ADVERTISEMENT

ಚಿಂತಾಮಣಿ | ಬೆಳೆಯಲ್ಲಿ ಗೊಬ್ಬರ ಬಳಕೆ: ತರಬೇತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2023, 14:47 IST
Last Updated 27 ಅಕ್ಟೋಬರ್ 2023, 14:47 IST
ಚಿಂತಾಮಣಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮವನ್ನು ರೇಷ್ಮೆಕೃಷಿ ಮಹಾವಿದ್ಯಾಲಯ ಮುಖ್ಯಸ್ಥ ಪಿ.ವೆಂಕಟರವಣ ಉದ್ಘಾಟಿಸಿದರು
ಚಿಂತಾಮಣಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮವನ್ನು ರೇಷ್ಮೆಕೃಷಿ ಮಹಾವಿದ್ಯಾಲಯ ಮುಖ್ಯಸ್ಥ ಪಿ.ವೆಂಕಟರವಣ ಉದ್ಘಾಟಿಸಿದರು   

ಚಿಂತಾಮಣಿ: ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ಹಾಗೂ ಕೃಷಿ ರಾಸಾಯನಶಾಸ್ತ್ರ ಮತ್ತು ಮಣ್ಣು ವಿಜ್ಞಾನ ವಿಭಾಗ ಜಿಕೆವಿಕೆ ಬೆಂಗಳೂರು ಸಹಯೋಗದೊಂದಿಗೆ ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ‘ತರಕಾರಿ ಬೆಳೆಗಳಲ್ಲಿ ಸಾವಯವ ಹಾಗೂ ರಾಸಾಯನಿಕ ಗೊಬ್ಬರ ಬಳಕೆ’ ಕುರಿತು ತಾಂತ್ರಿಕ ಅಧಿವೇಶನದ ಮೂಲಕ ಶುಕ್ರವಾರ ತರಬೇತಿ ಕಾರ್ಯಕ್ರಮ ನಡೆಯಿತು.

ಕೇಂದ್ರದ ಮುಖ್ಯಸ್ಥ ಎಂ.ಪಾಪಿರೆಡ್ಡಿ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ರೈತರು ಹೆಚ್ಚಿನ ಇಳುವರಿ ಮತ್ತು ಲಾಭಕ್ಕೆ ರಾಸಾಯನಿಕ ಗೊಬ್ಬರದ ಮೊರೆ ಹೋಗಿದ್ದಾರೆ. ರಾಸಾಯನಿಕ ಗೊಬ್ಬರಗಳ ಅತಿ ಬಳಕೆಯಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಜತೆಗೆ ಮಣ್ಣಿನ ಫಲವತ್ತತೆ ನಾಶವಾಗಿ ಭೂಮಿ ಬೆಳೆಗೆ ನಿರುಪಯುಕ್ತವಾಗುತ್ತದೆ’ ಎಂದು ತಿಳಿಸಿದರು.

ರೈತರು ಪೂರ್ವಿಕರ ಕಾಲದಲ್ಲಿದ್ದಂತೆ ರಾಸಾಯನಿಕ ಗೊಬ್ಬರ ಕಡಿಮೆ ಮಾಡಿ ಸಾವಯವದ ಬಳಕೆ ಹೆಚ್ಚು ಮಾಡಬೇಕು. ಇದರಿಂದ ಇಳುವರಿ ಸ್ವಲ್ಪ ಕಡಿಮೆಯಾದರೂ ಜನರ ಆರೋಗ್ಯ ಉತ್ತಮವಾಗುತ್ತದೆ ಎಂದರು.

ADVERTISEMENT

ರೇಷ್ಮೆಕೃಷಿ ಮಹಾವಿದ್ಯಾಲಯ ಮುಖ್ಯಸ್ಥ ಪಿ.ವೆಂಕಟರವಣ ಮಾತನಾಡಿ, ‘ಸ್ವಾತಂತ್ರ್ಯ ನಂತರ ರಾಸಾಯನಿಕಗಳ ಬಳಕೆ ಹೆಚ್ಚುತ್ತಿದೆ. ವಾತಾವರಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹಾಗಾಗಿ ರೈತರು ಹೆಚ್ಚಾಗಿ ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳಬೇಕು’ ಎಂದರು.

ನಿವೃತ್ತ ಪ್ರಾಧ್ಯಾಪಕ ಸಿ.ಎ. ಶ್ರೀನಿವಾಸಮೂರ್ತಿ ಮಾತನಾಡಿ, ‘ರೈತರಿಗೆ ದ್ರವರೂಪದ ಸಾವಯವ ಮತ್ತು ರಾಸಾಯನಿಕ ಗೊಬ್ಬರಗಳ ಸಮರ್ಪಕ ಬಳಕೆ ಹಾಗೂ ಸಮಗ್ರ ಕೃಷಿ ಪೋಷಕಾಂಶಗಳ ಅಳವಡಿಕೆಯು ಕೃಷಿಯಲ್ಲಿ ಹೆಚ್ಚಿನ ಆದಾಯ ಹಾಗೂ ಮಣ್ಣಿನ ಫಲವತ್ತತೆಯನ್ನು ವೃದ್ಧಿಸುವಲ್ಲಿ ಸಹಕಾರಿಯಾಗುತ್ತದೆ’ ಎಂದು ತಿಳಿಸಿದರು.

ಸಹಾಯಕ ಪ್ರಾಧ್ಯಾಪಕಿ(ಮಣ್ಣು ವಿಜ್ಞಾನ), ಜಿಕೆವಿಕೆಯ ಬಿ.ಗಾಯಿತ್ರಿ, ‘ತಾಂತ್ರಿಕ ಅಧಿವೇಶನದಲ್ಲಿ ಪೋಷಕಾಂಶಗಳ ದಕ್ಷತೆಯನ್ನು ಹೆಚ್ಚಿಸಲು ತರಕಾರಿ ಬೆಳೆಗಳಲ್ಲಿ ರಸಾವರಿ ಮುಖಾಂತರ ಪೋಷಕಾಂಶಗಳ ನಿರ್ವಹಣೆ ಅಗತ್ಯವಿದೆ’ ಎಂದರು.

ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಕೆ.ಸಂಧ್ಯಾ, ಆರ್. ಪ್ರವೀಣಕುಮಾರ್, ವಿಶ್ವನಾಥ್, ಡಿ.ವಿ. ನವೀನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.