ADVERTISEMENT

ಬೋಧನೆ ಕಷ್ಟ, ಚುನಾವಣೆ ಇಷ್ಟ!

ಪಾಠ ಮಾಡುವುದು ಮರೆತು ಶಾಸಕರ ಹಿಂದೆ ಸುತ್ತುತ್ತಾ ಹಾಲಿನ ಡೇರಿ, ಸೊಸೈಟಿ ಚುನಾವಣೆಗಳಲ್ಲಿ ತೊಡಗುವ ಶಿಕ್ಷಕರು, ಶಿಕ್ಷಕರ ಅಕ್ರಮ ಪ್ರವೃತ್ತಿಗೆ ಕಡಿವಾಣ ಹಾಕುವಂತೆ ಒತ್ತಾಯ

ಈರಪ್ಪ ಹಳಕಟ್ಟಿ
Published 21 ಜನವರಿ 2020, 19:30 IST
Last Updated 21 ಜನವರಿ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳು ಮತ್ತು ವ್ಯವಸಾಯ ಸೇವಾ ಸಹಕಾರಿ ಸಂಘಗಳ ಚುನಾವಣೆ ಋತು ಆರಂಭಗೊಂಡಿದ್ದೇ, ಪ್ರಾಥಮಿಕ ಶಾಲೆಯ ಶಿಕ್ಷಕರ ವಲಯದಲ್ಲಿ ಸಂಚಲನ ಮೂಡಿದೆ.

ಅನೇಕ ಶಿಕ್ಷಕರು ಪಾಠ ಮಾಡುವುದು ಮರೆತು ಪೈಪೋಟಿಯಲ್ಲಿ ಚುನಾವಣೆಗಳಲ್ಲಿ ಭಾಗವಹಿಸಿ, ಅಕ್ರಮಗಳ ಮೂಲಕ ದುಡ್ಡು ಮಾಡುವುದನ್ನೇ ಕಾಯಕ ಮಾಡಿಕೊಂಡು ಶಾಲೆಗಳನ್ನು ನಿರ್ಲಕ್ಷಿಸುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

ಎರಡು ವರ್ಷಗಳ ಹಿಂದಷ್ಟೇ ಶಿಕ್ಷಕರ ಈ ದಂಧೆ ಜಿಲ್ಲೆಯಲ್ಲಿ ಮಿತಿ ಮೀರಿತ್ತು. ಚಿಕ್ಕಬಳ್ಳಾಪುರ ತಾಲ್ಲೂಕಿನ ಬನ್ನಿಕುಪ್ಪೆ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ನಕಲಿ ಸಹಿ ಮಾಡಿ ಮೂರು ಶಿಕ್ಷಕರ ಹೆಸರಿನಲ್ಲಿ ಸಂಭಾವನೆ ಪಡೆದು ವಂಚನೆ ಮಾಡಿದ ಪ್ರಕರಣವನ್ನು 2017ರಲ್ಲಿ ‘ಪ್ರಜಾವಾಣಿ’ ಸರಣಿ ಲೇಖನಗಳ ಮೂಲಕ ಬಯಲಿಗೆ ಎಳೆದಿತ್ತು.

ADVERTISEMENT

ಅದರ ಬೆನ್ನಲ್ಲೇ ಗ್ರಾಮಾಂತರ ಠಾಣೆ ಪೊಲೀಸರು 10 ಶಿಕ್ಷಕರಿಗೆ ನೋಟಿಸ್‌ ನೀಡಿ ವಿಚಾರಣೆಗೆ ಒಳಪಡಿಸಿದ್ದರು. ಜತೆಗೆ ತಾಲ್ಲೂಕಿನ ಅಣಕನೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರಾಘವೇಂದ್ರರಾವ್ ಅವರನ್ನು ಅಮಾನತುಗೊಳಿಸಿದ್ದರು.

ಅದರ ಬೆನ್ನಲ್ಲೇ ತಣ್ಣಗಾಗಿದ್ದ ಶಿಕ್ಷಕರ ‘ಚುನಾವಣೆ ಅವ್ಯವಹಾರ’ಗಳು ಇದೀಗ ಮತ್ತೇ ಚುರುಕುಗೊಂಡಿವೆ ಎನ್ನಲಾಗಿದೆ. ಮಂಗಳವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯಸಭೆಯಲ್ಲಿ ಅನೇಕ ಸದಸ್ಯರು ಚುನಾವಣೆ ಹೆಸರಿನಲ್ಲಿ ಶಿಕ್ಷಕರು ಆಡುತ್ತಿರುವ ‘ಕಳ್ಳಾಟ’ವನ್ನು ಸಭೆಯಲ್ಲಿಯೇ ಬಹಿರಂಗಪಡಿಸುವ ಮೂಲಕ ಶಿಕ್ಷಕರಿಗೆ ಮೂಗುದಾರ ಹಾಕುವಂತೆ ಒತ್ತಾಯಿಸಿದರು.

‘ಸುಪ್ರೀಂ ಕೋರ್ಟ್‌ ಆದೇಶ ಪ್ರಕಾರ ಶಿಕ್ಷಕರನ್ನು ವಿಧಾನಸಭೆ ಮತ್ತು ಲೋಕಸಭೆಯಂತಹ ಸಾರ್ವತ್ರಿಕ ಚುನಾವಣೆಗಳನ್ನು ಹೊರತುಪಡಿಸಿದಂತೆ ಯಾವುದೇ ಚುನಾವಣೆಯಲ್ಲಿ ಭಾಗವಹಿಸಕೂಡದು. ಬರಿ ಬೋಧನಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು’ ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್‌.ಜಿ.ನಾಗೇಶ್‌.

ಆದರೆ ಶಿಕ್ಷಕರು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಸಹಕಾರ ಸಂಘಗಳ ಉಪ ನಿಬಂಧಕ ಕಚೇರಿ ಸಿಬ್ಬಂದಿ ಜತೆಗೆ ಶಾಮೀಲಾಗಿ ಚುನಾವಣೆ ಕರ್ತವ್ಯಕ್ಕೆ ನಿಯೋಜನೆ ಮಾಡಿಸಿಕೊಳ್ಳುವ ಜತೆಗೆ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳಿಂದ ಹಣ ಪಡೆದು ವಂಚನೆಗೆ ಸಹಕರಿಸುವ ಕರಾಳ ಕೆಲಸಕ್ಕೆ ಮುಂದಾಗುತ್ತಿದ್ದಾರೆ ಎನ್ನುವುದು ಜಿಲ್ಲಾ ಪಂಚಾಯಿತಿ ಸದಸ್ಯರ ಆರೋಪ.

‘ಚಿಂತಾಮಣಿ ತಾಲ್ಲೂಕಿನಲ್ಲಿ ಪಾಠಕ್ಕಿಂತ ಚುನಾವಣೆ ಕೆಲಸಕ್ಕೆ ಹೋಗುವ ಶಿಕ್ಷಕರ ಹಾವಳಿ ಹೆಚ್ಚಾಗಿದೆ. ಶಿಕ್ಷಕರ ರಾಜಕೀಯ ಒತ್ತಡ, ಲಾಬಿ ಕಾರಣದಿಂದಾಗಿ ಒಂದೇ ಚುನಾವಣೆಗೆ ಸಂಬಂಧಿಸಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಯವರು ಸಹಕಾರ ಸಂಘಗಳ ಉಪ ನಿಬಂಧಕರಿಗೆ ಮೂರು, ಮೂರು ಬಾರಿ ಚುನಾವಣೆ ಸಿಬ್ಬಂದಿ ನಿಯೋಜನೆ ಪಟ್ಟಿ ಪರಿಷ್ಕರಿಸಿ ಕಳುಹಿಸಿದ ಉದಾಹರಣೆಗಳಿವೆ’ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿಯ ಚಿಂತಾಮಣಿ ತಾಲ್ಲೂಕಿನ ಬಟ್ಲಹಳ್ಳಿ ಕ್ಷೇತ್ರದ ಸದಸ್ಯ ಸ್ಕೂಲ್‌ ಸುಬ್ಬಾರೆಡ್ಡಿ.

‘ಕೆಲ ಶಿಕ್ಷಕರು ಪಾಠ ಮಾಡುವುದನ್ನೇ ಮರೆತು ರಾಜಕಾರಣಿಗಳು, ಶಾಸಕರು ಹಿಂಬಾಲ ಸುತ್ತುತ್ತ, ಚುನಾವಣೆ ಕೆಲಸಗಳಲ್ಲಿ ಹಣ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ. ಇದು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಹಿರಿಯ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಹೇಳಿದರು.

