ADVERTISEMENT

ಸಂಧ್ಯಾಕಾಲದಲ್ಲಿ ನೆಮ್ಮದಿ ಕಾಣಲು ಯತ್ನಿಸಿ

ಸುಲ್ತಾನ್‌ ಪೇಟೆಯ ಶ್ರೀಸತ್ಯ ಸಾಯಿ ವೃದ್ಧಾಶ್ರಮದಲ್ಲಿ ರಾಷ್ಟ್ರೀಯ ಪೌಷ್ಠಿಕ ಆಹಾರ ಸಪ್ತಾಹ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2019, 13:30 IST
Last Updated 7 ಸೆಪ್ಟೆಂಬರ್ 2019, 13:30 IST
ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್.ಎಚ್.ಕೋರಡ್ಡಿ ಅವರು ವೃದ್ಧಾಶ್ರಮದಲ್ಲಿ ಇರುವವರಿಗೆ ಹಣ್ಣುಹಂಪಲು ವಿತರಿಸಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್.ಎಚ್.ಕೋರಡ್ಡಿ ಅವರು ವೃದ್ಧಾಶ್ರಮದಲ್ಲಿ ಇರುವವರಿಗೆ ಹಣ್ಣುಹಂಪಲು ವಿತರಿಸಿದರು.   

ಚಿಕ್ಕಬಳ್ಳಾಪುರ: ‘ಮಕ್ಕಳಿಂದ ಪರಿತ್ಯಕ್ತ ಹಿರಿಯ ನಾಗರಿಕರು ಹಳೆಯ ಕಹಿ ಘಟನೆಗಳನ್ನು ನೆನೆದು ಕೊರಗದೆ, ವೃದ್ಧಾಶ್ರಮದ ಪರಿಸರದಲ್ಲಿ ಪುಸ್ತಕಗಳನ್ನು ಓದುವುದು, ಆಧ್ಯಾತ್ಮ, ಸಂಗೀತ ಮುಂತಾದ ಚಟುವಟಿಕೆಗಳ ಮೂಲಕ ತಮ್ಮ ನೋವನ್ನು ಮರೆತು ಜೀವನದ ಸಂಧ್ಯಾಕಾಲವನ್ನು ನೆಮ್ಮದಿಯಿಂದ ಕಳೆಯಲು ಪ್ರಯತ್ನಿಸಬೇಕು’ ಎಂದು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್.ಎಚ್.ಕೋರಡ್ಡಿ ಹೇಳಿದರು.

ತಾಲ್ಲೂಕಿನ ಸುಲ್ತಾನ್‌ ಪೇಟೆಯಲ್ಲಿರುವ ಶ್ರೀಸತ್ಯ ಸಾಯಿ ವೃದ್ಧಾಶ್ರಮದಲ್ಲಿ ಶನಿವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಪೌಷ್ಠಿಕ ಆಹಾರ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಹಾಲು ಹಣ್ಣು ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರತಿಯೊಬ್ಬರೂ ನಿರ್ಗತಿಕರನ್ನು ಕಂಡಲ್ಲಿ ಅವರಿಗೆ ಕೈಲಾದಷ್ಟು ಸಹಾಯವನ್ನು ಮಾಡಬೇಕು. ಎಲ್ಲರೂ ಧಾರ್ಮಿಕ, ಸಾಮಾಜಿಕ, ಸತ್ಯದ ಹಾದಿಯಲ್ಲಿ ನಡೆದರೆ ಜೀವನ ಸುಖಮಯವಾಗಿರುತ್ತದೆ. ವೃದ್ಧರನ್ನು ತಮ್ಮ ತಂದೆ ತಾಯಿಗಳಂತೆ ಭಾವಿಸಿ ಅವರಿಗೆ ಯಾವುದೇ ಅಡಚಣೆಗಳು ಉಂಟಾಗದಂತೆ, ಮಕ್ಕಳಂತೆ ಅವರನ್ನು ಸ್ನೇಹ ಪ್ರೀತಿಯಿಂದ ನೋಡಿಕೊಳ್ಳಬೇಕು’ ಎಂದು ಸಿಬ್ಬಂದಿಗೆ ಸೂಚಿಸಿದರು.

ADVERTISEMENT

‘ಈ ಆಶ್ರಮ ವಯೋವೃದ್ಧರಿಗೆ ಆಶ್ರಯ ನೀಡಿ ಅವರ ಕ್ಷೇಮಾಭಿವೃದ್ಧಿಯನ್ನು ಮಾಡುತ್ತಿದೆ. ಅವರಿಗೆ ದೈನಂದಿನ ಊಟ, ವಸತಿ, ಬಟ್ಟೆ ಎಲ್ಲಾ ಉಚಿತವಾಗಿ ನೀಡುತ್ತಿದೆ. ಸರ್ಕಾರ ಮತ್ತು ದಾನಿಗಳು ಮಾಡಿದ ಹಣ ಸಹಾಯದಿಂದ ಈ ಆಶ್ರಮವು ಅನೇಕ ವರ್ಷಗಳಿಂದ ಮುಂದುವರಿಯುತ್ತಾ ವೃದ್ಧರಿಗೆ ಆಶ್ರಯವನ್ನು ಕಲ್ಪಿಸಿದೆ. ಇಲ್ಲಿರುವ ನೀರಿನ ಸಮಸ್ಯೆ, ವೈದ್ಯಕೀಯ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುತ್ತೇವೆ’ ಎಂದರು.

‘ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ಹಿಂದೆ ನಡೆದ ದುರ್ಘಟನೆಗಳನ್ನು ಮರೆತು ಇಲ್ಲಿನ ಶಾಂತಿಯುತವಾದ ವಾತಾವರಣವನ್ನು ಸವಿಯಬೇಕು. ಅದೇ ರೀತಿಯಾಗಿ ದೇವರು ನಿಮಗೆ ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯ ಜೀವನ ಕೊಡಲಿ’ ಎಂದು ಹಾರೈಸಿದರು.

ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಚ್.ತಮ್ಮೇಗೌಡ ಮಾತನಾಡಿ, ‘ವೃದ್ಧಾಶ್ರಮದಲ್ಲಿರುವರು ಅನಾಥರು, ಅಸಹಾಯಕರು, ನಿಶಕ್ತರು ಎಂಬ ಕೀಳಿರಿಮೆ ತೊಡೆದು ಹಾಕಬೇಕು. ಪ್ರತಿನಿತ್ಯ ಯೋಗ ಮತ್ತು ಧ್ಯಾನಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಮೂಲಕ ಮನಸ್ಸಿನ ಕಹಿ ಘಟನೆಗಳನ್ನು ಮರೆತು ಸಂತಸದಿಂದ ಇರಲು ಪ್ರಯತ್ನಿಸಬೇಕು’ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಿರಿಯ ಸಿವಿಲ್ ನ್ಯಾಯಾಧೀಶ ಎಚ್.ದೇವರಾಜು, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ವಿನೋದ್ ಕುಮಾರ್, ಸುಲ್ತಾನ್‌ ಪೇಟೆಯ ಶ್ರೀಸತ್ಯ ಸಾಯಿ ವೃದ್ಧಾಶ್ರಮದ ವ್ಯವಸ್ಥಾಪಕ ಮುರಳಿ, ಯೋಗ ಶಿಕ್ಷಕಿ ವೀಣಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.