ADVERTISEMENT

ಚಿಕ್ಕಬಳ್ಳಾಪುರ: ಮದ್ಯ ಕದ್ದು ನಾಟಕವಾಡಿದ ಮಾಲೀಕ

ಗೋಲ್ಡನ್ ಬಾರ್ ಅಂಡ್ ರೆಸ್ಟೋರೆಂಟ್‌ ಕಳ್ಳತನ ಬೇಧಿಸಿದ ಪೊಲೀಸರು, ನಗರಸಭೆ ಸದಸ್ಯ ಸೇರಿ ನಾಲ್ಕು ಜನರ ಬಂಧನ

​ಪ್ರಜಾವಾಣಿ ವಾರ್ತೆ
Published 4 ಮೇ 2020, 13:41 IST
Last Updated 4 ಮೇ 2020, 13:41 IST
ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು   

ಚಿಕ್ಕಬಳ್ಳಾಪುರ: ನಗರ ಹೊರವಲಯದ ಗೋಲ್ಡನ್ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಏಪ್ರಿಲ್ 30 ರಂದು ನಡೆದಿದ್ದ ಕಳ್ಳತನ ಪ್ರಕರಣ ಬೇಧಿಸಿರುವ ಪೊಲೀಸರು, ಬಾರ್‌ ಮಾಲೀಕ, ನಗರಸಭೆಯ 14ನೇ ವಾರ್ಡ್‌ ಸದಸ್ಯ ಕೆ.ಆರ್‌.ದೀಪಕ್ ಸೇರಿದಂತೆ ನಾಲ್ಕು ಆರೋಪಿಗಳನ್ನು ಬಂಧಿಸಿದ್ದಾರೆ.

ಬಾರ್‌ ಕಳ್ಳತನ ಕುರಿತಂತೆ ನಂದಿಗಿರಿಧಾಮ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ತನಿಖೆ ನಡೆಸಿ ಸೂಕ್ತ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿ, ಮಾಲೀಕ ದೀಪಕ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆರೋಪಿಯು ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದರು.

ಲಾಕ್‌ಡೌನ್‌ ಸಮಯದಲ್ಲಿ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡಿ, ಲಾಭ ಗಳಿಸುವ ದುರಾಸೆಯಿಂದ ಮಾಲೀಕನೇ ಬಾರ್‌ನ ಹಿಂಭಾಗದ ಗೋಡೆಗೆ ಕನ್ನ ಕೊರೆೆದು,ಸಿಸಿ ಟಿ.ವಿ ಕ್ಯಾಮೆರಾಗಳನ್ನು ನಾಶಪಡಿಸಿ ಸುಮಾರು ₹1 ಲಕ್ಷ ಮೌಲ್ಯದ ಮದ್ಯ ಹೊರಸಾಗಿಸಿ, ಬಳಿಕ ಕಳ್ಳತನದ ಕಥೆ ಸೃಷ್ಟಿಸಿದ್ದ ಎಂದು ಹೇಳಿದರು.

ADVERTISEMENT

ಕಂದವಾರದ ನಿವಾಸಿಯಾಗಿರುವ ದೀಪಕ್‌ ಈ ಕೃತ್ಯಕ್ಕಾಗಿ ಸ್ಥಳೀಯ ನಿವಾಸಿಗಳಾದ ವಿಜಯ್‌, ಸಂತೋಷ್‌ ಸೇರಿದಂತೆ ಏಳು ಜನರ ನೆರವು ಪಡೆದು ಈ ಕೃತ್ಯ ನಡೆಸಿದ್ದು, ಈ ಪೈಕಿ ನಾಲ್ಕು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರಿಂದ ಏಳು ಕ್ರೆಟ್‌ ಮದ್ಯ, ₹70 ಸಾವಿರ ನಗದು, ಒಂದು ಆಟೊ, ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.