ADVERTISEMENT

ಚಿಕ್ಕಬಳ್ಳಾಪುರ: ಅಂಗನವಾಡಿಗಳಿಗೆ ಕೊಳೆತ ಮೊಟ್ಟೆ

ಗುತ್ತಿಗೆದಾರರಿಂದ ಮೊಟ್ಟೆ ಪಡೆಯಲು ನಿರಾಕರಿಸಿದ ಕೆಲವು ಕೇಂದ್ರಗಳ ಕಾರ್ಯಕರ್ತೆಯರು

ಡಿ.ಎಂ.ಕುರ್ಕೆ ಪ್ರಶಾಂತ
Published 19 ಮಾರ್ಚ್ 2023, 5:57 IST
Last Updated 19 ಮಾರ್ಚ್ 2023, 5:57 IST
ದೇವಗುಟ್ಟಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಮೊಟ್ಟೆಗಳ ಪರಿಶೀಲನೆ
ದೇವಗುಟ್ಟಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಮೊಟ್ಟೆಗಳ ಪರಿಶೀಲನೆ   

ಚಿಕ್ಕಬಳ್ಳಾಪುರ: ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಗುತ್ತಿಗೆದಾರರು ಪೂರೈಸುತ್ತಿರುವ ಮೊಟ್ಟೆಗಳು ತೀರಾ ಕಳಪೆ ಆಗಿವೆ. ಕೊಳೆತ ಮೊಟ್ಟೆಗಳನ್ನು ಸಹ ನೀಡಲಾಗುತ್ತಿದೆ ಎನ್ನುವ ದೂರು ಕಾರ್ಯಕರ್ತೆಯರಿಂದ ಕೇಳಿ ಬರುತ್ತಿದೆ. ಈ ಕಾರಣದಿಂದ ಕೆಲವು ಕೇಂದ್ರಗಳ ಕಾರ್ಯಕರ್ತೆಯರು ಗುತ್ತಿಗೆದಾರರಿಂದ ಮೊಟ್ಟೆ ಪಡೆಯಲು ನಿರಾಕರಿಸಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳಿಗೂ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

10 ದಿನಕ್ಕೆ ಒಮ್ಮೆಯಂತೆ ತಿಂಗಳಿಗೆ ಮೂರು ಬಾರಿ ಮೊಟ್ಟೆ ಪೂರೈಸಬೇಕು. ಆದರೆ ಗುತ್ತಿಗೆದಾರರು ತಿಂಗಳಿಗೆ ಒಮ್ಮೆ ಮಾತ್ರ ಮೊಟ್ಟೆ ಪೂರೈಕೆ ಮಾಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಅಂಗನವಾಡಿ ನೌಕರರ ಸಂಘವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ದೂರು ಸಹ ನೀಡಿದೆ. ಕೊಳೆತ ಮೊಟ್ಟೆಗಳ ಪೂರೈಕೆ ಕಾರಣದಿಂದ ಅಂಗನವಾಡಿ ಕಾರ್ಯಕರ್ತೆಯರಿಗೂ ಸ್ಥಳೀಯವಾಗಿ ಇರುಸು ಮುರುಸಾಗುತ್ತಿದೆ.

‘ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡುತ್ತಿರುವ ಮೊಟ್ಟೆಗಳು ತುಂಬಾ ಕೆಟ್ಟದಾಗಿರುತ್ತವೆ. ತಿಂಗಳಿಗೆ ಒಂದು ಸಲ ಸರಬರಾಜು ಮಾಡಲಾಗುತ್ತಿದೆ. ಮೊಟ್ಟೆಗಳು ಚಿಕ್ಕದಾಗಿ ಇರುತ್ತವೆ. ಇದನ್ನು ಬದಲಾವಣೆ ಮಾಡಬೇಕು, ಇಲ್ಲವೆ ಗುತ್ತಿಗೆ ರದ್ದುಪಡಿಸಬೇಕು’ ಎಂದು ಸಂಘವು ಉಪನಿರ್ದೇಶಕರಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಲಾಗಿದೆ.

ADVERTISEMENT

‌ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಿಲ್ಲ: ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಂಗನವಾಡಿ ನೌಕರರ ಸಂಘವು ದೂರುತ್ತದೆ. ಗುತ್ತಿಗೆದಾರರ ಜತೆ ಅಧಿಕಾರಿಗಳು ಶಾಮೀಲಾಗಿದ್ದಾರೆಯೇ ಎನ್ನುವ ಅನುಮಾನ ಸಹ ಅಂಗನವಾಡಿ ಕಾರ್ಯಕರ್ತೆಯರಲ್ಲಿ ಇದೆ. ಇಂತಿಷ್ಟು ಸಮಯಕ್ಕೆ ಮೊಟ್ಟೆ ಪೂರೈಸಬೇಕು ಎನ್ನುವ ನಿಯಮಗಳಿವೆ. ಆದರೆ ಅವು ಪಾಲನೆ ಆಗುತ್ತಿಲ್ಲ. ಅಲ್ಲದೆ ಕೊಳೆತ ಮೊಟ್ಟೆಗಳನ್ನು ಪೂರೈಸಲಾಗುತ್ತಿದೆ. ಇದೆಲ್ಲ ಅಧಿಕಾರಿಗಳ ಗಮನಕ್ಕೆ ಬರದಿರಲು ಸಾಧ್ಯವೇ ಎಂದು ಕಾರ್ಯಕರ್ತೆಯರು ಅಸಮಾಧಾನ ವ್ಯಕ್ತಪಡಿಸುವರು.

ಈ ಹಿಂದೆ ಅಂಗನವಾಡಿ ಖಾತೆಗಳಿಗೆ ಮೊಟ್ಟೆ ಖರೀದಿಸಲು ಹಣ ಹಾಕಲಾಗುತ್ತಿತ್ತು. ಆದರೆ ಮೊಟ್ಟೆ ಖರೀದಿಸಿ ಐದಾರು ತಿಂಗಳಾದರೂ ಹಣವನ್ನು ಸರ್ಕಾರ ಪಾವತಿಸುತ್ತಿರಲಿಲ್ಲ. ಇದಕ್ಕೆ ಕಾರ್ಯಕರ್ತೆಯರು ಅಸಮಾಧಾನ ವ್ಯಕ್ತ‍ಪಡಿಸಿದ್ದರು. ಮುಂಗಡವಾಗಿಯೇ ಖರೀದಿಸಲು ಹಣ ನೀಡಿ ಎಂದು ಕೋರಿದ್ದರು. ಈ ನಡುವೆ ಸರ್ಕಾರ ಮೊಟ್ಟೆ ಪೂರೈಕೆಗೆ ಖಾಸಗಿಯವರಿಗೆ ಗುತ್ತಿಗೆ ನೀಡಿತು.

ಖಾಸಗಿಯವರು ಸೂಕ್ತವಾಗಿ ಮೊಟ್ಟೆಗಳನ್ನು ಪೂರೈಸುತ್ತಿಲ್ಲ ಎನ್ನುವ ದೂರುಗಳು ಕಾರ್ಯಕರ್ತೆಯರಲ್ಲಿದೆ.

***

‘ನೋಡಿ ಪ್ರತಿಕ್ರಿಯಿಸುವೆ’

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ‘ಪ್ರಜಾವಾಣಿ’ ಪ್ರತಿನಿಧಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಕರೆ ಮಾಡಿದಾಗ, ‘ನಮಗೆ ಇನ್ನೂ ವರದಿ ಬಂದಿಲ್ಲ. ನಾನು ನೋಡುತ್ತೇನೆ. ವಿಸಿಯಲ್ಲಿ ಇದ್ದೇನೆ ಆ ಮೇಲೆ ಮಾತನಾಡುವೆ’ ಎಂದು ಪ್ರತಿಕ್ರಿಯಿಸಿದರು.

***

‘ಎಲ್ಲೆಡೆಯೂ ಸಮಸ್ಯೆ’

ಶಿಡ್ಲಘಟ್ಟ ತಾಲ್ಲೂಕು ಗಂಜಿಗುಂಟೆ ಅಂಗನವಾಡಿ ಕೇಂದ್ರಕ್ಕೆ ಜನವರಿಯಲ್ಲಿ ಒಟ್ಟು 900 ಮೊಟ್ಟೆ ಕೊಡಬೇಕು. ಇಷ್ಟು ಮೊಟ್ಟೆಯನ್ನು ಮೂರು ಬಾರಿ ಕೊಡಬೇಕು. ಆದರೆ ಒಂದೇ ಸಲ ತಂದಿದ್ದರು. ನಾವು ವಾಪಸ್ ಕಳುಹಿಸಿದೆವು’ ಎನ್ನುತ್ತಾರೆ ಈ ಅಂಗನವಾಡಿಯ ಕೇಂದ್ರದ ಸಿಬ್ಬಂದಿಯೂ ಆಗಿರುವ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ಲಕ್ಷ್ಮಿದೇವಮ್ಮ.

ಬಾಗೇಪಲ್ಲಿ, ಶಿಡ್ಲಘಟ್ಟ, ಚಿಂತಾಮಣಿ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಿಗೆ ಒಬ್ಬ ಗುತ್ತಿಗೆದಾರರು, ಚಿಕ್ಕಬಳ್ಳಾಪುರ, ಗೌರಿಬಿದನೂರು ಮತ್ತು ಗುಡಿಬಂಡೆ ತಾಲ್ಲೂಕಿಗೆ ಒಬ್ಬ ಗುತ್ತಿಗೆದಾರು ಮೊಟ್ಟೆ ಪೂರೈಸುತ್ತಿದ್ದಾರೆ. ಮೊಟ್ಟೆ ಪೂರೈಕೆ ವಿಚಾರದಲ್ಲಿ ಜಿಲ್ಲೆಯ ಎಲ್ಲೆಡೆಯೂ ಇದೇ ಅಧ್ವಾನವಿದೆ ಎನ್ನುತ್ತಾರೆ.

ಮೊಟ್ಟೆಗಳು ತೀರಾ ಸಣ್ಣ ಗಾತ್ರದಲ್ಲಿವೆ. ಕೊಳೆತಿರುತ್ತವೆ. ಈ ಎಲ್ಲ ಕಾರಣದಿಂದ ಕೆಲವು ಕೇಂದ್ರಗಳವರು ಮೊಟ್ಟೆಗಳನ್ನು ತೆಗೆದುಕೊಂಡಿಲ್ಲ. ಗುತ್ತಿಗೆ ಬದಲಾಗಬೇಕು ಇಲ್ಲವೆ ಅವರಿಗೆ ಎಚ್ಚರಿಕೆ ನೀಡಬೇಕು ಎಂದು ಆಗ್ರಹಿಸುತ್ತಾರೆ.

***

‘ಮೊಟ್ಟೆ ಪಡೆದಿಲ್ಲ’

ನಮ್ಮ ಅಂಗನವಾಡಿ ಕೇಂದ್ರಕ್ಕೆ ಪೂರೈಕೆ ಆಗಿರುವ ಮೊಟ್ಟೆಗಳಲ್ಲಿ ನೀರಿನಂತ ದ್ರವ ವಸರುತ್ತಿದೆ. ಕೆಲವು ಮೊಟ್ಟೆಗಳು ಕಪ್ಪಾಗಿವೆ. ಮೊಟ್ಟೆ ಎತ್ತಿದರೆ ಹಾಳಾಗುತ್ತವೆ. ಇಂತಹ ಮೊಟ್ಟೆಗಳನ್ನು ಪೂರೈಕೆ ಮಾಡಲಾಗುತ್ತಿದೆ. ಈ ಅಧ್ವಾನದ ಕಾರಣದಿಂದ ಕೆಲವು ಕೇಂದ್ರಗಳವರು ಮೊಟ್ಟೆ ಪಡೆದಿಲ್ಲ’ ಎನ್ನುತ್ತಾರೆ ಹೆಸರು ಬರೆಯಬೇಡಿ ಎನ್ನುವ ಅಂಗನವಾಡಿ ಕಾರ್ಯಕರ್ತೆಯೊಬ್ಬರು.

ಇದು ನಮ್ಮ ಒಂದು ಕೇಂದ್ರದ ಸಮಸ್ಯೆಯಲ್ಲ. ಬಹುತೇಕ ಕಡೆಗಳಲ್ಲಿಯೂ ಇದೇ ರೀತಿ ಇದೆ. ಈ ಬಗ್ಗೆ ನಮ್ಮ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿಯೂ ಎಲ್ಲರೂ ಮಾಹಿತಿ ನೀಡುತ್ತಿರುತ್ತಾರೆ. ಮೊಟ್ಟೆ ಕೊಟ್ಟಿಲ್ಲ ಎಂದು ನಮ್ಮನ್ನು ದೂರುತ್ತಾರೆ ಎಂದು ನಾವು ಜನಪ್ರತಿನಿಧಿಗಳಿಗೂ ಈ ಬಗ್ಗೆ ಮಾಹಿತಿ ನೀಡಿದ್ದೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.