ADVERTISEMENT

ಕೃಷ್ಣಾ ನದಿಯಿಂದ 5 ಟಿಎಂಸಿ ಅಡಿ ನೀರು ಪೂರೈಸಿ: ಕೇಂದ್ರಕ್ಕೆ ಕೆ.ಸುಧಾಕರ್‌ ಮನವಿ

ಬಯಲು ಸೀಮೆಗೆ ನೀರಾವರಿ; ಸಂಸದ ಡಾ.ಕೆ. ಸುಧಾಕರ್ ಮನವಿ

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 14:30 IST
Last Updated 22 ಜುಲೈ 2024, 14:30 IST
ಡಾ.ಕೆ. ಸುಧಾಕರ್
ಡಾ.ಕೆ. ಸುಧಾಕರ್   

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಹಾಗೂ ಪಕ್ಕದ ಕೋಲಾರ, ತುಮಕೂರು ಜಿಲ್ಲೆಗಳು 2023ರಲ್ಲಿ ತೀವ್ರ ಬರಗಾಲ ಎದುರಿಸಿವೆ. ಈ ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸಬೇಕು ಎಂದು ಸಂಸದ ಡಾ.ಕೆ.ಸುಧಾಕರ್‌ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.

ಸಂಸತ್ ಅಧಿವೇಶನದಲ್ಲಿ ಗಮನ ಸೆಳೆಯುವ ಸೂಚನೆಯಡಿ ವಿಷಯ ಪ್ರಸ್ತಾಪಿಸಿದ ಅವರು, ಕುಡಿಯುವ ನೀರು ಹಾಗೂ ಕೃಷಿಗಾಗಿ ಕೈಗೊಳ್ಳಬೇಕಿರುವ ಶಾಶ್ವತ ಪರಿಹಾರ ಯೋಜನೆ ಹಾಗೂ ಕ್ರಮಗಳ ಬಗ್ಗೆ ವಿವರಿಸಿದರು.

ಕರ್ನಾಟಕ 2023ರಲ್ಲಿ ತೀವ್ರ ಬರಗಾಲ ಎದುರಿಸಿದೆ. ರಾಜ್ಯದ ಬಹುತೇಕ ಎಲ್ಲ  

ADVERTISEMENT

ಈ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುವ ಬದಲು, ರಾಜ್ಯ ಸರ್ಕಾರ ಸಂಸ್ಕರಿತ ನೀರನ್ನು (ಎಸ್‌ಟಿಪಿ) ಈ ಜಿಲ್ಲೆಗಳ ಕೆರೆಗಳಿಗೆ ಹರಿಸುತ್ತಿದೆ. ಇದರಿಂದ ಯಾವೆಲ್ಲ ಪರಿಣಾಮವಾಗಲಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಏಕೆಂದರೆ 80 ಲಕ್ಷ ಜನರು ಈ ನೀರನ್ನು ಕುಡಿಯುವ ಉದ್ದೇಶಕ್ಕೆ ಹಾಗೂ ಕೃಷಿಗೆ ಬಳಸುತ್ತಿದ್ದಾರೆ. ಹೀಗೆ ಎಸ್‌ಟಿಪಿ ನೀರನ್ನು ಕೆರೆ ತುಂಬಿಸಲು, ಕುಡಿಯಲು ಹಾಗೂ ಕೃಷಿಗೆ ಬಳಸುತ್ತಿರುವುದು ಇಡೀ ದೇಶದಲ್ಲೇ ಮೊದಲು ಎಂದು ಹೇಳಿದರು.

ಕೃಷ್ಣಾ ನದಿಯಿಂದ ಕನಿಷ್ಠ 5 ಟಿಎಂಸಿ ಅಡಿ ನೀರನ್ನು ಈ ಭಾಗಕ್ಕೆ ಸರಬರಾಜು ಮಾಡಬಹುದು. ಇದಕ್ಕಾಗಿ ಕಾಲುವೆಗಳನ್ನು ನಿರ್ಮಾಣ ಮಾಡಬಹುದು. ಹಾಗೆಯೇ ಎತ್ತಿನಹೊಳೆ ಯೋಜನೆಯ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವುದು ಕೂಡ ಪರಿಹಾರವಾಗಲಿದೆ. ಜೊತೆಗೆ, ಪಾಲಾರ್‌, ಪೆನ್ನಾರ್‌ ಮತ್ತು ಚಿತ್ರಾವತಿ ನದಿಗಳಲ್ಲಿ ವಿಶೇಷ ಜಲಾನಯನ ಯೋಜನೆ ರೂಪಿಸುವುದು ಕೂಡ ಉತ್ತಮ ಪರಿಹಾರ. ಈ ನದಿಗಳ ಜಲಾನಯನ ಪ್ರದೇಶ, ಅಚ್ಚಕಟ್ಟು ಪ್ರದೇಶವನ್ನು ಸಂರಕ್ಷಣೆ ಮಾಡುವುದರ ಜೊತೆಗೆ ಆದ್ಯತೆ ಮೇರೆಗೆ ಹೂಳೆತ್ತುವ ಕಾಮಗಾರಿ ಕೈಗೊಳ್ಳಬೇಕು. ಗ್ರಾಮಗಳ ಕೆರೆಗಳು ಸೇರಿದಂತೆ ಎಲ್ಲ ಜಲಮೂಲಗಳನ್ನು ಪುನಶ್ಚೇತನ ಮಾಡಬೇಕು ಎಂದು ಸಲಹೆ ನೀಡಿದರು.

ಈ ಪ್ರದೇಶದ ಜನರು ಮಾತ್ರವಲ್ಲದೆ, ಜಾನುವಾರು ಹಾಗೂ ಪರಿಸರ ಉಳಿಸಲು ಶಾಶ್ವತ ಪರಿಹಾರ ನೀಡಬೇಕು. ಈ ಬಗ್ಗೆ ನನ್ನ ಮನವಿ ಪರಿಗಣಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಕೋರುತ್ತೇನೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.