ADVERTISEMENT

ಚಿಕ್ಕಬಳ್ಳಾಪುರ: ಪಂಪ್‌ಸೆಟ್ ಇಲ್ಲದಿದ್ದರೂ ಸಬ್ಸಿಡಿ!

ಬಾಗೇಪಲ್ಲಿ ತಾಲ್ಲೂಕಿನಲ್ಲಿ 2020–21ನೇ ಸಾಲಿನ ಹನಿ ನೀರಾವರಿ ಸಹಾಯಧನ ಸೌಲಭ್ಯದಲ್ಲಿ ಅಕ್ರಮ ಆರೋಪ

ಡಿ.ಎಂ.ಕುರ್ಕೆ ಪ್ರಶಾಂತ
Published 9 ಜನವರಿ 2022, 7:50 IST
Last Updated 9 ಜನವರಿ 2022, 7:50 IST
ಎಸ್.ಎನ್.ಸುಬ್ಬಾರೆಡ್ಡಿ
ಎಸ್.ಎನ್.ಸುಬ್ಬಾರೆಡ್ಡಿ   

ಚಿಕ್ಕಬಳ್ಳಾಪುರ: ಕೊಳವೆಬಾವಿಯೇ ಇಲ್ಲ ಹೀಗಿದ್ದರೂ ಆ ರೈತರಿಗೆ ಹನಿ ನೀರಾವರಿ ಯೋಜನೆಯಡಿ ಸಹಾಯಧನ (ಸಬ್ಸಿಡಿ) ದೊರೆತಿದೆ. ಆ ಗ್ರಾಮದಲ್ಲಿ ಆ ಹೆಸರಿನ ವ್ಯಕ್ತಿಯೇ ಇಲ್ಲ. ಹೀಗಿದ್ದರೂ ಅವರಿಗೆ ಸಹಾಯಧನ ಮಂಜೂರಾಗಿದೆ....ಇದು ಬಾಗೇಪಲ್ಲಿ ತಾಲ್ಲೂಕು ವ್ಯಾಪ್ತಿಯಲ್ಲಿ ಹನಿ ನೀರಾವರಿ ಯೋಜನೆಯ ಸಹಾಯಧನ ಸೌಲಭ್ಯಗಳನ್ನು ಪಡೆಯುವಲ್ಲಿ ನಡೆದಿರುವ ಅಕ್ರಮಗಳು.

ಶನಿವಾರ ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ದಿಶಾ ಸಭೆಯಲ್ಲಿ ಶಾಸಕ ಎಸ್‌.ಎನ್.ಸುಬ್ಬಾರೆಡ್ಡಿ ಈ ವಿಚಾರವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದರು. ಈ ಸಂಬಂಧ ಸಂಸದ ಬಿ.ಎನ್.ಬಚ್ಚೇಗೌಡ ತನಿಖೆಗೂ ಆದೇಶಿಸಿದ್ದಾರೆ.

ಹಗರಣ ನಡೆದಿಲ್ಲ ಎಂದು ಸಮರ್ಥಿಸಿಕೊಂಡ ಅಧಿಕಾರಿಗಳಿಗೆ, ‘ಹಗರಣ ನಡೆದಿಲ್ಲ ಎಂದು ನೀವು ಸಾಬೀತುಪಡಿಸಿದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವೆ’ ಎಂದು ಶಾಸಕರೊಬ್ಬರು ಬಹಿರಂಗವಾಗಿ ಸವಾಲು ಹಾಕಿದ್ದು ಜಿಲ್ಲೆಯ ಮಟ್ಟಿಗೆ ಇದೇ ಮೊದಲು ಎನ್ನಲಾಗುತ್ತಿದೆ.

ADVERTISEMENT

2020–21ನೇ ಸಾಲಿನಲ್ಲಿ ಹನಿ ನೀರಾವರಿ ಯೋಜನೆಯಡಿ ಸಹಾಯಧನ ಸೌಲಭ್ಯ ನೀಡುವ ವಿಚಾರದಲ್ಲಿ ₹ 2.5 ಕೋಟಿ ಮೊತ್ತದ ಅಕ್ರಮಗಳು ನಡೆದಿದೆ ಎಂದು ಶಾಸಕರು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗೆ ದಾಖಲೆ ಸಮೇತ ದೂರು ಸಹ ನೀಡಿದ್ದಾರೆ. ಹೀಗೆ ಅಕ್ರಮಗಳ ದಾಖಲೆಗಳು ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಬಾಗೇಪಲ್ಲಿ ತಾಲ್ಲೂಕಿನ ಕಸಬಾ, ಗೂಳೂರು, ಪಾತಪಾಳ್ಯ, ಚೇಳೂರು ಮತ್ತು ಮಿಟ್ಟೇಮರಿ ಹೋಬಳಿ ವ್ಯಾಪ್ತಿಯ ಬಹಳಷ್ಟು ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಈ ಅಕ್ರಮಗಳು ನಡೆದಿವೆ.

