ADVERTISEMENT

ಕಾರ್ಯಪಡೆಯ ಪರಿಶ್ರಮ; ಸುಗಟೂರು ಕೊರೊನಾ ಮುಕ್ತ, 20 ದಿನಗಳಿಂದ ಸೋಂಕಿಲ್ಲ

​ಪ್ರಜಾವಾಣಿ ವಾರ್ತೆ
Published 12 ಜೂನ್ 2021, 2:12 IST
Last Updated 12 ಜೂನ್ 2021, 2:12 IST
ಶಿಡ್ಲಘಟ್ಟ ತಾಲ್ಲೂಕಿನ ಸುಗಟೂರು ಗ್ರಾಮಮಟ್ಟದ ಕಾರ್ಯಪಡೆಯು ಮನೆಮನೆಗಳಿಗೆ ಭೇಟಿನೀಡಿ ಜಾಗೃತಿ ಮೂಡಿಸುತ್ತಿರುವುದು
ಶಿಡ್ಲಘಟ್ಟ ತಾಲ್ಲೂಕಿನ ಸುಗಟೂರು ಗ್ರಾಮಮಟ್ಟದ ಕಾರ್ಯಪಡೆಯು ಮನೆಮನೆಗಳಿಗೆ ಭೇಟಿನೀಡಿ ಜಾಗೃತಿ ಮೂಡಿಸುತ್ತಿರುವುದು   

ಶಿಡ್ಲಘಟ್ಟ: ತಾಲ್ಲೂಕಿನ ಜಂಗಮಕೋಟೆ ಹೋಬಳಿ, ಜೆ.ವೆಂಕಟಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಗಟೂರು ಗ್ರಾಮದಲ್ಲಿ ಕೊರೊನಾ ಸೋಂಕು ಸಾಕಷ್ಟು ತನ್ನ ಕಬಂಧಬಾಹುಗಳನ್ನು ಚಾಚಿತ್ತು. ಗ್ರಾಮಮಟ್ಟದ ಕಾರ್ಯಪಡೆಯ ಶ್ರಮದಿಂದಾಗಿ ಸುಮಾರು 20 ದಿನಗಳ ಹಿಂದೆಯೇ ಗ್ರಾಮವು ಸೋಂಕು ಮುಕ್ತವಾಗಿದೆ.

ಸುಮಾರು 400 ಕುಟುಂಬಗಳು, 1990 ಜನಸಂಖ್ಯೆಯುಳ್ಳ ಸುಗಟೂರು ಗ್ರಾಮದಲ್ಲಿ 45 ವರ್ಷ ವಯಸ್ಸಿಗಿಂತ ಮೇಲ್ಪಟ್ಟ ಸುಮಾರು 650, 18 ವರ್ಷದಿಂದ 45 ವರ್ಷದವರೆಗಿನ 1000 ಕ್ಕೂ ಹೆಚ್ಚುಮಂದಿ ಇದ್ದು, ಸುಮಾರು 450 ಮಂದಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿದ್ದಾರೆ.

ಗ್ರಾಮದಲ್ಲಿ ಸುಮಾರು 350 ಮಂದಿಗೆ ಕೊರೊನಾ ವಿರುದ್ಧದ ಲಸಿಕೆ ಹಾಕಲಾಗಿದ್ದು, 2021ರ ಮಾ.28ರಂದು ಪ್ರಥಮ ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಯಿತು. ಅಲ್ಲಿಂದ ನಂತರದ ದಿನಗಳಲ್ಲಿ ಪ್ರತಿದಿನವೂ ಕನಿಷ್ಠ ಮೂರ್‍ನಾಲ್ಕು ಮಂದಿಗೆ ಪಾಸಿಟಿವ್ ಬಂದಿದೆ. ಮೇ 20 ರವರೆಗೆ ಗ್ರಾಮದಲ್ಲಿ ಸುಮಾರು 30ಕ್ಕೂ ಹೆಚ್ಚುಮಂದಿಗೆ ಸೋಂಕು ತಗುಲಿದ್ದು ಒಂದು ಕೋವಿಡ್ ಸಂಭವಿಸಿದೆ. ಮೇ 20ರಿಂದ ಇಲ್ಲಿನವರೆಗೆ ಯಾವುದೇ ಪಾಸಿಟಿವ್ ಕೇಸ್, ಅನಾರೋಗ್ಯದ ಕೇಸ್‌ಗಳು ಪತ್ತೆಯಾಗದೇ ಸೋಂಕು ಮುಕ್ತವಾಗಿದೆ.