‘ಶಿಡ್ಲಘಟ್ಟ ತಾಲ್ಲೂಕಿನಲ್ಲೂ ಕೆಲ ಶಿಕ್ಷಕರು ಡೇರಿ ಚುನಾವಣೆ ನಡೆಸುವುದನ್ನೇ ಕೆಲಸ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಪಾಠ ಕಲಿಸದ ಸೋಮಾರಿ ಶಿಕ್ಷಕರು ಹೆಚ್ಚಾಗಿ ಇಂತಹ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಚುನಾವಣೆ ಖರ್ಚಿನ ನೆಪದಲ್ಲಿ ಬೇಕಾಬಿಟ್ಟಿ ದುಡ್ಡು ಹೊಡೆಯುವ ದಂಧೆ ನಡೆಯುತ್ತಿದೆ. ಗೋಪಾಲಕೃಷ್ಣ ಎಂಬ ಶಿಕ್ಷಕ ಎಲ್ಲ ಚುನಾವಣೆಗಳಲ್ಲಿ ಅವರೇ ಕಾಣಿಸಿಕೊಳ್ಳುತ್ತಾರೆ. ಯಾವಾಗ ಅವರು ಶಾಲೆಯಲ್ಲಿ ಪಾಠ ಮಾಡುತ್ತಾರೋ ಗೊತ್ತಿಲ್ಲ’ ಎಂದು ಜಿಲ್ಲಾ ಪಂಚಾಯಿತಿಯ ಶಿಡ್ಲಘಟ್ಟ ತಾಲ್ಲೂಕಿನ ಅಬ್ಲೂಡು ಕ್ಷೇತ್ರದ ಸದಸ್ಯ ಮುನಿಯಪ್ಪ ತಿಳಿಸಿದರು.

‘ಬದ್ಧತೆಯಿಂದ ಕೆಲಸ ಮಾಡಬೇಕಾದ ಶಿಕ್ಷಕರು ಪಾಠ ಬಿಟ್ಟು, ವಿವಿಧ ಸಂಘಗಳನ್ನು ಕಟ್ಟಿಕೊಂಡು ಅವುಗಳ ಮೂಲಕ ರಾಜಕೀಯ ಮಾಡಲು ಹೋಗುತ್ತಿದ್ದಾರೆ. ರಾಜಕಾರಣಿಗಳ ಚೇಲಾಗಳ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಹೀಗಾಗಿ ಶಿಕ್ಷಕರಿಗೆ ಯಾವ ಅಧಿಕಾರಿಗಳ ಭಯವೂ ಉಳಿದಿಲ್ಲ. ಅದರ ಪರಿಣಾಮ ಬಡ ಮಕ್ಕಳು ಅನುಭವಿಸಬೇಕಿದೆ’ ಎಂದು ಪ್ರಶಾಂತ್‌ ನಗರ ನಿವಾಸಿ ವಿನಾಯಕ್ ಹೇಳಿದರು.

‘ಅತಿ ಕಡಿಮೆ ಸಂಬಳ ಪಡೆಯುವ ಖಾಸಗಿ ಶಾಲೆಗಳ ಶಿಕ್ಷಕರು ಉತ್ತಮ ಫಲಿತಾಂಶಕ್ಕಾಗಿ ಶ್ರಮಿಸುತ್ತಾರೆ. ಹೆಚ್ಚಿನ ಸಂಬಳ ಪಡೆಯುವ ಸರ್ಕಾರಿ ಶಿಕ್ಷಕರಿಗೆ ಫಲಿತಾಂಶದ ಗೊಡವೆ ಬೇಕಿಲ್ಲ ಇದು ನಮ್ಮ ಶಿಕ್ಷಣ ವ್ಯವಸ್ಥೆ ದುರಂತ. ಸರ್ಕಾರಿ ಶಾಲೆಗಳ ಫಲಿತಾಂಶ ಕಳಪೆಯಾಗುತ್ತಿದೆ ಎಂದರೆ ಶಿಕ್ಷಕರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದೇ ಅರ್ಥ. ಶಿಕ್ಷಕರು ಮಾಡಬೇಕಾದ ಕೆಲಸ ಬಿಟ್ಟು ಬೇರೆನೋ ಮಾಡಲು ಹೊರಟಿದ್ದಾರೆ. ಅದಕ್ಕೆ ಕಡಿವಾಣ ಹಾಕಬೇಕಿದೆ’ ಎಂದು ಗೌರಿಬಿದನೂರಿನ ಹನುಮಂತರೆಡ್ಡಿ ಒತ್ತಾಯಿಸಿದರು.

‘ಸುಪ್ರೀಂ ಕೋರ್ಟ್‌ ಆದೇಶದಂತೆ ಇನ್ನು ಮುಂದೆ ಯಾವುದೇ ಪ್ರಾಥಮಿಕ ಶಾಲೆಯ ಶಿಕ್ಷಕರನ್ನು ಡೇರಿ, ಸೊಸೈಟಿ ಚುನಾವಣೆಗಳಲ್ಲಿ ನಿಯೋಜಿಸದಂತೆ ಆದೇಶ ಹೊರಡಿಸಬೇಕು. ಆದೇಶ ಉಲ್ಲಂಘಿಸುವ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಮಂಚೇನಹಳ್ಳಿ ಕ್ಷೇತ್ರದ ಸದಸ್ಯ ಪಿ.ಎನ್.ಪ್ರಕಾಶ್‌ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.