ಮಾಹಿತಿ ಬಹಿರಂಗವಾಗಿದ್ದು ಹೀಗೆ: ಹನಿ ನೀರಾವರಿ ಯೋಜನೆಯಡಿ ಸಹಾಯಧನಕ್ಕೆ ಅರ್ಜಿ ಸಲ್ಲಿಸಿದ್ದರೂ ಸಹಾಯಧನ ಬಂದಿಲ್ಲ ಎಂದು ಬಹಳಷ್ಟು ಮಂದಿ ಶಾಸಕರಿಗೆ ಮಾಹಿತಿ ನೀಡಿದ್ದರು. ಶಾಸಕರು ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಈ ಬಗ್ಗೆ ಮಾಹಿತಿ ನೀಡುವಂತೆ ಸರ್ಕಾರವನ್ನು ಕೋರಿದ್ದರು. ಸರ್ಕಾರ ನೀಡಿದ ಮಾಹಿತಿ ಆಧರಿಸಿ ಪರಿಶೀಲಿಸಿದಾಗ ಅಕ್ರಮಗಳು ಬಯಲಾಗಿವೆ. 15ಕ್ಕೂ ಹೆಚ್ಚು ಗ್ರಾಮಗಳಿಗೆ ಶಾಸಕರು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಅಕ್ರಮ ಮತ್ತಷ್ಟು ದೃಢವಾಗಿದೆ.

ಕೊಳವೆಬಾವಿ ಇಲ್ಲದಿದ್ದರೂ ಹನಿ ನೀರಾವರಿ ಸೌಲಭ್ಯ ನೀಡಿರುವುದು, ತೋಟಗಾರಿಕೆ ಇಲಾಖೆ ಮತ್ತು ಕೃಷಿ ಇಲಾಖೆ ಎರಡರಿಂದಲೂ ಸಹಾಯಧನ ಪಡೆದಿರುವುದು, ಸಹಾಯಧನಕ್ಕೆ ಅರ್ಜಿ ಹಾಕಿದ್ದ ಕೆಲವರಿಗೆ ಹನಿ ನೀರಾವರಿ ಯೋಜನೆಯ ಸಲಕರಣೆಗಳನ್ನು ನೀಡಿಲ್ಲ. ಹೀಗಿದ್ದರೂ ಬಿಲ್ ಡ್ರಾ ಆಗಿದೆ.

2020–21ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯಿಂದ 700ಕ್ಕೂ ಹೆಚ್ಚು ಫಲಾನುಭವಿಗಳು ಸಹಾಯಧನ ಸೌಲಭ್ಯವನ್ನು ಪಡೆದಿದ್ದಾರೆ. ಇವರಲ್ಲಿ 250ಕ್ಕೂ ಹೆಚ್ಚು ಫಲಾನುಭವಿಗಳ ಹೆಸರಿನಲ್ಲಿ ಅಕ್ರಮಗಳು ನಡೆದಿವೆ. ‌ಕನಿಷ್ಠ ₹ 50 ಸಾವಿರದಿಂದ ಗರಿಷ್ಠ ₹ 1.90 ಲಕ್ಷದವರೆಗೂ ಈ ಅಕ್ರಮಗಳು ನಡೆದಿವೆ. 70ರಿಂದ 80ರಷ್ಟು ಮಂದಿ ತೋಟಗಾರಿಕೆ ಮತ್ತು ಕೃಷಿ ಎರಡೂ ಇಲಾಖೆಯಿಂದ ಸಹಾಯಧನ ಪಡೆದಿದ್ದಾರೆ ಎಂದು ಶಾಸಕರ ಕಚೇರಿ ಮೂಲಗಳು ತಿಳಿಸುತ್ತವೆ.

