ADVERTISEMENT

ಬಾಗೇಪಲ್ಲಿ | ಈಜಲು ಹೋದ 3 ವಿದ್ಯಾರ್ಥಿಗಳು ಸಾವು

ಆಚೆಪಲ್ಲಿ ಗ್ರಾಮದ ಕೆರೆಯಲ್ಲಿ ದುರ್ಘಟನೆ l ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 6:06 IST
Last Updated 4 ಅಕ್ಟೋಬರ್ 2025, 6:06 IST
ಬಾಗೇಪಲ್ಲಿ ತಾಲ್ಲೂಕಿನ ಆಚೇಪಲ್ಲಿ ಗ್ರಾಮದ ಕೆರೆಯಲ್ಲಿ ಮುಳುಗಿ ಮೂವರು ಬಾಲಕರು ಮೃತಪಟ್ಟಿರುವ ಘಟನೆ ತಿಳಿದು ಕೆರೆಯ ಬಳಿಗೆ ಬಂದ ಗ್ರಾಮಸ್ಥರು
ಬಾಗೇಪಲ್ಲಿ ತಾಲ್ಲೂಕಿನ ಆಚೇಪಲ್ಲಿ ಗ್ರಾಮದ ಕೆರೆಯಲ್ಲಿ ಮುಳುಗಿ ಮೂವರು ಬಾಲಕರು ಮೃತಪಟ್ಟಿರುವ ಘಟನೆ ತಿಳಿದು ಕೆರೆಯ ಬಳಿಗೆ ಬಂದ ಗ್ರಾಮಸ್ಥರು   

ಬಾಗೇಪಲ್ಲಿ: ತಾಲ್ಲೂಕಿನ ಯಲ್ಲಂಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಚೇಪಲ್ಲಿ ಗ್ರಾಮದಲ್ಲಿ ಈಜಾಡಲು ಹೋಗಿದ್ದ ಮೂವರು ವಿದ್ಯಾರ್ಥಿಗಳು ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ಈ ಸಂಬಂಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಆಚೇಪಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಾದ ವಿಷ್ಣುವರ್ಧನ್ (14) ಮತ್ತು ನಿಹಾಲ್‍ರಾಜ್ (12) ಹಾಗೂ ವಿವೇಕಾನಂದ ಪಿಯು ಕಾಲೇಜು ವಿದ್ಯಾರ್ಥಿ ಹರ್ಷವರ್ಧನ್ (16) ಮೃತಪಟ್ಟವರು. 

ಶಾಲಾ–ಕಾಲೇಜುಗಳಿಗೆ ದಸರಾ ರಜೆ ಇರುವ ಕಾರಣ ಗ್ರಾಮದ ಈ ಮೂವರು ವಿದ್ಯಾರ್ಥಿಗಳು ಕೆರೆಯಲ್ಲಿ ಈಜಾಡಲು ಹೋಗಿದ್ದರು. ಕೆರೆಗೆ ಇಳಿದ ವಿದ್ಯಾರ್ಥಿಗಳು ಕೆಮ್ಮಣ್ಣಿಗೆ ಸಿಲುಕಿ, ಈಜಲು ಬಾರದೆ ಮುಳುಗಿ ಮೃತಪಟ್ಟಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಕೆರೆಯ ಬಳಿಗೆ ಬಂದ ಗ್ರಾಮಸ್ಥರು ಮತ್ತು ಅಗ್ನಿಶಾಮಕ ಸಿಬ್ಬಂದಿ, ಕಾರ್ಯಾಚರಣೆ ಕೈಗೊಂಡು ವಿದ್ಯಾರ್ಥಿಗಳ ಶವವನ್ನು ಹೊರತೆಗೆದರು. ಬಾಲಕರ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು.

ADVERTISEMENT

ಮರಣೋತ್ತರ ಪರೀಕ್ಷೆಗಾಗಿ ಬಾಲಕರ ಶವಗಳನ್ನು ಆ್ಯಂಬುಲೆನ್ಸ್ ಮೂಲಕ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಯಿತು. ಆಸ್ಪತ್ರೆ ಮುಂದೆಯೂ ಪೋಷಕರ ಆಕ್ರಂದನ ಎಂಥವರನ್ನೂ ವಿಚಲಿತರನ್ನಾಗಿಸುತ್ತಿತ್ತು. 

ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ, ತಹಶೀಲ್ದಾರ್ ಮನೀಷಾ ಎನ್. ಪತ್ರಿ, ಸರ್ಕಲ್ ಇನ್‌ಸ್ಪೆಕ್ಟರ್ ಪ್ರಶಾಂತ್ ವರ್ಣಿ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಂತೈಸಿದರು. ಮರಣೋತ್ತರ ಪರೀಕ್ಷೆ ಬಳಿಕ ಶವಗಳನ್ನು ಮತ್ತೆ ಸ್ವಗ್ರಾಮಕ್ಕೆ ತಂದು, ಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಶಾಲಾ–ಕಾಲೇಜುಗಳಿಗೆ ದಸರಾ ರಜೆ ನೀಡಲಾಗಿದೆ. ಹೀಗಾಗಿ, ಪೋಷಕರು ಮಕ್ಕಳ ಬಗ್ಗೆ ಹೆಚ್ಚು ನಿಗಾ ವಹಿಸಬೇಕು. ಮಕ್ಕಳು ಕೆರೆ, ಕುಂಟೆ, ಕಾಲುವೆಗಳ ಬಳಿ ಹೋಗದಂತೆ ಎಚ್ಚರ ವಹಿಸಬೇಕು ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಮನವಿ ಮಾಡಿದರು.

ತಹಶೀಲ್ದಾರ್ ಮನೀಷಾ ಎನ್ ಪತ್ರಿ ಮಾತನಾಡಿ, ಮೂವರು ಮಕ್ಕಳು ಕೆರೆಯಲ್ಲಿ ಈಜಾಡಲು ಹೋಗಿ ಸಾವನ್ನಪ್ಪಿರುವುದು ನೋವು ತಂದಿದೆ. ಮೃತ ಬಾಲಕರ ಪೋಷಕರು ಕೃಷಿ ಕೂಲಿ ಕಾರ್ಮಿಕರು. ಮೃತಪಟ್ಟ ಬಾಲಕರ ಕುಟುಂಬಗಳಿಗೆ ಪರಿಹಾರ ಕಲ್ಪಿಸಲು ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.

ವಿಷ್ಣುವರ್ಧನ್
ನಿಹಾಲ್‍ರಾಜ್
ಹರ್ಷವರ್ಧನ್
ಕೆರೆಯಲ್ಲಿ ಈಜಾಡಲು ಹೋಗಿ ಮಕ್ಕಳು ಮೃತಪಟ್ಟಿರುವುದು ದುರಂತದ ಸಂಗತಿ. ಮೃತರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಕೊಡಿಸುತ್ತೇನೆ. ವೈಯಕ್ತಿಕವಾಗಿ ತಲಾ ₹1 ಲಕ್ಷ ಪರಿಹಾರ ನೀಡುತ್ತೇನೆ
ಎಸ್.ಎನ್. ಸುಬ್ಬಾರೆಡ್ಡಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.