ADVERTISEMENT

ನಕಲಿ ದಾಖಲೆ ಸೃಷ್ಟಿ: ಮುನಿರಾಜು ವಿರುದ್ಧ ಪ್ರಕರಣ ದಾಖಲಿಸಿದ ಶಾಸಕ ಸುಬ್ಬಾರೆಡ್ಡಿ 

ಶಾಸಕ ಸುಬ್ಬಾರೆಡ್ಡಿ ವಿದೇಶಗಳಲ್ಲಿ ಆಸ್ತಿ ಹೊಂದಿದ್ದಾರೆ ಎಂದು ನಕಲಿ ದಾಖಲೆ ಸೃಷ್ಟಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 14:22 IST
Last Updated 18 ಜುಲೈ 2025, 14:22 IST
<div class="paragraphs"><p>ಶಾಸಕ ಎಸ್‌.ಎನ್. ಸುಬ್ಬಾರೆಡ್ಡಿ  ಹಾಗೂ ಬಿಜೆಪಿ ರಾಜ್ಯ ಕಾರ್ಯದರ್ಶಿ ಮುನಿರಾಜು</p></div>

ಶಾಸಕ ಎಸ್‌.ಎನ್. ಸುಬ್ಬಾರೆಡ್ಡಿ ಹಾಗೂ ಬಿಜೆಪಿ ರಾಜ್ಯ ಕಾರ್ಯದರ್ಶಿ ಮುನಿರಾಜು

   

ಚಿಕ್ಕಬಳ್ಳಾಪುರ: ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಮುಖಂಡ ಸಿ.ಮುನಿರಾಜು, ‘ನನ್ನ ವಿರುದ್ಧ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಳಂಕ ತರಲು ಪ್ರಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿ ಶಾಸಕ ಎಸ್‌.ಎನ್.ಸುಬ್ಬಾರೆಡ್ಡಿ ಬಾಗೇಪಲ್ಲಿ ಠಾಣೆಗೆ ಶುಕ್ರವಾರ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಮುನಿರಾಜು ವಿರುದ್ಧ ಪ್ರಕರಣ ದಾಖಲಾಗಿದೆ.

ವಿದೇಶಗಳಲ್ಲಿ ಸುಬ್ಬಾರೆಡ್ಡಿ ಅವರು ಆಸ್ತಿ ಹೊಂದಿದ್ದಾರೆ ಎಂದು ಇತ್ತೀಚೆಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅವರ ನಿವಾಸ ಹಾಗೂ ಕಚೇರಿಯ ಮೇಲೆ ದಾಳಿ ನಡೆಸಿದ್ದರು. ಈ ವಿಚಾರವಾಗಿ ಮುನಿರಾಜು ‘ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ’ ಎಂದು ಸುಬ್ಬಾರೆಡ್ಡಿ ಆರೋಪಿಸಿದ್ದಾರೆ. 

ADVERTISEMENT

‘ಜು.5ರಂದು ನನ್ನ ಸ್ನೇಹಿತ ಕೆಲವು ದಾಖಲೆಗಳನ್ನು ವಾಟ್ಸ್‌ಆ್ಯಪ್ ಮೂಲಕ ನನಗೆ ಕಳುಹಿಸಿದ್ದರು. ಆ ದಾಖಲೆಗಳನ್ನು ಪರಿಶೀಲಿಸಿದಾಗ ನನ್ನ ಹೆಸರು ಮತ್ತು ನನ್ನ ಪತ್ನಿ ಹೆಸರು ಉಲ್ಲೇಖವಾಗಿತ್ತು.

ಹಾಂಕಾಂಗ್, ಮಲೇಷ್ಯಾ ಮತ್ತಿತರ ದೇಶಗಳ ದಾಖಲೆಗಳೂ ಅದರಲ್ಲಿ ಇದ್ದವು. ಜರ್ಮನಿಯಲ್ಲಿ ನನ್ನ ಹೆಸರಿನಲ್ಲಿ ವಾಹನ ಖರೀದಿಸಿ ನೋಂದಾಯಿಸಿರುವುದು, ಸಿಂಗಾಪುರದಲ್ಲಿ ಬ್ಯಾಂಕ್ ಖಾತೆ ಹೊಂದಿದ್ದು ಆ ಖಾತೆಯ ಮೂಲಕ ಹಣ ವರ್ಗಾವಣೆ ಮಾಡಲಾಗಿದೆ ಎನ್ನುವ ರೀತಿಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ.

