೆ ಭೀತಿ, ಆತಂಕ, ಮತ್ತೊಂದೆಡೆ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.