
ಬಾಗೇಪಲ್ಲಿ: ಪಟ್ಟಣದ ಡಿವಿಜಿ ಮುಖ್ಯರಸ್ತೆಯಲ್ಲಿರುವ ವಿದ್ಯುತ್ ಕಂಬಗಳು ಹೆಸರಿಗಷ್ಟೇ ಎಂಬಂತಾಗಿದೆ. ಯಾಕೆಂದರೆ, ಈ ವಿದ್ಯುತ್ ಕಂಬಗಳಲ್ಲಿ ದೀಪಗಳೇ ಉರಿಯುವುದಿಲ್ಲ. ಇದರಿಂದಾಗಿ ರಾತ್ರಿ ಹೊತ್ತಿನಲ್ಲಿ ಈ ರಸ್ತೆಯಲ್ಲಿ ವಾಹನ ಸವಾರರು ಮತ್ತು ಪಾದಚಾರಿಗಳು ಕತ್ತಲಲ್ಲೇ ಸಂಚರಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ.
ಪುರಸಭೆ ಅಧಿಕಾರಿಗಳು ಮತ್ತು ಆಡಳಿತ ಮಂಡಳಿಯವರು ಗುಣಮಟ್ಟದ ವಿದ್ಯುತ್ ಬೀದಿದೀಪಗಳನ್ನು ಅಳವಡಿಸದೆ ನಿರ್ಲಕ್ಷ್ಯತೆ ವಹಿಸಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಪಟ್ಟಣದ ಸಿವಿಲ್ ನ್ಯಾಯಾಲಯದಿಂದ ನ್ಯಾಷನಲ್ ಕಾಲೇಜಿನವರೆಗಿನ ಮುಖ್ಯರಸ್ತೆಯಲ್ಲಿ ಲಾರಿ, ಟೆಂಪೊ, ಆಟೊ, ಮಿನಿ ಬಸ್ ಸೇರಿದಂತೆ ದ್ವಿಚಕ್ರ ವಾಹನಗಳು ಸಂಚರಿಸುತ್ತವೆ. ಪಾದಚಾರಿಗಳು ಮತ್ತು ವಾಯುವಿಹಾರಿಗಳು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಈ ರಸ್ತೆಯ ವಿದ್ಯುತ್ ಕಂಬಗಳಲ್ಲಿ ಗುಣಮಟ್ಟದ ದೀಪಗಳನ್ನು ಅಳವಡಿಸಿಲ್ಲ. ಕೆಲವು ಕಡೆಗಳಲ್ಲಿ ಬಲ್ಬ್‌ಗಳೇ ಅಳವಡಿಸಲಾಗಿಲ್ಲ. ಇದರಿಂದಾಗಿ ಮುಖ್ಯರಸ್ತೆಯು ರಾತ್ರಿ ಹೊತ್ತಿನಲ್ಲಿ ಕಗ್ಗತ್ತಲ ಕಾರ್ಮೋಡ ಕವಿದಿದೆ.
ಮುಖ್ಯರಸ್ತೆಯಲ್ಲಿ ಡಾ.ಎಚ್.ಎನ್. ವೃತ್ತ, ಡಿಸಿಸಿ ಬ್ಯಾಂಕ್ ಮುಂದೆ ಹಾಗೂ ಸರ್ಕಾರಿ ಬಸ್ ನಿಲ್ದಾಣದ ಮುಂದೆ ಹೈಮಾಸ್ಟ್ ಕಂಬಗಳನ್ನು ಹಾಕಲಾಗಿದೆ. ಆದರೆ ಕಂಬಗಳಿಗೆ ದೀಪಗಳನ್ನೇ ಹಾಕಿಲ್ಲ. ಇಲ್ಲಿ ಅಳವಡಿಸಲಾಗಿರುವ ಹೈಮಾಸ್ಟ್ ಹೆಸರಿಗಷ್ಟೇ ಎಂಬಂತಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ವಿದ್ಯುತ್ ಬೀದಿದೀಪಗಳ ನಿರ್ವಹಣೆ, ದುರಸ್ತಿಗಾಗಿ ಪುರಸಭೆಯಿಂದ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಗುತ್ತಿಗೆದಾರರಿಗೆ ನೀಡಲಾಗಿದೆ. ಆದರೆ, ರಸ್ತೆಗಳು ಮಾತ್ರ ಕತ್ತಲೆಯಲ್ಲಿವೆ ಎಂದು ಪುರಸಭೆ ಮಾಜಿ ಸದಸ್ಯ ಜಿ. ಕೃಷ್ಣಪ್ಪ ಅಸಮಾಧಾನ ವ್ಯಕ್ತಪಡಿಸಿದರು.
‘ಬೆಳಕೇ ಇಲ್ಲದ ಮುಖ್ಯರಸ್ತೆಯಲ್ಲಿ ಸಂಚರಿಸಲು ಭಯವಾಗುತ್ತದೆ. ಕಗ್ಗತ್ತಲಿನಿಂದಾಗಿ ಜನರ ಓಡಾಟಕ್ಕೆ ತೊಂದರೆಯಾಗಿದೆ. ವಾಯುವಿಹಾರ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ಪಟ್ಟಣದ ಒಂದನೇ ವಾರ್ಡ್ ನಿವಾಸಿ ನಿರ್ಮಲಮ್ಮ ತಿಳಿಸಿದರು.
ಬೀದಿದೀಪಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಎಂ. ಶ್ರೀನಿವಾಸ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪುರಸಭೆ ಅಧಿಕಾರಿಗಳು ಆಡಳಿತ ಮಂಡಳಿಯವರು ಕೂಡಲೇ ಗುಣಮಟ್ಟದ ದೀಪಗಳನ್ನು ಹಾಕಿಸಬೇಕು. ಹೈಮಾಸ್ಟ್ ದೀಪಗಳಲ್ಲಿ ಬಲ್ಬ್ ಅಳವಡಿಸಬೇಕು. ಇಲ್ಲವಾದರೆ ಪುರಸಭೆ ಮುಂದೆ ಹೋರಾಟ ಮಾಡಲಾಗುವುದು.– ಜಬೀವುಲ್ಲಾ, ಕನ್ನಡಪರ ಸಂಘಟನೆ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.