ಚಿಕ್ಕಬಳ್ಳಾಪುರ: ದುಶ್ಚಟಗಳಿಗೆ ದಾಸರಾಗದಿದ್ದರೆ ಬದುಕು ಹಸನಾಗುತ್ತದೆ ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದರು.
ನಗರ ಹೊರವಲಯದ ಕೈಗಾರಿಕಾ ಅಭಿವೃದ್ಧಿ ಪ್ರದೇಶದಲ್ಲಿರುವ ಮೈಕ್ರೊಟೆಕ್ ಮೆಷಿನ್ಸ್ ಲಿಮಿಟೆಡ್ ಸಭಾಂಗಣದಲ್ಲಿ ಶುಕ್ರವಾರ ಮಹಾಂತ ಶಿವಯೋಗಿಗಳ
ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರೂ ಒಂದಲ್ಲ ಒಂದು ವ್ಯಸನಕ್ಕೆ ಒಳಗಾಗಿರುತ್ತಾರೆ. ಬಹುತೇಕರು ಉದ್ಯೋಗದ ಜೊತೆಗೆ ಕ್ರೀಡೆ, ಸಂಗೀತ, ಸಾಹಿತ್ಯ, ವ್ಯಾಯಾಮ ಇನ್ನಿತರ ಸಕಾರಾತ್ಮಕ ವಿಚಾರಗಳಲ್ಲಿ ವ್ಯಸನರಾಗಿರುತ್ತಾರೆ. ಅನಿವಾರ್ಯ ಕಾರಣಗಳಿಂದ ಕೆಲವರು ಕೆಟ್ಟ ವ್ಯಸನಗಳಿಗೆ ದಾಸರಾಗಿರುತ್ತಾರೆ ಎಂದರು.
‘ಸ್ವಾಸ್ಥ್ಯ ಸಮಾಜವಿದ್ದರೆ ದೇಶವೂ ಸದೃಢವಾಗುತ್ತದೆ. ದುಶ್ಚಟಗಳಿಗೆ ಒಳಗಾಗದಂತೆ ಜನರಲ್ಲಿ ಅರಿವು ಮೂಡಿಸಲು ಮಹಾಂತ ಶಿವಯೋಗಿಗಳು ಮಾಡಿದ ಸಾಮಾಜಿಕ ಪರಿವರ್ತನೆ ನಮ್ಮೆಲ್ಲರಿಗೆ ಪ್ರೇರಣೆ ಎಂದರು.
ಅತಿಯಾದ ಮೊಬೈಲ್ ಬಳಕೆಯ ವ್ಯಸನಕ್ಕೆ ಬಹುತೇಕರು ಒಳಗಾಗುತ್ತಿರುವುದು ಕಳವಳಕಾರಿ ವಿಚಾರ. ಅತಿಯಾದ ಮೊಬೈಲ್ ಬಳಕೆ, ಜಂಕ್ ಫುಡ್ ಸೇವನೆ, ಅವೈಜ್ಞಾನಿಕ ಜೀವನ ಕ್ರಮದಿಂದ ಹೃದ್ರೋಗ ಸಮಸ್ಯೆಗಳು ಹೆಚ್ಚಾಗಿವೆ. ಆದ್ದರಿಂದ ಪ್ರತಿಯೊಬ್ಬರು ಉತ್ತಮ ಅಭ್ಯಾಸಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ಕ್ರಮವನ್ನು ಪಾಲಿಸಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ್ ಕುಮಾರ್ ಮಾತನಾಡಿ, ಮಹಾಂತ ಶಿವಯೋಗಿಗಳು ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಬಹು ವರ್ಷಗಳ ಹಿಂದೆಯೇ ಕೈಗೊಂಡ ‘ಮಹಾಂತ ಜೋಳಿಗೆ’ ಕಾರ್ಯಕ್ರಮ ಅತ್ಯಂತ ವಿಶಿಷ್ಟವಾದುದು ಎಂದರು.
ಪಾನ್ ಬೀಡಾ, ಮದ್ಯಪಾನ, ಮಾದಕ ವಸ್ತು, ತಂಬಾಕು ವ್ಯಸನಗಳನ್ನು ತನ್ನ ಜೋಳಿಗೆಗೆ ನೀಡಿ ವ್ಯಸನ ಮುಕ್ತರಾಗಲು ಅಭಿಯಾನ ಆರಂಭಿಸಿದರು. ಸ್ವಾಸ್ಥ್ಯ ಮತ್ತು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸ್ವಾಮೀಜಿ ಶ್ರಮಿಸಿದರು ಎಂದು ಸ್ಮರಿಸಿದರು.
ಮನೋವೈದ್ಯ ಡಾ.ಜಿ. ಹೇಮಂತ್ ಕುಮಾರ್, ತಂಬಾಕು, ಮಾದಕ ಹಾಗೂ ಮದ್ಯದ ಅಡ್ಡ ಪರಿಣಾಮಗಳ ಬಗ್ಗೆ ಪಿಪಿಟಿ ನೀಡಿದರು. ಯಾವುದೇ ವ್ಯಕ್ತಿ ವ್ಯಸನಗಳಿಗೆ ಒಳಗಾಗಿ ಅನಾರೋಗ್ಯ ಪೀಡಿತರಾಗಿದ್ದಲ್ಲಿ ಟೆಲಿಮಾನಸ್ ಸಹಾಯವಾಣಿ 14416 ಸಂರ್ಪಕಿಸಿ ಚಿಕಿತ್ಸೆ ಪಡೆಯಬಹುದು. ಅಂತಹ ರೋಗಿಗಳು ತಮ್ಮ ಕುಟುಂಬಗಳಲ್ಲಿ ಅಥವಾ ಸುತ್ತ ಮುತ್ತಲ ಸಮಾಜದಲ್ಲಿ ಕಂಡು ಬಂದರೆ ಕರೆ ಮಾಡಿ ಸಾಮಾಜಿಕ ಜವಾಬ್ದಾರಿ ಮೆರೆಯಬೇಕು ಎಂದು ಮನವಿ ಮಾಡಿದರು.
ಕಾರ್ಮಿಕರಿಗೆ ಆರೋಗ್ಯ ತಪಾಸಣೆಯನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಮದ್ಯ, ಮಾದಕ, ತಂಬಾಕು ವಸ್ತುಗಳ ವ್ಯಸನ ಮುಕ್ತಗೊಳಿಸುವ ಅರಿವು ಪ್ರತಿಜ್ಞಾವಿಧಿಯನ್ನು ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಶಿವಕುಮಾರ್ ಬೋಧಿಸಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಶಭಾನ ಆಜ್ಮಿ, ಮೈಕ್ರೊಟೆಕ್ ಮೆಷಿನ್ಸ್ ಲಿಮಿಟೆಡ್ ವ್ಯವಸ್ಥಾಪಕ ನಿರ್ವಾಹಕ ವಿ.ರಾಜಕುಮಾರ್, ಕಾರ್ಖಾನೆ ನಿರ್ವಾಹಕಿ ಎನ್.ಕವಿತಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಎಂ. ಜುಂಜಣ್ಣ, ವಾರ್ತಾ ಸಹಾಯಕ ಮಂಜುನಾಥ್, ಕಾರ್ಮಿಕ ನಿರೀಕ್ಷಕರಾದ ಮಂಜುಳಾ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.