ಚಿಕ್ಕಬಳ್ಳಾಪುರ: ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಹಾರೋಬಂಡೆ ಬಳಿ ಭಾನುವಾರ ನಸುಕಿನ ಜಾವ ಕಳ್ಳರ ತಂಡವೊಂದು ದನದ ವ್ಯಾಪಾರಿಗಳ ಕಾರು ಅಡ್ಡಗಟ್ಟಿ, ಒಬ್ಬರಿಗೆ ಚಾಕುವಿನಿಂದ ಇರಿದು ವ್ಯಾಪಾರಿಗಳ ಬಳಿ ಇದ್ದ ₹3.10 ಲಕ್ಷ ನಗದು ಮತ್ತು ಮೂರು ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದೆ.
ಬೆಂಗಳೂರಿನ ಶಿವಾಜಿ ನಗರದ ಸಾಧಿಕ್, ಫಕ್ರುದ್ದೀನ್ ಬಾಬಾ, ಮುಷರಫ್ ಹಾಗೂ ಅರುಣ್ ಎಂಬುವವರು ಆಂಧ್ರಪ್ರದೇಶದ ರಾಯಲ್ ಸೀಮಾದಲ್ಲಿ ಭಾನುವಾರ ನಡೆಯುವ ದನಗಳ ಸಂತೆಗೆ ಬಾಡಿಗೆ ಕಾರಿನಲ್ಲಿ ಹೋಗುತ್ತಿದ್ದ ವೇಳೆ ನಸುಕಿನ ಮೂರೂವರೆ ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ಮತ್ತೊಂದು ಕಾರಿನಲ್ಲಿ ಬಂದ ನಾಲ್ಕು ಮಂದಿ ಮುಸುಕುಧಾರಿ ಖದೀಮರ ತಂಡ ವ್ಯಾಪಾರಿಗಳ ಕಾರನ್ನು ಅಡ್ಡಗಟ್ಟಿದೆ. ಈ ವೇಳೆ ಕಳ್ಳರು ಸಾಧಿಕ್ ಅವರ ಹೊಟ್ಟೆಗೆ ಚಾಕುವಿನಿಂದ ಇರಿದು ಪ್ರಾಣಭೀತಿ ಹುಟ್ಟಿಸಿ ಹಣ, ಮೊಬೈಲ್ ಕಸಿದುಕೊಂಡಿದ್ದಾರೆ. ಗಾಯಾಳು ಸಾಧಿಕ್ ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಹಾಸ್ಮಾಟ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಬಾಡಿಗೆ ಕಾರಿನ ಚಾಲಕ, ಹಾರೋಬಂಡೆ ಪಕ್ಕದ ಗುಂಡ್ಲುಗುರ್ಕಿ ನಿವಾಸಿ ವಿಜಯ್ ಕುಮಾರ್ ಮೇಲೆ ಅನುಮಾನ ವ್ಯಕ್ತಪಡಿಸಿ, ಅವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.