ಈ ಅಕ್ರಮಗಳಲ್ಲಿ ಯಾವ ಅಧಿಕಾರಿಗಳು ಶಾಮೀಲಾಗಿದ್ದಾರೆ? ಮೇಲಧಿಕಾರಿಗಳು ಕಣ್ಣು ಮುಚ್ಚಿ ಅನುಮೋದನೆ ನೀಡಿದರೆ? ಸೌಲಭ್ಯಗಳನ್ನು ಪಡೆಯಲು ದಲ್ಲಾಳಿಗಳ ಮೂಲಕವೇ ಅಧಿಕಾರಿಗಳನ್ನು ಭೇಟಿಯಾಗಬೇಕೆ? ಹೀಗೆ ನಾನಾ ಪ್ರಶ್ನೆಗಳು ಬಾಗೇಪಲ್ಲಿ ತಾಲ್ಲೂಕಿನ ಸಾಮಾನ್ಯ ರೈತರಲ್ಲಿ ಮೂಡಿವೆ.

ತೋಟದಲ್ಲಿ ಡ್ರಿಪ್ ಇಲ್ಲ; ಹಣ ಡ್ರಾ
ಬಹಳಷ್ಟು ಕಡೆಗಳಲ್ಲಿ ಫಲಾನುಭವಿಯ ಜಮೀನುಗಳಲ್ಲಿ ಹನಿ ನೀರಾವರಿ ಸೌಲಭ್ಯವೇ ಇಲ್ಲ. ಹೀಗಿದ್ದರೂ ಅವರ ಹೆಸರಿನಲ್ಲಿ ಹಣ ಡ್ರಾ ಆಗಿದೆ. ಹನಿ ನೀರಾವರಿ ಯೋಜನೆ ಜಾರಿಗೊಳಿಸಿದ್ದಾರೆಯೇ ಎನ್ನುವುದನ್ನು ಅಧಿಕಾರಿಗಳು ಪರಿಶೀಲಿಸಿದ ನಂತರವೇ ಹಣ ಬಿಡುಗಡೆ ಮಾಡಲಾಗುತ್ತದೆ.

ದೇವರಗುಡಿಪಲ್ಲಿ, ಪರಗೋಡು ಗ್ರಾಮಗಳಲ್ಲಿ ಕೆಲವು ಫಲಾನುಭವಿಗಳು ಹನಿ ನೀರಾವರಿಯ ಸಹಾಯಧನ ಪಡೆದಿದ್ದಾರೆ. ಆದರೆ ಆ ಗ್ರಾಮಗಳಲ್ಲಿ ಆ ಹೆಸರಿನವರೇ ಇಲ್ಲ!ರಾಯಚೆರವು, ಘಂಟವಾರಪಲ್ಲಿ, ದೇವರಗುಡಿಪಲ್ಲಿ, ಗೊರ್ತಪಲ್ಲಿ, ಗೂಳೂರು ಮತ್ತಿತರ ಗ್ರಾಮಗಳಲ್ಲಿ ಫಲಾನುಭವಿಯ ಹೆಸರಿನಲ್ಲಿ ಕೊಳವೆಬಾವಿಯೇ ಇಲ್ಲ. ಹೀಗಿದ್ದರೂ ಅವರಿಗೆ ಸಾವಿರಾರೂ ರೂಪಾಯಿ ಸಹಾಯಧನ ನೀಡಲಾಗಿದೆ.

‘ಜಿಲ್ಲಾ ಮಟ್ಟದ ಅಧಿಕಾರಿಗಳು ಪರಿಶೀಲಿಸಬೇಕಿತ್ತು’
‘ಮಧ್ಯವರ್ತಿಗಳ ಕಾರಣದಿಂದ ಇಷ್ಟೊಂದು ದೊಡ್ಡಮಟ್ಟದಲ್ಲಿ ಅಕ್ರಮಗಳು ನಡೆದಿವೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಈ ವಿಚಾರ ತಮ್ಮ ಗಮನಕ್ಕೆ ಬಂದಿಲ್ಲ ಎನ್ನುತ್ತಾರೆ. ಇವರಿಗೆ ಕೆಳಹಂತದ ಅಧಿಕಾರಿಗಳ ಮೇಲೆ ನಿಯಂತ್ರಣ ಇಲ್ಲವೇ. ಪರಿಶೀಲನೆ ನಡೆಸಬೇಕಿತ್ತು ಅಲ್ಲವೇ’ ಎಂದು ಸುಬ್ಬಾರೆಡ್ಡಿ ಅಸಮಾಧಾನ ವ್ಯಕ್ತಪಡಿದರು.

‘ಎಲ್ಲೊ ಶಿಕ್ಷೆಗೆ ಒಳಗಾದ ಅಧಿಕಾರಿಗಳನ್ನು ತಂದು ಬಾಗೇಪಲ್ಲಿಗೆ ಹಾಕುವರು. ಬಾಗೇಪಲ್ಲಿ ಎಂದರೆ ನಗಣ್ಯ ಎನ್ನುವಂತಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.