ADVERTISEMENT

ನರೇಗಾ ಯೋಜನೆ ಪ್ರಯೋಜನ ಪಡೆಯಿರಿ

‘ರೋಜ್‌ಗಾರ್ ವಾಹಿನಿ’ ಪ್ರಚಾರಕ್ಕೆ ಚಾಲನೆ ನೀಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಸಲಹೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2019, 9:48 IST
Last Updated 10 ಅಕ್ಟೋಬರ್ 2019, 9:48 IST
ಜಿಲ್ಲಾಡಳಿತ ಭವನದ ಆವರಣದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಬಿ.ಫೌಜಿಯಾ ತರನ್ನುಮ್ ಅವರು ‘ರೋಜ್‌ಗಾರ್ ವಾಹಿನಿ’ ಪ್ರಚಾರ ವಾಹನಗಳಿಗೆ ಚಾಲನೆ ನೀಡಿದರು.
ಜಿಲ್ಲಾಡಳಿತ ಭವನದ ಆವರಣದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಬಿ.ಫೌಜಿಯಾ ತರನ್ನುಮ್ ಅವರು ‘ರೋಜ್‌ಗಾರ್ ವಾಹಿನಿ’ ಪ್ರಚಾರ ವಾಹನಗಳಿಗೆ ಚಾಲನೆ ನೀಡಿದರು.   

ಚಿಕ್ಕಬಳ್ಳಾಪುರ: ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಲ್ಲಿ ಫಲಾನುಭವಿಗಳಿಗೆ ಪ್ಯಾಕೇಜ್ ಮಾದರಿಯಲ್ಲಿ ಸೌಲಭ್ಯಗಳನ್ನು ದೊರಕಿಸಿಕೊಡಲಾಗುತ್ತದೆ. ಗ್ರಾಮೀಣ ಪ್ರದೇಶದ ಜನರು ಈ ಯೋಜನೆಯಡಿ ಸಿಗುವ ಸೌಲಭ್ಯಗಳನ್ನು ಪಡೆದುಕೊಂಡು ಯೋಜನೆಯನ್ನು ಯಶಸ್ವಿಗೊಳಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದರು.


ಜಿಲ್ಲಾಡಳಿತ ಭವನದ ಆವರಣದಲ್ಲಿ ಗುರುವಾರ ನರೇಗಾ ಯೋಜನೆ ಬಗ್ಗೆ ಅರಿವು ಮೂಡಿಸುವ ‘ರೋಜ್‌ಗಾರ್ ವಾಹಿನಿ’ ಪ್ರಚಾರ ವಾಹನಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.


‘ನರೇಗಾ ಯೋಜನೆ ಅಡಿ ಹಳ್ಳಿಗಳಲ್ಲಿ ಕೆರೆ, ಗೋಕಟ್ಟೆ ಹೂಳೆತ್ತುವುದು, ಕೊಳವೆ ಬಾವಿ ಮರುಪೂರಣ ಘಟಕ, ಮೈದಾನ, ಕಣ, ಚೆಕ್ ಡ್ಯಾಂ, ಹೊಲಗಳಿಗೆ ಹೋಗಲು ದಾರಿ, ಕೃಷಿ ಹೊಂಡ, ಅಂಗನವಾಡಿ ಕೇಂದ್ರ, ಗ್ರಾಮೀಣ ಗೋದಾಮು, ಸ್ಮಶಾನ ಅಭಿವೃದ್ಧಿ, ಉದ್ಯಾನ, ಕಾಂಕ್ರಿಟ್ ರಸ್ತೆ ನಿರ್ಮಾಣದಂತಹ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬಹುದಾಗಿದೆ’ ಎಂದು ಹೇಳಿದರು.

