
ಚಿಕ್ಕಬಳ್ಳಾಪುರದಲ್ಲಿ ಕೋಟ್ಪಾ ದಾಳಿ ನಡೆಸಿ ಜಾಗೃತಿ ಮೂಡಿಸಲಾಯಿತು
ಚಿಕ್ಕಬಳ್ಳಾಪುರ: ತಂಬಾಕು ಮುಕ್ತ ಯುವ ಅಭಿಯಾನದ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಇತರ ಇಲಾಖೆಗಳ ಸಹಯೋಗದಲ್ಲಿ ನಗರದ ಎಂ.ಜಿ ರಸ್ತೆಯಲ್ಲಿ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕರಿಗೆ ಬುಧವಾರ ದಂಡ ವಿಧಿಸಲಾಯಿತು.
ಈ ವೇಳೆ ಜಿಲ್ಲಾ ತಂಬಾಕು ನಿಯಂತ್ರ ಕೋಶ ಮತ್ತು ತಾಲ್ಲೂಕು ತನಿಖಾದಳದವರ ಸಹಯೋಗದಲ್ಲಿ ಕೋಟ್ಪಾದಾಳಿ ನಡೆಯಿತು. ಒಟ್ಟು 17 ಪ್ರಕರಣಗಳನ್ನು ದಾಖಲಿಸಿ ₹ 1,400 ದಂಡ ಸಂಗ್ರಹಿಸಲಾಯಿತು.
ವಾರ್ತಾ ಇಲಾಖೆಯ ವಾರ್ತಾ ಸಹಾಯಕ ಮಂಜುನಾಥ್ ಎಂ.ಆರ್, ಮಾತನಾಡಿ, ಹೋಟೆಲ್, ಬೇಕರಿ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಅಂಗಡಿಗಳ ಮಾಲೀಕರು ಧೂಮಪಾನ ನಿಷೇಧಿತ ನಾಮಫಲಕವನ್ನು ಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೆ ಕೋಟ್ಪಾ ಕಾಯ್ದೆಯಡಿ ₹ 1000ವರೆಗೆ ದಂಡ ವಿಧಿಸಲಾಗುವುದು ಎಂದು ಹೇಳಿದರು.
ನಿಯಮ ಬಾಹಿರವಾಗಿ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕರಿಗೆ ದಂಡ ವಿಧಿಸಲಾಗುವುದು. ಮುಂದಿನ ದಿನಗಳಲ್ಲಿ ಇಂತಹ ವಹಿವಾಟನ್ನು ಮಾಡಿದರೆ ಕಠಿಣ ಸಜೆಗೆ ಒಳಪಡಿಸಲಾಗುತ್ತದೆ ಎಂದು ತಿಳಿಸಿದರು.
ಸಾರ್ವಜನಿಕರು ತಂಬಾಕು ಸೇವನೆ ತ್ಯಜಿಸಲು ಜಿಲ್ಲಾ ಆಸ್ಪತ್ರೆಯಲ್ಲಿ ಸಿಗುವ ಉಚಿತ ಎನ್.ಆರ್.ಟಿ ಚಿಕಿತ್ಸೆ ಪಡೆದು ವ್ಯಸನ ಮುಕ್ತರಾಗಬೇಕು ಎಂದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ನಾರಾಯಣಸ್ವಾಮಿ, ಪ್ರಿಯಾ ಮತ್ತು ಸಮಾಜ ಕಾರ್ಯಕರ್ತ ಮಂಜುನಾಥ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ತಾಲ್ಲೂಕು ತನಿಖಾದಳದ ಅಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.