ADVERTISEMENT

ಬಾಗೇಪಲ್ಲಿ: ಯೂರಿಯಾ ಹಂಚಿಕೆಗೆ ಬಂದೋಬಸ್ತ್

ನೂಕು ನುಗ್ಗಲು ತಪ್ಪಿಸಲು ಪೊಲೀಸರ ಕ್ರಮ l ನ್ಯಾನೊ ಗೊಬ್ಬರ ಬಳಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 5:11 IST
Last Updated 19 ಆಗಸ್ಟ್ 2025, 5:11 IST
ಬಾಗೇಪಲ್ಲಿ ಪಟ್ಟಣದ ಹೊರವಲಯದ ಖಾಸಗಿ ರಸಗೊಬ್ಬರದ ಅಂಗಡಿ ಮುಂದೆ ಪೊಲೀಸರ ಬಂದೋಬಸ್ತ್‌ ಮತ್ತು ಕೃಷಿ ಅಧಿಕಾರಿಗಳ ಸಮ್ಮುಖದಲ್ಲಿ ರೈತರು ಯೂರಿಯಾ ಖರೀದಿಸಿದರು
ಬಾಗೇಪಲ್ಲಿ ಪಟ್ಟಣದ ಹೊರವಲಯದ ಖಾಸಗಿ ರಸಗೊಬ್ಬರದ ಅಂಗಡಿ ಮುಂದೆ ಪೊಲೀಸರ ಬಂದೋಬಸ್ತ್‌ ಮತ್ತು ಕೃಷಿ ಅಧಿಕಾರಿಗಳ ಸಮ್ಮುಖದಲ್ಲಿ ರೈತರು ಯೂರಿಯಾ ಖರೀದಿಸಿದರು   

ಬಾಗೇಪಲ್ಲಿ: ಇಲ್ಲಿನ ಖಾಸಗಿ ರಸಗೊಬ್ಬರ ಅಂಗಡಿಗಳ ಮುಂದೆ ಯೂರಿಯಾ ಖರೀದಿಗೆ ಸೋಮವಾರ ಸರತಿ ಸಾಲಿನಲ್ಲಿ ನಿಂತಿದ್ದ ರೈತರಿಗೆ ಪೊಲೀಸರ ಬಂದೋಬಸ್ತ್ ಮತ್ತು ಕೃಷಿ ಅಧಿಕಾರಿಗಳ ಸಮ್ಮುಖದಲ್ಲಿ ಯೂರಿಯಾ ಚೀಲಗಳನ್ನು ಹಂಚಿಕೆ ಮಾಡಲಾಯಿತು. 

10 ದಿನಗಳಿಂದ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಜಡಿ ಮಳೆಯಿಂದ ಹೊಲ–ಗದ್ದೆಗಳಲ್ಲಿ ತೇವಾಂಶ ಇದೆ. ಈ ಅವಧಿಯಲ್ಲಿ ಬೆಳೆಗಳಿಗೆ ರಸಗೊಬ್ಬರ ಸಿಂಪಡಿಸಬೇಕು. ಹೀಗಾಗಿ, ಪಟ್ಟಣದ ಹೊರವಲಯದ ಟಿ.ಬಿ. ಕ್ರಾಸ್‍ನಲ್ಲಿನ ಖಾಸಗಿ ರಸಗೊಬ್ಬರ ಅಂಗಡಿಗಳ ಮುಂದೆ ಯೂರಿಯಾ ಖರೀದಿಗೆ ರೈತರು ಸಾಲುಗಟ್ಟಿ ನಿಂತಿದ್ದರು. ಅಗತ್ಯ ಇರುವಷ್ಟು ಯೂರಿಯಾ ಚೀಲಗಳು ಸಿಗದಿರುವುದರಿಂದ ರೈತರು ಪರದಾಡುವಂತಾಗಿದೆ. 

ಖಾಸಗಿ ಅಂಗಡಿಗಳಿಗೆ ಕಡಿಮೆ ಯೂರಿಯಾ ಚೀಲಗಳನ್ನು ನೀಡಲಾಗಿದೆ. ಇದರಿಂದ ರೈತರಿಗೆ ಅಗತ್ಯವಿರುವಷ್ಟು ಯೂರಿಯಾ ಸಿಗುತ್ತಿಲ್ಲ. ಇದರ ಪರಿಣಾಮ ಕಳೆದ 10 ದಿನಗಳಿಂದ ರಸಗೊಬ್ಬರ ಅಂಗಡಿಗಳ ಮುಂದೆ ಯೂರಿಯಾ ಖರೀದಿಗೆ ಬೆಳಗಿನ ಜಾವದಿಂದಲೇ ರೈತರು ಕಾದು ನಿಲ್ಲುವಂತಾಗಿದೆ. ಕುಡಿಯುವ ನೀರು, ತಿಂಡಿ ಮತ್ತು ಊಟ ಇಲ್ಲದೆ ಸಾಲಿನಲ್ಲಿ ನಿಂತರೂ, ತಮ್ಮ ಜಮೀನುಗಳಿಗೆ ಅಗತ್ಯವಿರುವಷ್ಟು ಯೂರಿಯಾ ಸಿಗುತ್ತಿಲ್ಲ ಎಂದು ರೈತರು ದೂರಿದರು. 

ADVERTISEMENT

ಒಂದು ಎಕರೆ ಭೂಮಿಗೆ ಒಂದು ಯೂರಿಯಾ ಚೀಲ ಸಿಂಪಡಿಸಬೇಕು. ನ್ಯಾನೊ ರಸಗೊಬ್ಬರ ಬಳಸುವಂತೆ ರೈತರಿಗೆ ಅಧಿಕಾರಿಗಳು ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ, ರೈತರು ಮಾತ್ರ ಒಂದು ಎಕರೆ ಜಮೀನಿಗೆ ನಾಲ್ಕರಿಂದ ಐದು ಯೂರಿಯಾ ಚೀಲ ಬೇಕೆಂದು ಹೇಳುತ್ತಿದ್ದಾರೆ. ಒಂದು ಚೀಲ ಖರೀದಿಸಬೇಕಿರುವ ರೈತರು ಹೆಚ್ಚುವರಿ ಚೀಲಗಳನ್ನು ಖರೀದಿಸುತ್ತಿದ್ದಾರೆ. ಇದರಿಂದಾಗಿ ಯೂರಿಯಾದ ