
ಶಿಡ್ಲಘಟ್ಟ: ತಾಲ್ಲೂಕಿನ ಸಾದಲಿ ಗ್ರಾಮದ ಸಾದಲಮ್ಮನ ದೇವಸ್ಥಾನದ ಆವರಣದಲ್ಲಿ ದೇವಾಲಯದ ಸಮಿತಿ ಸದಸ್ಯರಿಗೆ ಶಾಸನ ಪಠ್ಯದ ಫಲಕವನ್ನು ವಿತರಿಸಲಾಯಿತು.
ಈ ವೇಳೆ ಶಾಸನ ತಜ್ಞ ಕೆ.ಧನಪಾಲ್ ಮಾತನಾಡಿ, ಸಾದಲಮ್ಮ ದೇವಿ ದೇವಾಲಯ ಚೋಳರ ಕಾಲಕ್ಕೇ ಸೇರಿರುವುದ ಎಂಬುದಕ್ಕೆ ಈ ಶಾಸನವು ಒಂದು ಪುರಾವೆ ಆಗಿದೆ. ಇನ್ನು 18 ವರ್ಷಗಳಿಗೆ ಈ ಶಾಸನ ಹಾಕಿಸಿ ಒಂದು ಸಾವಿರ ವರ್ಷಗಳಾಗುತ್ತವೆ. ಚೋಳರ ಕಾಲದ ಈ ಪುರಾತನ ಶಾಸನದಲ್ಲಿರುವ ತಮಿಳು ಭಾಷೆಯನ್ನು ಹಲವು ವಿದ್ವಾಂಸರು ಓದಿ ಅರ್ಥೈಸಿ ಕೊಟ್ಟಿರುವುದನ್ನು ಫಲಕದ ರೂಪದಲ್ಲಿ ಬರೆಸಿ ಗ್ರಾಮಸ್ಥರಿಗೆ ನೀಡಲು ಸಂತಸವಾಗುತ್ತಿದೆ ಎಂದು ತಿಳಿಸಿದರು.
ಸಾದಲಮ್ಮನ ದೇವಸ್ಥಾನ ಆವರಣದಲ್ಲಿ ತಮಿಳು ಶಾಸನವನ್ನು ಸಂರಕ್ಷಿಸಿ ಇಡಲಾಗಿದೆ. ಈ ಶಾಸನದಲ್ಲಿ ಏನಿದೆ ಎಂಬುದನ್ನು ಇಲ್ಲಿಗೆ ಆಗಮಿಸುವ ಭಕ್ತರು ಓದುವಂತಾಗಬೇಕು ಎಂಬುದು ಕರ್ನಾಟಕ ಇತಿಹಾಸ ಅಕಾಡೆಮಿ ಮತ್ತು ಪುರಾತತ್ವ ಇಲಾಖೆಯ ಉದ್ದೇಶ. ಈ ರೀತಿಯ ಶಾಸನಗಳನ್ನು ಸಂರಕ್ಷಿಸುವುದು ಹಾಗೂ ಅದರಲ್ಲಿರುವ ಐತಿಹಾಸಿಕ ವಿವರಗಳನ್ನು ಜನರಿಗೆ ತಿಳಿಸಿಕೊಡಲಾಗುತ್ತಿದೆ. ಈ ನಿಟ್ಟಿನಲ್ಲಿ ತಮಿಳು ಶಾಸನದಲ್ಲಿರುವ ವಿಚಾರಗಳನ್ನು ಕನ್ನಡಕ್ಕೆ ಅನುವಾದ ಮಾಡಿ, ಸಾರಾಂಶದ ರೀತಿಯಲ್ಲಿ ಭಿತ್ತಿಪತ್ರವನ್ನು ಸಿದ್ಧಪಡಿಸಿದ್ದೇವೆ. ಇದರಿಂದ ಇಲ್ಲಿಗೆ ಆಗಮಿಸುವ ಭಕ್ತರಿಗೆ ಈ ಶಾಸನದ ಮಹತ್ವ ತಿಳಿಯುತ್ತದೆ ಎಂದು ಹೇಳಿದರು.
