ADVERTISEMENT

ಚಿಕ್ಕಬಳ್ಳಾಪುರ: ಅವೈಜ್ಞಾನಿಕ ಚರಂಡಿ, ಕೆರೆಯಾಗುವ ಚಲಕಾಯಲಪರ್ತಿ

ಬೇಕಾಬಿಟ್ಟಿ ನಿರ್ಮಿಸಿದ ಚರಂಡಿಗಳಲ್ಲಿ ಹರಿದು ಹೋಗದ ತ್ಯಾಜ್ಯ ನೀರು, ಪದೇ ಪದೇ ನುಗ್ಗುವ ಮಳೆ ನೀರಿನಿಂದ ಮನೆಗಳು ಶಿಥಿಲ

ಈರಪ್ಪ ಹಳಕಟ್ಟಿ
Published 20 ಜುಲೈ 2020, 19:30 IST
Last Updated 20 ಜುಲೈ 2020, 19:30 IST
ಚಲಕಾಯಲಪರ್ತಿಯಲ್ಲಿ ಮಡುಗಟ್ಟಿ ನಿಂತು, ಮನೆಗಳಿಗೆ ನುಗ್ಗಿದ ಮಳೆ ನೀರು
ಚಲಕಾಯಲಪರ್ತಿಯಲ್ಲಿ ಮಡುಗಟ್ಟಿ ನಿಂತು, ಮನೆಗಳಿಗೆ ನುಗ್ಗಿದ ಮಳೆ ನೀರು   

ಚಿಕ್ಕಬಳ್ಳಾಪುರ: ತಾಲ್ಲೂಕಿನ ದಿಬ್ಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಲಕಾಯಲಪರ್ತಿಯಲ್ಲಿ ಅವೈಜ್ಞಾನಿಕ ಚರಂಡಿ ಕಾಮಗಾರಿ ಜೋರು ಮಳೆ ಸುರಿದರೆ, ಊರಿನ ನಡು ಭಾಗದಲ್ಲಿಯೇ ದಿಢೀರ್ ಚಿಕ್ಕದೊಂದು ಕೆರೆ ಸೃಷ್ಟಿಯಾಗಲು ಕಾರಣವಾಗುತ್ತಿದ್ದು, ಇದರಿಂದ ಮನೆಗಳಿಗೆ ನೀರು ನುಗ್ಗಿ ಗ್ರಾಮಸ್ಥರು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ.

ಎರಡು ವರ್ಷಗಳ ಹಿಂದೆ ಚಲಕಾಯಲಪರ್ತಿಯಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ ಕೈಗೊಂಡ ಚರಂಡಿ ನಿರ್ಮಾಣ ಕಾಮಗಾರಿ ಅವೈಜ್ಞಾನಿಕವಾಗಿದೆ. ಚರಂಡಿಗಳು ನೀರನ್ನು ಊರಿನಿಂದ ಹೊರಕ್ಕೆ ಹಾಕುವ ಬದಲು, ಗ್ರಾಮದ ಸುತ್ತಮುತ್ತಲ ನೀರನ್ನು ಸಹ ಗ್ರಾಮದ ಒಳಗೆ ಹರಿಸಿ ಆಂಜನೇಯ ದೇವಾಲಯ ಮುಂಭಾಗದ ತಗ್ಗು ಪ್ರದೇಶದಲ್ಲಿ ಮಡುಗಟ್ಟಿ ನಿಲ್ಲುವಂತೆ ಮಾಡುತ್ತಿವೆ ಎನ್ನುವುದು ಗ್ರಾಮಸ್ಥರ ಆರೋಪ.

ಸುಮಾರು 50 ಕುಟುಂಬಗಳಿರುವ ಈ ಗ್ರಾಮ ಅನೇಕ ವರ್ಷಗಳಿಂದ ಮೂಲಸೌಕರ್ಯಗಳಿಂದ ವಂಚಿತವಾಗಿತ್ತು. ಎರಡು ವರ್ಷಗಳ ಹಿಂದಷ್ಟೇ ಬಹುಪಾಲು ರಸ್ತೆಗಳು ಕಾಂಕ್ರೀಟ್ ರಸ್ತೆಗಳಾಗಿ ಮಾರ್ಪಟ್ಟ ವೇಳೆ ಜನರು ಇನ್ನಾದರೂ ನಮ್ಮ ಬವಣೆ ಕಳೆಯಿತು ಎಂದೇ ಸಂತಸಪಟ್ಟಿದ್ದರು. ಆದರೆ ಇದೀಗ ನೀರು ಸಾಗಿಸದ ಚರಂಡಿಗಳು ಗ್ರಾಮಸ್ಥರಿಗೆ ಹೊಸ ತಲೆ ನೋವು ಉಂಟು ಮಾಡುತ್ತಿವೆ.

