ADVERTISEMENT

ಶಿಕ್ಷಕರ ಸಮಸ್ಯೆ ನಿರ್ಲಕ್ಷ್ಯ: ಆರೋಪ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2021, 0:54 IST
Last Updated 5 ಆಗಸ್ಟ್ 2021, 0:54 IST
ಚಿಂತಾಮಣಿಯಲ್ಲಿ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಜನಾರ್ದನ ರೆಡ್ಡಿ ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು
ಚಿಂತಾಮಣಿಯಲ್ಲಿ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಜನಾರ್ದನ ರೆಡ್ಡಿ ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು   

ಚಿಂತಾಮಣಿ: ತಾಲ್ಲೂಕಿನಲ್ಲಿ ನಿವೃತ್ತಿ ಹೊಂದುತ್ತಿರುವ ಶಿಕ್ಷಕರಿಗೆ ಹಾಗೂ ಹಾಲಿ ಕೆಲಸ ನಿರ್ವಹಿಸುತ್ತಿರುವ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರಿಗೆ ದೊರೆಯುವ ಸೌಲಭ್ಯ ಒದಗಿಸಿಕೊಡುವಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸಿ, ಶಿಕ್ಷಕರನ್ನು ಪದೇ ಪದೇ ಕಚೇರಿಗೆ ಅಲೆದಾಡಿಸುತ್ತಾರೆ ಎಂದು ತಾಲ್ಲೂಕು ಸರ್ಕಾರಿ ನೌಕರರ ಸಂಘ ಆರೋಪಿಸಿದೆ.

ನೌಕರರ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಜನಾರ್ದನ ರೆಡ್ಡಿ ನೇತೃತ್ವದಲ್ಲಿ ಪದಾಧಿಕಾರಿಗಳು ಬುಧವಾರ ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ಭೇಟಿ ಮಾಡಿ ಶಿಕ್ಷಕರಿಗೆ ನೀಡುತ್ತಿರುವ ತೊಂದರೆಗಳನ್ನು ಕೂಡಲೇ ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಶಿಕ್ಷಕರ ವೇತನವನ್ನು ಪ್ರತಿ ತಿಂಗಳು ಒಂದನೇ ತಾರೀಕು ನೀಡಬೇಕು ಎಂದು ಸರ್ಕಾರಿ ಸುತ್ತೋಲೆ ಇದ್ದರೂ ವೇತನ ಬಿಡುಗಡೆ ವಿಳಂಬ ಆಗುತ್ತಿದೆ. ಅನುದಾನಿತ ಶಾಲೆಗಳ ಶಿಕ್ಷಕರ ವೇತನ ಬಿಡುಗಡೆಗೆ ಸಹಿ ಹಾಕಲು ಹಣ ಪಡೆಯುತ್ತಿರುವ ದೂರುಗಳು ಬರುತ್ತಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಯ ಗಮನಕ್ಕೆ ತರಲಾಯಿತು.

ADVERTISEMENT

ಶಿಕ್ಷಕರ ವೈದ್ಯಕೀಯ ವೆಚ್ಚದ ಬಿಲ್ಲುಗಳಿಗೆ ವಂಟನಾ ಬಿಡುಗಡೆ ಮಾಡುವ ಬಗ್ಗೆ 2-3 ವರ್ಷಗಳಾದರೂ ಕ್ರಮ ಕೈಗೊಂಡಿಲ್ಲ. 2019-20ರಲ್ಲಿ ಸುಮಾರು ₹11 ಲಕ್ಷ ವೈದ್ಯಕೀಯ ಬಿಲ್ಲುಗಳು ತಡವಾಗಿ ಖಜಾನೆಗೆ ನೀಡುವುದರಿಂದ ವಾಪಸ್ಸು ಹೋಗಿದೆ ಎಂದು
ಆರೋಪಿಸಿದರು.

ಎಸ್‌ಡಿಎಂಸಿ ಖಾತೆಗೆ ಬಂದಿರುವ ಮೊತ್ತದಲ್ಲಿ ಸುಮಾರು ₹3 ಲಕ್ಷವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಬಳಸಿಕೊಂಡಿರುವ ಆರೋಪವಿದೆ. ವೃತ್ತಿ ಮತ್ತು ದೈಹಿಕ ಶಿಕ್ಷಣ ಶಿಕ್ಷಕರನ್ನು ಶಾಲೆಗಳಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ನಿಯೋಜನೆ ಮಾಡಿ ಕೆಲಸ ಮಾಡಿಸಲಾಗುತ್ತಿದೆ. ಇದರಿಂದ ಶಾಲೆಗಳಲ್ಲಿ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತಿದೆ. ಪ್ರಾಥಮಿಕ ಶಾಲೆಗಳ ಸುಮಾರು ಶೇ 50ರಷ್ಟು ಶಿಕ್ಷಕರಿಗೆ ಜ್ಯೋತಿ ಸಂಜೀವಿನಿ ಕಾರ್ಡ್‌ ನೀಡಲಾಗಿದೆ. ಉಳಿದ ಶಿಕ್ಷಕರಿಗೆ ಇನ್ನೂ ಕಾರ್ಡ್‌ ನೀಡದೇ ಇರುವ ಬಗ್ಗೆ ತನಿಖೆ ಮಾಡಿ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಿದರು.

ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಶಿವರಾಜ್, ಓಬಯ್ಯ, ಸಿ.ಎಂ.ಮಂಜುನಾಥ್, ಬಿಸಿಎಂ ರೆಡ್ಡಪ್ಪ, ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.