ADVERTISEMENT


‘ಕೃಷಿ, ತೋಟಗಾರಿಕೆ, ರೇಷ್ಮೆ ಮತ್ತು ಅರಣ್ಯ ಇಲಾಖೆಗಳ ವ್ಯಾಪ್ತಿಯಲ್ಲಿ ಕೂಡ ನರೇಗಾ ಅಡಿ ಅನೇಕ ಯೋಜನೆಗಳನ್ನು ಅನುಷ್ಟಾನಕ್ಕೆ ಅವಕಾಶವಿದೆ. ರೈತರು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಬಳಿ ವಿಚಾರಣೆ ನಡೆಸಬೇಕು. ವಾರ್ಷಿಕವಾಗಿ ಪ್ರತಿ ಕುಟುಂಬಕ್ಕೆ ನರೇಗಾ ಯೋಜನೆಯಲ್ಲಿ 100 ದಿನಗಳ ಉದ್ಯೋಗ ಒದಗಿಸಲಾಗುತ್ತದೆ. ಪ್ರತಿಯೊಬ್ಬರಿಗೂ ದಿನಕ್ಕೆ ₹249 ಕೂಲಿ ನೀಡಲಾಗುತ್ತದೆ’ ಎಂದರು.


‘ಜನರು ನರೇಗಾ ಉದ್ಯೋಗ ಚೀಟಿಗೆ ಅರ್ಜಿ ಸಲ್ಲಿಸಿದ ಕೂಡಲೇ ಗ್ರಾಮ ಪಂಚಾಯಿತಿ ವತಿಯಿಂದ ಉಚಿತವಾಗಿ ಉದ್ಯೋಗ ಕಾರ್ಡ್ ನೀಡಲಾಗುತ್ತದೆ. ಗ್ರಾಮದಲ್ಲಿ ಕೆಲಸ ಬೇಕು ಎಂದು ಅರ್ಜಿ ಸಲ್ಲಿದರೆ 15 ದಿನಗಳಲ್ಲಿ ಕೆಲಸ ನೀಡಲಾಗುತ್ತದೆ. ಇಲ್ಲದಿದ್ದರೆ ನಿರುದ್ಯೋಗ ಭತ್ಯೆ ಪಡೆಯುವ ಅವಕಾಶವಿದೆ. ವೈಯಕ್ತಿಕ ಫಲಾನುಭವಿಗಳು ಪ್ರಸಕ್ತ ಸಾಲಿನಲ್ಲಿ ವರ್ಷದಲ್ಲಿ ಗರಿಷ್ಠ ₹2 ಲಕ್ಷದ ವರೆಗೆ ಈ ಯೋಜನೆಯಡಿಯಲ್ಲಿ ಸಹಾಯಧನವನ್ನು ಪಡೆಯಬಹುದು’ ಎಂದು ತಿಳಿಸಿದರು.


‘ಕೇಂದ್ರ ಸರ್ಕಾರದ ಯೋಜನೆಯಾದ ನರೇಗಾ ಕುರಿತು ಪರಿಣಾಮಕಾರಿಯಾದ ಅರಿವು ಮೂಡಿಸಲು ರೋಜ್‌ಗಾರ್ ವಾಹಿನಿಗೆ ಚಾಲನೆ ನೀಡಲಾಗಿದೆ. ಈ ವಾಹಿನಿ ಪ್ರತಿ ತಾಲ್ಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸಲಿದೆ. ನರೇಗಾ ಸೌಲಭ್ಯವನ್ನು ಪಡೆಯುವಲ್ಲಿ ಫಲಾನುಭವಿಗಳಿಗೆ ಯಾವುದೇ ಸಮಸ್ಯೆಗಳು ಎದುರಾದರೆ 18004258666 ಈ ದೂರವಾಣಿ ಸಂಖ್ಯೆಗೆ ಸಂಪರ್ಕಿಸಬೇಕು’ ಎಂದು ಹೇಳಿದರು.


ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ನೋಮೇಶ್ ಕುಮಾರ್ ಹಾಜರಿದ್ದರು. ಯೋಜನಾ ನಿರ್ದೇಶಕ ಗಿರಿಜಾ ಶಂಕರ್, ನರೇಗಾ ಯೋಜನೆ ನಿರ್ದೇಶಕ ಮಹೇಶ್‌ ಕುಮಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.