ADVERTISEMENT

ಗ್ರಾಮ ಕಾರ್ಯಪಡೆಯ ಶ್ರಮ: ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದ ಕೊರೊನಾ ಕೇಸ್‌ಗಳ ಹಾವಳಿಯನ್ನು ತಪ್ಪಿಸಲು ಗ್ರಾಮಪಂಚಾಯಿತಿ ಸದಸ್ಯರು, ಶಾಲಾಶಿಕ್ಷಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರನ್ನೊಳಗೊಂಡ ಗ್ರಾಮ ಕಾರ್ಯಪಡೆಯನ್ನು ರಚಿಸಿಕೊಂಡು ಮನೆಮನೆ ಭೇಟಿ, ಆರೋಗ್ಯಸಲಹೆ, ಜಾಗೃತಿ, ಕೊರೊನಾ ನಿಯಮಗಳ ಪಾಲನೆಯ ಬಗ್ಗೆ ಅರಿವುಮೂಡಿಸುವ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಲಾಯಿತು.

ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಅವರನ್ನೊಳಗೊಂಡ ನಾಲ್ಕುಮಂದಿ ಶಿಕ್ಷಕರ ತಂಡವು ಸ್ವಯಂ ಆಸಕ್ತಿಯಿಂದ ಕಾರ್ಯಪಡೆಯಲ್ಲಿ ಸೇರಿಕೊಂಡು ಗ್ರಾಮವನ್ನು ಸುತ್ತಲು ಆರಂಭಿಸಿತು. ಎರಡು ಬ್ಲಾಕ್‌ಗಳಲ್ಲಿ ತಂಡವನ್ನು ಇಬ್ಭಾಗ ಮಾಡಿಕೊಂಡು ಎಲ್ಲಾ ಕುಟುಂಬದ ಸದಸ್ಯರಿಗೆ ಕೊರೊನಾ ತಡೆಯುವ ಬಗ್ಗೆ ಮನವರಿಕೆ ಮಾಡಿಕೊಟ್ಟಿತು.

‘ಗ್ರಾಮವು ಕೊರೊನಾ ಮುಕ್ತವಾಗುವಲ್ಲಿ ಕಾರ್ಯಪಡೆಯ ಶ್ರಮ, ಕೈಗೊಂಡ ಕ್ರಮಗಳ ಬಗ್ಗೆ ತಾಲ್ಲೂಕು ಟಾಸ್ಕ್‌ಫೋರ್ಸ್ ಅಭಿನಂದಿಸಿರುವುದಕ್ಕೆ ಸಂತೋಷವಾಗುತ್ತಿದೆ’ ಎನ್ನುತ್ತಾರೆ ಜೆ.ವೆಂಕಟಾಪುರ ಗ್ರಾಮಪಂಚಾಯಿತಿ ಅಧ್ಯಕ್ಷೆ ಶಾಂತಮ್ಮ ದೇವರಾಜು.

ವಿಶೇಷ ಅನುಭವ: ‘ಕಳೆದ ಸಾಲಿನ ಪಠ್ಯಪುಸ್ತಕಗಳನ್ನು ಹಿಂಪಡೆದು ಈ ಸಾಲಿಗೆ ಮಕ್ಕಳಿಗೆ ವಿತರಿಸಿ ಓದಲೂ ಪ್ರೇರಣೆ ನೀಡಿದೆವು. ಮನೆಯಲ್ಲಿ ಮಕ್ಕಳನ್ನು ಕೊರೊನಾ ಹಿನ್ನೆಲೆಯಲ್ಲಿ ಆಡಲು ಹೊರಗೆ ಬಿಡದಿರುವುದರಿಂದ ವ್ಯಾಟ್ಸ್‌ಆ್ಯಪ್‌ ಗ್ರೂಪ್ ಮೂಲಕ ಚಟುವಟಿಕೆ, ಪ್ರಯೋಗ, ಚಿತ್ರಕಲೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೇರಣೆ ನೀಡಿದ್ದು ರಜಾ ಅವಧಿಯಲ್ಲಿಯೂ ಮಕ್ಕಳನ್ನು ಕಲಿಕಾ ನಿರಂತರತೆಗೆ ಕೊಂಡೊಯ್ಯಲು, ಕಲಿಕಾ ಕಂದಕವನ್ನು ಕಡಿಮೆಗೊಳಿಸಲು ಸಾಧ್ಯವಾಗಿದೆ’ ಎನ್ನುತ್ತಾರೆ ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ.