ADVERTISEMENT

ಈ ಹಿಂದೆ ಚರಂಡಿ ಕಾಮಗಾರಿ ನಡೆಯುವ ವೇಳೆ ಮುಂದೆ ಆಗಬಹುದಾದ ಅನಾಹುತ ಊಹಿಸಿ ಗ್ರಾಮಸ್ಥರು ಕಾಮಗಾರಿ ವಿರುದ್ಧ ಧ್ವನಿ ಎತ್ತಿದ್ದರು. ಆದರೆ ಅದಕ್ಕೆ ಕಿವಿಗೊಡದ ಗುತ್ತಿಗೆದಾರರು ಸ್ಥಳೀಯ ರಾಜಕಾರಣಿಗಳ ಪ್ರಭಾವ ಬಳಿಸಿ ಪೂರ್ಣಗೊಳಿಸಿದರು. ದುರಂತ ಎಂದರೆ ಇಂತಹ ಅವೈಜ್ಞಾನಿಕ ಕಾಮಗಾರಿಗೆ ಸರ್ಕಾರಿ ಎಂಜಿನಿಯರ್‌ಗಳು ಕಣ್ಮುಚ್ಚಿ ಬಿಲ್‌ ಪಾವತಿಸಲು ಕ್ರಮಕೈಗೊಂಡರು ಎನ್ನುವುದು ಗ್ರಾಮಸ್ಥರ ಆರೋಪ.

‘ಚರಂಡಿಗಳು ಮಳೆ ನೀರನ್ನು ಹೊರಗೆ ಸಾಗಿಸಿ ಊರು ಸ್ವಚ್ಛವಾಗಿಡಬೇಕು. ಆದರೆ ನಮ್ಮೂರಲ್ಲಿ ಚರಂಡಿಗಳು ನೀರು ಸಾಗಿಸದಷ್ಟು ಎತ್ತರದಲ್ಲಿವೆ. ಗುತ್ತಿಗೆದಾರರು ಬೇಕಾಬಿಟ್ಟಿ ಚರಂಡಿ ನಿರ್ಮಿಸಿದ್ದಾರೆ. ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಜೋರಾಗಿ ಮಳೆ ಸುರಿದರೆ ಆಂಜನೇಯ ದೇವಾಲಯ ಸುತ್ತಲಿನ ಪ್ರದೇಶದಲ್ಲಿ ನೀರು ಮಡುಗಟ್ಟಿ ನಿಂತು ಜನರ ನೆಮ್ಮದಿ ಕಳೆಯುತ್ತಿದೆ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಚಿಕ್ಕ ನರಸಿಂಹಪ್ಪ.

‘ಚುನಾವಣಾ ಸಮಯದಲ್ಲಿ ಊರಿಗೆ ಬಂದಾಗ ಸಿಂಗಾಪೂರ ಮಾಡುವ ಭರವಸೆ ನೀಡಿ ಬಳಿಕ ಮಾಯವಾಗುವ ರಾಜಕಾರಣಿಗಳಿಂದಾಗಿ ಜನಸಾಮಾನ್ಯರು ಬದುಕು ಸಂಕಷ್ಟಕ್ಕೆ ಸಿಲುಕಿದೆ. ಚರಂಡಿ ಸಮಸ್ಯೆ ಗ್ರಾಮ ಪಂಚಾಯಿತಿಯವರ ಗಮನಕ್ಕೆ ತಂದರೆ, ಅದು ಜಿಲ್ಲಾ ಪಂಚಾಯಿತಿಗೆ ಸಂಬಂಧಿಸಿದ್ದು ಎಂದು ಬೇರೆಡೆ ಬೊಟ್ಟು ತೋರಿಸುತ್ತಾರೆ. ಸಂಬಂಧಪಟ್ಟವರು ಇತ್ತ ತಲೆ ಹಾಕುವುದೇ ಇಲ್ಲ’ ಎಂದು ಸ್ಥಳೀಯ ನಿವಾಸಿ, ‘ಉಸಿರಿಗಾಗಿ ಹಸಿರು’ ಸಂಘಟನೆಯ ಟ್ರಸ್ಟಿ ಎನ್.ಗಂಗಾಧರ್ ರೆಡ್ಡಿ ಬೇಸರ ವ್ಯಕ್ತಪಡಿಸಿದರು.

ಈ ಬಗ್ಗೆ ದಿಬ್ಬೂರು ಗ್ರಾಮ ಪಂಚಾಯಿತಿ ಪಿಡಿಒ ಆರ್.ಆಶಾ ಅವರನ್ನು ವಿಚಾರಿಸಿದರೆ, ‘ಚಲಕಾಯಲಪರ್ತಿಯಲ್ಲಿ ಚರಂಡಿಗಳನ್ನು ಎತ್ತರವಾಗಿ ನಿರ್ಮಿಸಿದ ಕಾರಣಕ್ಕೆ ನೀರು ಊರಿಂದ ಆಚೆ ಹೋಗದೆ ಸಮಸ್ಯೆ ಸೃಷ್ಟಿಯಾಗುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ, ಆ ಸಮಸ್ಯೆ ಬಗ್ಗೆ ಹರಿಸಲು ಕ್ರಿಯಾಯೋಜನೆ ರೂಪಿಸಿದ್ದೇವೆ. ಶೀಘ್ರದಲ್ಲಿಯೇ ಸಮಸ್ಯೆ ಬಗೆಹರಿಸುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.