ರಾಮಸ್ವಾಮಿ ವೀರನ್ ಎಂಬುವವರ ಖಾತೆಯಿಂದ ನನ್ನ ಪತ್ನಿ ಖಾತೆಗೆ ಹಣ ವರ್ಗಾವಣೆ ಮಾಡಿರುವುದಾಗಿಯೂ ನಕಲಿ ದಾಖಲೆ ದೃಷ್ಟಿಸಿದ್ದಾರೆ. ಆದರೆ ಈ ಖಾತೆಗಳಿಗೂ ನನ್ನ ಪತ್ನಿಗೂ ಸಂಬಂಧವಿಲ್ಲ.

ಈ ನಕಲಿ ದಾಖಲೆಗಳಲ್ಲಿ ಅನಾಮಧೇಯವಾದ ಮೂರು ಇ–ಮೇಲ್ ಐಡಿಗಳೂ ಸಹ ಉಲ್ಲೇಖವಾಗಿವೆ. ನನ್ನ ಭಾವಚಿತ್ರ ಸಹ ಬಳಸಿಕೊಂಡಿದ್ದಾರೆ. ನನಗೆ ಸಂಬಂಧವಿಲ್ಲದ ದಾಖಲೆಗಳಲ್ಲಿ ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡು ನನ್ನ ವಿರುದ್ಧ ನಕಲಿ ದಾಖಲೆ ಸೃಷ್ಟಿಸಿದ್ದಾರೆ.

2023ರ ವಿಧಾನಸಭಾ ಚುನಾವಣೆಯಲ್ಲಿ ನಾನು ನಾಮಪತ್ರದ ಜೊತೆ ಸಲ್ಲಿಸಿರುವ ಪ್ರಮಾಣ ಪತ್ರಗಳಲ್ಲಿ ಕೆಲವು ದೋಷಗಳು ಇವೆ. ಆಸ್ತಿ ಮರೆ ಮಾಚಿದ್ದಾರೆ ಎಂದು ಪರಾಜಿತ ಅಭ್ಯರ್ಥಿ ಮುನಿರಾಜು ಸಿ. ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ. ದಾಖಲೆಗಳನ್ನು ಸಲ್ಲಿಸುವುದಾಗಿ ಪ್ರಮಾಣೀಕರಣ ಸಹ ಮಾಡಿದ್ದಾರೆ.

ಈ ಸುಳ್ಳು ಆರೋಪವನ್ನು ಸತ್ಯ ಮಾಡುವ ಉದ್ದೇಶದಿಂದ, ನನ್ನ ಜನಪ್ರಿಯತೆ ಕುಗ್ಗಿಸುವ, ಕಳಂಕ ತರುವ ಉದ್ದೇಶದಿಂದ ಒಳಸಂಚು ಮಾಡಿ ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎನ್ನುವ ಅನುಮಾನವಿದೆ.

‘ನನಗೆ ಈ ನಕಲು ದಾಖಲೆಗಳನ್ನು ವಾಟ್ಸ್‌ಆ್ಯಪ್ ಮೂಲಕ ಕಳುಹಿಸಿದ್ದ ನನ್ನ ಸ್ನೇಹಿತರ ಬಳಿ ಈ ದಾಖಲೆಗಳ ಬಗ್ಗೆ ವಿಚಾರಿಸಿದೆ. ಆಗ ಅವರು ಸಿ.ಮುನಿರಾಜು ಅವರ ವಾಟ್ಸ್‌ಆ್ಯಪ್‌ನಿಂದ ನನಗೆ ಈ ದಾಖಲೆಗಳನ್ನು ಕಳುಹಿಸಿರುವುದಾಗಿ ಮಾಹಿತಿ ನೀಡಿದರು. ನಾನು ವಿದೇಶಗಳಲ್ಲಿ ಆಸ್ತಿ ಹೊಂದಿರುವುದಾಗಿ ಹಾಗೂ ವಿದೇಶಿ ಬ್ಯಾಂಕ್‌ಗಳಲ್ಲಿ ಹಣ ಹೂಡಿಕೆ ಮತ್ತು ವಾಹನ ಹೊಂದಿರುವುದಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿರುವ ಮುನಿರಾಜು ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ದೂರಿನಲ್ಲಿ ಶಾಸಕ ಸುಬ್ಬಾರೆಡ್ಡಿ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.