ಶಿಕ್ಷಕರಿಂದಲೇ ಧೈರ್ಯಬಂತು: ‘ಮೇ 3ರಂದು ಕೊರೊನಾ ಪಾಸಿಟಿವ್ ಇರುವುದಾಗಿ ವರದಿ ಬಂತು, ಆರೋಗ್ಯ ತುಂಬಾ ಹದಗೆಟ್ಟಿತ್ತು. ಚಿಕ್ಕಬಳ್ಳಾಪುರದ ಆಸ್ಪತ್ರೆಯಲ್ಲಿ ಮೂರ್ನಾಲ್ಕು ದಿನ ಅಡ್ಮಿಟ್ ಆಗಿದ್ದರೂ ಆರೋಗ್ಯ ಸುಧಾರಿಸಲಿಲ್ಲ.ಅಲ್ಲಿನ ಸಾವುನೋವುಗಳನ್ನು ಕಣ್ಣಾರೆ ಕಂಡು ಭಯವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಊರಿಗೆ ಬಂದು ತೋಟದ ಮನೆಯಲ್ಲಿ ಪ್ರತ್ಯೇಕವಾಗಿ ಇದ್ದೆ. ಅದನ್ನು ತಿಳಿದ ಶಿಕ್ಷಕರ ಮತ್ತು ಗ್ರಾಮಕಾರ್ಯಪಡೆಯ ಸದಸ್ಯರು ಬಂದು ಧೈರ್ಯ ಹೇಳಿದರು. ಸಾಕಷ್ಟು ಆರೋಗ್ಯ ಸಲಹೆಗಳನ್ನು ನೀಡಿದರು. ಅವರ ಧೈರ್ಯದ ಮಾತುಗಳಿಂದಲೇ ಬಹುಬೇಗ ಕಾಯಿಲೆಯಿಂದ ಹೊರಬಂದೆ’ ಎನ್ನುತ್ತಾರೆ ಕೊರೊನಾ ಗೆದ್ದ ಗ್ರಾಮಸ್ಥ ರಮೇಶ್.

ಕಲಿಕೆಗೆ ಪ್ರೇರಣೆ: ‘ಮನೆಗಳ ಬಳಿ ಭೇಟಿ ನೀಡಿದಾಗ ಮಕ್ಕಳು ಕಲಿಯಲು ಅಗತ್ಯ ಮಾಹಿತಿ, ಸಲಹೆಗಳನ್ನು ನೀಡಲಾಗುತ್ತಿದೆ. ಕಳೆದ ಸಾಲಿನ ವಿದ್ಯಾಗಮ, ವಠಾರಶಾಲೆಗಳಿಂದ ಪ್ರೇರಣೆಗೊಂಡಿರುವ ವಿದ್ಯಾರ್ಥಿಗಳು ತಾವೇ ತಮ್ಮಮನೆಯ ಬಳಿಯ ದೇವಾಲಯದ ಪ್ರಾಂಗಣ, ವಠಾರಗಳಲ್ಲಿ ಪೋಷಕರ ಸಮ್ಮುಖದಲ್ಲಿ ಕುಳಿತು ಅಧ್ಯಯನ ಮಾಡುತ್ತಿದ್ದಾರೆ. ಕಲಿಕೆಗೆ ಮಕ್ಕಳನ್ನು ಪ್ರೇರಣೆ ನೀಡಲು ಕಾರ್ಯಪಡೆಯ ಕರ್ತವ್ಯ ನೆರವಾಯಿತು’ ಎನ್ನುತ್ತಾರೆ ಶಿಕ್ಷಕ ಬಿ.ನಾಗರಾಜು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.