ADVERTISEMENT

ಅನವಶ್ಯಕ ಅಲೆದರೆ ಕಠಿಣ ಕ್ರಮ

ಸರ್ಕಾರಿ ಆದೇಶ ಉಲ್ಲಂಘಿಸಿದರೆ ಕೇಸ್‌ ದಾಖಲು

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2020, 15:30 IST
Last Updated 29 ಮಾರ್ಚ್ 2020, 15:30 IST
ಚಿಕ್ಕಬಳ್ಳಾಪುರದಲ್ಲಿ ಬಂದೋಬಸ್ತ್‌ನಲ್ಲಿದ್ದ ಪೊಲೀಸರು ಬೈಕ್‌ ಸವಾರನೊಬ್ಬನಿಗೆ ಮನೆಯಿಂದ ಹೊರಬರದಂತೆ ಎಚ್ಚರಿಕೆ ನೀಡಿದರು.
ಚಿಕ್ಕಬಳ್ಳಾಪುರದಲ್ಲಿ ಬಂದೋಬಸ್ತ್‌ನಲ್ಲಿದ್ದ ಪೊಲೀಸರು ಬೈಕ್‌ ಸವಾರನೊಬ್ಬನಿಗೆ ಮನೆಯಿಂದ ಹೊರಬರದಂತೆ ಎಚ್ಚರಿಕೆ ನೀಡಿದರು.   

ಚಿಕ್ಕಬಳ್ಳಾಪುರ: ಕೊರೊನಾ ವೈರಸ್ ಹರಡುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಸರ್ಕಾರದ ಆದೇಶದಂತೆ ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಸಾರ್ವಜನಿಕರು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಮನೆಯಲ್ಲಿದ್ದು ಸೋಂಕು ಹರಡುವುದನ್ನು ತಡೆಗಟ್ಟಬೇಕು. ಅನಾವಶ್ಯಕವಾಗಿ ಮನೆಯಿಂದ ಹೊರಬಂದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಪೊಲೀಸ್‌ ಇಲಾಖೆ ಎಚ್ಚರಿಕೆ ನೀಡಿದೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ‘ಕೊರೊನಾ ವೈರಸ್‍ನಿಂದ ತಪ್ಪಿಸಿಕೊಳ್ಳಲು ಅಂತರ ಕಾಯ್ದುಕೊಳ್ಳುವುದು ಮತ್ತು ಮನೆಯಲ್ಲಿರುವುದು ಒಂದೇ ಸದ್ಯದ ಪರಿಹಾರವಾಗಿದೆ. ಸರ್ಕಾರದ ನಿರ್ಬಂಧಗಳನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿ, ಸಂಸ್ಥೆ, ಸಂಘಟನೆಯ ವಿರುದ್ಧ ಸಾಂಕ್ರಾಮಿಕ ರೋಗಗಳ ಅಧಿನಿಯಮ, ವಿಕೋಪ ನಿರ್ವಹಣಾ ಅಧಿನಿಯಮ, ಭಾರತೀಯ ದಂಡ ಸಂಹಿತೆ 188ನೇ ಪ್ರಕರಣ ಮತ್ತು ಇತರ ಸಂಬಂಧಪಟ್ಟ ಸಂಹಿತೆಗಳು, ಅಧಿನಿಯಮಗಳ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ತಿಳಿಸಿದರು.

‘ಕೊರೊನಾ ವೈರಸ್‌ ನಿಯಂತ್ರಿಸಲು ಪ್ರತಿಯೊಬ್ಬ ನಾಗರಿಕರು ಸಹಕರಿಸಬೇಕು. ಆದೇಶವನ್ನು ಉಲ್ಲಂಘಿಸಿದರೆ ಐಪಿಸಿ ಸೆಕ್ಷನ್ 188 (ಸರ್ಕಾರಿ ಅಧಿಕಾರಿಯ ಆದೇಶದ ಉಲ್ಲಂಘನೆ), ಐಪಿಸಿ ಸೆಕ್ಷನ್ 269 (ಜೀವಕ್ಕೆ ಅಪಾಯಕಾರಿಯಾದ ರೋಗವನ್ನು ನಿರ್ಲಕ್ಷ್ಯದಿಂದ ಹರಡುವುದು), ಐಪಿಸಿ ಸೆಕ್ಷನ್ 271 (ಕ್ವಾರಂಟೈನ್‌ ನಿಯಮಕ್ಕೆ ಅವಿಧೇಯತೆ) ಅಡಿ ಕೇಸ್ ದಾಖಲಿಸಿ ಬಂಧಿಸಲಾಗುತ್ತದೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.