ADVERTISEMENT

ಗುಡಿಬಂಡೆ: ಉರ್ದು ಶಾಲೆ ಪುನರಾರಂಭಿಸಿ; ಮನವಿ

ಕರ್ನಾಟಕ ಉರ್ದು ಸಾಹಿತ್ಯ ಪರಿಷತ್‌ ಮನವಿ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 14:45 IST
Last Updated 28 ಏಪ್ರಿಲ್ 2025, 14:45 IST
ಕರ್ನಾಟಕ ಉರ್ದು ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಮೊಹಮದ್ ನಾಸಿರ್ ನೇತೃತ್ವದಲ್ಲಿ ಮನೆ-ಮನೆ ಭೇಟಿ ಕಾರ್ಯಕ್ರಮ ನಡೆಯಿತು
ಕರ್ನಾಟಕ ಉರ್ದು ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಮೊಹಮದ್ ನಾಸಿರ್ ನೇತೃತ್ವದಲ್ಲಿ ಮನೆ-ಮನೆ ಭೇಟಿ ಕಾರ್ಯಕ್ರಮ ನಡೆಯಿತು   

ಗುಡಿಬಂಡೆ: ತಾಲೂಕಿನ ಹಂಪಸಂದ್ರ ಮತ್ತು ಸೋಮೇಶ್ವರ ಗ್ರಾಮಗಳಲ್ಲಿ ಶಿಕ್ಷಕರ ಕೊರತೆಯಿಂದ ಮುಚ್ಚಿರುವ ಎರಡು ಉರ್ದು ಶಾಲೆಗಳನ್ನು ಪುನರಾರಂಭಿಬೇಕೆಂದು ಕರ್ನಾಟಕ ಉರ್ದು ಸಾಹಿತ್ಯ ಪರಿಷತ್‌ ಒತ್ತಾಯಿಸಿದೆ.

ಶಾಲೆಗಳನ್ನು ಪುನರಾರಂಭಿಸುವ ಸಂಬಂಧ ಪೋಷಕರಲ್ಲಿ ಜಾಗೃತಿ ಮೂಡಿಸಲು ಪರಿಷತ್‌ ವತಿಯಿಂದ ನಡೆಯುತ್ತಿರುವ ಮನೆ-ಮನೆ ಭೇಟಿ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿ ಪರಿಷತ್‌ ಅಧ್ಯಕ್ಷ ಮೊಹಮದ್ ನಾಸಿರ್, ಕಳೆದ 12 ವರ್ಷಗಳಿಂದ ಈ ಶಾಲೆಗಳು ಮುಚ್ಚಿರುವುದು ತುಂಬಾ ನೋವಿನ ಸಂಗತಿಯಾಗಿದೆ. ಸರ್ಕಾರದಿಂದ ಶಾಲೆಗಳಿಗೆ ಎಲ್ಲಾ ಸವಲತ್ತು ಒದಗಿಸಿದ್ದರೂ ಶಿಕ್ಷಕರ ಕೊರತೆಯಿಂದ ಶಾಲೆಗಳು ಕಾರ್ಯನಿರ್ವಹಿಸಲು ಸಾಧ್ಯವಾಗಿಲ್ಲ ಎಂದು ಬೇಸರಿಸಿದರು.

ಸೋಮೇಶ್ವರ ಗ್ರಾಮದ ಮಸೀದಿಯಲ್ಲಿ ಈಚೆಗೆ ನಡೆದ ಸಭೆಯಲ್ಲಿ ಮಾತನಾಡಿದ ಮೊಹಮದ್ ನಾಸಿರ್, ‘ನಮ್ಮ ಮಕ್ಕಳಿಗೆ ಕನ್ನಡ, ಉರ್ದು, ಮತ್ತು ಇಂಗ್ಲೀಷ್ ಭಾಷೆ ಶಿಕ್ಷಣ ಕಡ್ಡಾಯವಾಗಿ ಒದಗಿಸಬೇಕು. ಇದಕ್ಕಾಗಿ ಕಾಯಂ ಶಿಕ್ಷಕರ ನೇಮಕಾತಿಗೆ ಹೋರಾಟ ನಡೆಸುತ್ತೇವೆ. ಒಂದು ವೇಳೆ ಕಾಯಂ ಶಿಕ್ಷಕರು ಸಿಗದಿದ್ದರೆ ಕರ್ನಾಟಕ ಉರ್ದು ಸಾಹಿತ್ಯ ಪರಿಷತ್‌ನಿಂದ ಅತಿಥಿ ಶಿಕ್ಷಕರನ್ನು ನೇಮಿಸಿ, ಶಾಲೆಗಳನ್ನು ನಡೆಸುತ್ತೇವೆ’ ಎಂದು ಭರವಸೆ ನೀಡಿದರು.

ADVERTISEMENT

ಪರಿಷತ್‌ನಿಂದ ಮಕ್ಕಳಿಗೆ ನೋಟ್‌ಬುಕ್, ಐಡಿ ಕಾರ್ಡ್, ಮತ್ತು ಇತರ ಅಗತ್ಯ ಶೈಕ್ಷಣಿಕ ವಸ್ತುಗಳನ್ನು ಒದಗಿಸುವ ಯೋಜನೆ ಘೋಷಿಸಲಾಗಿದೆ. ಸೋಮೇಶ್ವರ ಗ್ರಾಮದಲ್ಲಿ ಸುಮಾರು 18 ರಿಂದ 20 ಮಕ್ಕಳು ಮತ್ತು ಹಂಪಸಂದ್ರದಲ್ಲಿ 15 ರಿಂದ 20 ಮಕ್ಕಳು ಉರ್ದು ಶಾಲೆಗಳಲ್ಲಿ ದಾಖಲಾಗಲು ಸಿದ್ಧರಾಗಿದ್ದಾರೆ ಎಂದು ವರದಿಯಾಗಿದೆ ಎಂದು ತಿಳಿಸಿದರು.

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಲಭ್ಯವಿದೆ. ಆದರೆ ಶಿಕ್ಷಕರ ಕೊರತೆಯಿಂದ ಈ ಪರಿಸ್ಥಿತಿ ಉಂಟಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಕರನ್ನು ಕಡ್ಡಾಯವಾಗಿ ನೇಮಿಸಬೇಕೆಂದು ಹಂಪಸಂದ್ರದ ಪೋಷಕರು ಒತ್ತಾಯಿಸಿದ್ದಾರೆ.

ಹಂಪಸಂದ್ರ ಮತ್ತು ಸೋಮೇಶ್ವರದ ಉರ್ದು ಶಾಲೆ ಪುನರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಶಾಲೆಗಳ ಉಳಿವಿಗೆ ನಮ್ಮ ಸಂಪೂರ್ಣ ಸಹಕಾರ ಇರುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ಮೊಹಮದ್ ನಾಸಿರ್ ಕರ್ನಾಟಕ ಉರ್ದು ಸಾಹಿತ್ಯ ಪರಿಷತ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.