
ಬಾಗೇಪಲ್ಲಿ: ಪಟ್ಟಣದ ಬಾಲಕರ ಸರ್ಕಾರಿ ಶಾಲೆಯಲ್ಲಿ ಪಡಿತರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದ ಪ್ರಭಾರಿ ಮುಖ್ಯಶಿಕ್ಷಕರನ್ನು ವರ್ಗಾವಣೆ ಮಾಡಬೇಕು. ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ನೆರೆಯ ಶಾಲೆಗಳ ವಿಲೀನ ಕ್ರಮ ಬೇಡ. ಸರ್ಕಾರಿ ಹಿರಿಯ ಹಾಗೂ ಪ್ರೌಢಶಾಲೆಗಳ ಬಾಲಕರ ಶಾಲೆಗಳಿಗೆ ಖಾಯಂ ಮುಖ್ಯಶಿಕ್ಷಕರನ್ನು ನೇಮಕ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ, ಕರ್ನಾಟಕ ರಕ್ಷಣಾ ವೇದಿಕೆ (ಸಂಘಟನೆಗಳ ಒಕ್ಕೂಟದ ಕನ್ನಡಿಗರ ಸಾರಥ್ಯದ) ಮುಖಂಡರು ಮಂಗಳವಾರ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.
ಸಂಘಟನೆಯ ತಾಲ್ಲೂಕು ಅಧ್ಯಕ್ಷ ಬಿ.ಎ.ಬಾಬಾಜಾನ್ ಮಾತನಾಡಿ, ಬಾಗೇಪಲ್ಲಿ, ಚೇಳೂರು ತಾಲ್ಲೂಕು ಗಡಿ ಹಾಗೂ ಹಿಂದುಳಿದ ತಾಲ್ಲೂಕು ಆಗಿವೆ. ಗಡಿಯಲ್ಲಿ 60ಕ್ಕೂ ಹೆಚ್ಚು ಕನ್ನಡ ಶಾಲೆಗಳನ್ನು ಮುಚ್ಚಲಾಗಿದೆ. ಸರ್ಕಾರಿ ಶಾಲೆಗಳನ್ನು ಉಳಿಸಿ, ಬೆಳೆಸಬೇಕು. ಶಾಲೆಗಳು ಸುಧಾರಣೆ ಹಾಗೂ ಅಭಿವೃದ್ಧಿ ಆಗಬೇಕು ಎಂದರು.
ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ 350ಕ್ಕೂ ಹೆಚ್ಚು ಕಾಯಂ ಶಿಕ್ಷಕ, ಶಿಕ್ಷಕಿಯರು ಇದ್ದಾರೆ. ಕೆಲ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಇಲ್ಲ. ಪಟ್ಟಣದ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಪಡಿತರ ಧಾನ್ಯಗಳನ್ನು ಪ್ರಭಾರಿ ಮುಖ್ಯಶಿಕ್ಷಕ ವೆಂಕಟೇಶ್ ಕಾಳಸಂತೆಯಲ್ಲಿ ಮಾರಾಟ ಮಾಡಿರುವುದು ಸಿ.ಸಿ ಕ್ಯಮೆರಾಗಳಲ್ಲಿ ಮಾಹಿತಿ ಇದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಶಿಸ್ತುಕ್ರಮ ತೆಗೆದುಕೊಂಡಿಲ್ಲ. ಸೂಕ್ತ ತನಿಖೆ ಮಾಡಿಲ್ಲ. ಕೂಡಲೇ ಈ ಪ್ರಭಾರಿ ಶಿಕ್ಷಕರನ್ನು ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.
ಪಟ್ಟಣದ ಬಾಲಕರ ಹಿರಿಯ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜಿಗೆ ಆಟದ ಮೈದಾನ ಒಂದೇ ಇದೆ. ಇದೇ ಮೈದಾನದಲ್ಲಿ ಗುರುಭವನ ಮಾಡಿದರೆ ಮಕ್ಕಳ ಆಟಕ್ಕೆ ತೊಂದರೆ ಇದೆ. ಗುರುಭವನ ಬೇರೆ ಜಾಗದಲ್ಲಿ ನಿರ್ಮಾಣ ಮಾಡಬೇಕು. ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ವಿಲೀನ ಮಾಡಬಾರದು. ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು ಎಂದರು.
ಪ್ರತಿಭಟನಾ ಸ್ಥಳಕ್ಕೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ ಆಗಮಿಸಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ವಿವಿಧ ಬೇಡಿಕೆಗಳನ್ನು ಹಂತ ಹಂತದಲ್ಲಿ ಬಗೆಹರಿಸುವ ಭರವಸೆ ನೀಡಿದರು.
ಸಂಘಟನೆಯ ಷಬ್ಬೀರ್‌ಭಾಷ, ಎಸ್.ನರೇಶಬಾಬು, ಡಿ.ವಿ.ಮೂರ್ತಿ, ಯಾಸೀನ್, ರವೀಂದ್ರ, ಹಿದಾಯುತುಲ್ಲಾ, ಕಡಪಲ್ಲಿ ಶಿವಪ್ಪ, ಕರಾಟೆ ರಿಯಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.