ಕ್ರಿ.ಶ.1044ನೇ ಇಸವಿಯ ಫೆಬ್ರುವರಿ ತಿಂಗಳಿನಲ್ಲಿ ಈ ತಮಿಳು ಶಾಸನವನ್ನು ಚೋಳರ ಮೊದಲನೇ ರಾಜಾಧಿರಾಜನ 26ನೇ ಆಳ್ವಿಕೆ ವರ್ಷದಲ್ಲಿ ಕೆತ್ತಲಾಗಿದೆ. ರಾಜಾಧಿರಾಜ ಚೋಳನ ಅಧೀನದಲ್ಲಿ ಸಾದಲಿನಾಡಿನ ಆಡಳಿತಗಾರನಾಗಿದ್ದ ಇರುಗಯ್ಯಗಾಮುಂಡನ ಮಗ ಅಳಗಿಯಚೋಳಗಾಮುಂಡನು, ಗಂಗಿಮಯ್ಯನ ಮಗ ಮಾದತ್ತಿಡಯ್ಯ ಎಂಬ ಶಿವ ಬ್ರಾಹ್ಮಣನಿಗೆ ದೊಡ್ಡ ಕೆರೆ ಮತ್ತು ಚಿಕ್ಕ ಕೆರೆಗಳ ಕಾನೆಗಳಲ್ಲಿನ ಕೆಲವು ಗದ್ದೆಗಳನ್ನು ದೇವಭೋಗವಾಗಿ ಕೊಟ್ಟ ವಿವರವನ್ನು ಈ ಶಾಸನ ಒಳಗೊಂಡಿದೆ. ಸಾದಲಮ್ಮ (ಪಿಡಾರಿಯಾರ್) ಮತ್ತು ಬ್ರಹ್ಮೀಶ್ವರ ದೇವರ ಸೇವೆಗಾಗಿ ಈ ದಾನವು ಆ ಬ್ರಾಹ್ಮಣರಿಗೆ ಸಂದಿದೆ. ಈ ಶಾಸನವನ್ನು ಓದಿ ಅರ್ಥೈಸಲು ನನ್ನ ಗುರುಗಳು ನೆರವಾಗಿದ್ದಾರೆ ಎಂದರು.
ಶಿಕ್ಷಕ ನಾಗೇಶ್ ಮಾತನಾಡಿ, ನಾವು ಚಿಕ್ಕಂದಿನಿಂದಲೂ ಈ ಕಲ್ಲಿನ ಕುರಿತು ನಿಗೂಢತೆಯಿತ್ತು. ಜನರು ಇದನ್ನೂ ದೇವರ ರೀತಿಯಲ್ಲಿಯೇ ಪೂಜೆ ಮಾಡುತ್ತಾ ಬಂದಿದ್ದಾರೆ. ಪ್ರೊ.ಕೆ.ಆರ್.ನರಸಿಂಹನ್ ಮತ್ತು ಧನಪಾಲ್ ಅವರು ನಮ್ಮ ಗ್ರಾಮಕ್ಕೆ ಬಂದು ಇದು ಶಾಸನವೆಂಬುದನ್ನು ತಿಳಿಸಿ, ವಿದ್ವಾಂಸರ ನೆರವಿನೊಂದಿಗೆ ಅದರಲ್ಲಿ ಬರೆದಿರುವುದನ್ನು ಓದಿ ನಮಗೆ ತಿಳಿಸಿಕೊಟ್ಟಿದ್ದಾರೆ. ಗ್ರಾಮದ ಪೆದ್ದಗುಡಿ (ಲಕ್ಷ್ಮಿ ಚನ್ನಕೇಶವ ದೇವಸ್ಥಾನ) ಮತ್ತು ಸಾದಲಿ ಸುತ್ತಮುತ್ತಲಿನ 25ಕ್ಕೂ ಹೆಚ್ಚು ವೀರಗಲ್ಲುಗಳನ್ನೂ ಸಂರಕ್ಷಣೆಯ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದು ಹೇಳಿದರು.
ಶಿವಭಕ್ತರಾಗಿದ್ದ ಚೋಳರು
ರಾಜೇಂದ್ರ ಚೋಳನ ಹಿರಿಯ ಮಗ ರಾಜರಾಜಚೋಳ. 11ನೇ ಶತಮಾನದಲ್ಲಿ ದಕ್ಷಿಣ ಕರ್ನಾಟಕವನ್ನು ಆಳಿದ ಚೋಳ ವಂಶಸ್ಥರಲ್ಲಿ ಈತ ಮೂರನೆಯವನು. ಭೋಗ ನಂದೀಶ್ವರ ದೇವಾಲಯ ದೇವನಹಳ್ಳಿ ತಾಲ್ಲೂಕಿನ ಗಂಗವಾರದ ಸೋಮೇಶ್ವರ ದೇವಾಲಯಗಳ ಜೀರ್ಣೋದ್ಧಾರ ಆಗಿದ್ದು ಕೂಡಾ ಈತನ ಕಾಲದಲ್ಲಿಯೇ. ಈತನ ನಂತರ ಚೋಳಸಿಂಹಾಸನ ಏರಿದ ಕುಲೋತುಂಗ ಚೋಳ ವಿಕ್ರಮಚೋಳರು ಕೂಡಾ ಶಿಡ್ಲಘಟ್ಟ ತಾಲ್ಲೂಕಿನ ಚಿಲಕಲನೇರ್ಪು ನಂದನವನ ಸುಗಟೂರುಗಳಲ್ಲಿ ಶಿವಾಲಯಗಳ ನಿರ್ಮಾಣ ಜೀರ್ಣೋದ್ಧಾರ ಮಾಡಿಸಿದ್ದಾರೆ. ಚೋಳರು ಪರಮ ಶಿವಭಕ್ತರು ಎನ್ನುವುದಕ್ಕೆ ಈ ಕಾರ್ಯಗಳೇ ನಿದರ್ಶನವಾಗಿವೆ. ಡಿ.ಎನ್.ಸುದರ್ಶನರೆಡ್ಡಿ ಶಾಸನತಜ್ಞ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.