ADVERTISEMENT

ಚಿಕ್ಕಬಳ್ಳಾಪುರ: ಅಂಗನವಾಡಿಗಳ ಅಭಿವೃದ್ಧಿಗೆ ಕ್ರಮ ವಹಿಸಿ: ಬಿ.ಫೌಜಿಯಾ ತರನ್ನುಮ್

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 17:07 IST
Last Updated 15 ಜುಲೈ 2020, 17:07 IST
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಬಿ.ಫೌಜಿಯಾ ತರನ್ನುಮ್ ಮಾತನಾಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಬಿ.ಫೌಜಿಯಾ ತರನ್ನುಮ್ ಮಾತನಾಡಿದರು.   

ಚಿಕ್ಕಬಳ್ಳಾಪುರ: ‘ಅಂಗನವಾಡಿಗಳನ್ನು ಸುಸಜ್ಜಿತವಾಗಿ ಅಭಿವೃದ್ಧಿಪಡಿಸುವ ಜತೆಗೆ ಅವುಗಳ ಮೂಲಕ ಮಕ್ಕಳು, ಮಹಿಳೆಯರು ಮತ್ತು ಗರ್ಭಿಣಿಯರಿಗೆ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಅಧಿಕಾರಿಗಳು ಶ್ರಮ ವಹಿಸಿ ಕಾರ್ಯನಿರ್ವಹಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ಬುಧವಾರ ನಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಅಡಿ ಸಿಗುವ ಸೌಲಭ್ಯಗಳನ್ನು ಎಲ್ಲಾ ಗರ್ಭಿಣಿಯರಿಗೆ ಕಡ್ಡಾಯವಾಗಿ ತಲುಪಿಸಬೇಕು. ಅಂಗನವಾಡಿ ಕೇಂದ್ರಗಳ ಬಳಿ ಖಾಲಿ ಜಾಗ ಇದ್ದರೆ ಕಡ್ಡಾಯವಾಗಿ ಕೈ ತೋಟ ನಿರ್ಮಾಣ ಮಾಡಬೇಕು’ ಎಂದು ಹೇಳಿದರು.

ADVERTISEMENT

‘ಮಾದರಿ ಅಂಗನವಾಡಿ ಕೇಂದ್ರಗಳ ಬಳಿ ನಿರ್ಮಾಣ ಮಾಡಿರುವ ಕೈ ತೋಟದಲ್ಲಿ ಬಗೆಬಗೆ ಹೂ, ಹಣ್ಣು, ತರಕಾರಿ, ಹಾಗೂ ಪೌಷ್ಠಿಕ ಆಹಾರಕ್ಕೆ ಸಂಬಂಧಿಸಿದ ಸೊಪ್ಪುಗಳನ್ನು ಬೆಳೆಸಲು ಪ್ರೋತ್ಸಾಹಿಸುವ ಕೆಲಸವಾಗಬೇಕು. ಅಂಗನವಾಡಿಗೆ ಬರುವ ಪ್ರತಿಯೊಬ್ಬ ಮಗುವಿಗೆ ಕೋವಿಡ್-19 ತುರ್ತು ಸಂದರ್ಭದಲ್ಲಿ ಆರೋಗ್ಯ ತಪಾಸಣೆ ಮಾಡಬೇಕು’ ಎಂದರು.

‘ಅಂಗನವಾಡಿ ಕೇಂದ್ರಗಳ ಬಳಿ ಖಾಲಿ ಜಾಗ ಇದ್ದರೆ ಮಳೆ ನೀರು ಸಂಗ್ರಹಣಾ ವ್ಯವಸ್ಥೆ ಅಳವಡಿಸಬೇಕು. ಒಂದು ವೇಳೆ ಜಾಗದ ಕೊರತೆ ಇದ್ದರೆ ಇಂಗು ಗುಂಡಿ ನಿರ್ಮಾಣ ಮಾಡಬೇಕು. ಅಂಗವಿಕಲ ಮಕ್ಕಳಿದ್ದರೆ ಅಂತವರಿಗೆ ಕಡ್ಡಾಯವಾಗಿ ವಿಶೇಷ ಶೌಚಾಲಯ ನಿರ್ಮಾಣ ಮಾಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಬಾಲ ವಿಕಾಸ ಸಮಿತಿಗಳಿಗೆ ಕಡ್ಡಾಯವಾಗಿ ತರಬೇತಿ ನೀಡಲು ಕ್ರಮ ಕೈಗೊಳ್ಳಬೇಕು. ಆಗಿಂದಾಗೆ ಅಂಗನವಾಡಿಗಳಲ್ಲಿ ಗರ್ಭಣಿಯರಿಗೆ ನೀಡುವ ಮೊಟ್ಟೆ ಇತರ ಪೌಷ್ಟಿಕ ಆಹಾರ ಪದಾರ್ಥಗಳನ್ನು ಕಡ್ಡಾಯವಾಗಿ ವಿತರಣೆ ಮಾಡಬೇಕು. ಇದರಲ್ಲಿ ಯಾವುದೇ ಲೋಪದೋಷಗಳಾಗಬಾರದು’ ಎಂದು ಎಚ್ಚರಿಕೆ ನೀಡಿದರು.

‘ಮಾದರಿ ಅಂಗನವಾಡಿ ಕೇಂದ್ರಗಳಲ್ಲಿ ಕೈ ತೋಟ, ಶೌಚಾಲಯ, ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಹೊರಾಂಗಣ ಹಾಗೂ ಶಾಲಾ ಪೂರ್ವ ಶಿಕ್ಷಣಕ್ಕೆ ಸಂಬಂಧಿಸಿದ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಗೋಡೆ ಬರಹವನ್ನು ಬರೆಸುವ ಮೂಲಕ ಕಲಿಕೆಗೆ ಪ್ರೋತ್ಸಾಹಿಸಲು ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾರಾಯಣಸ್ವಾಮಿ ಹಾಗೂ ಶಿಶು ಅಭಿವೃದ್ಧಿ ಯೋಜನೆಯ ಎಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.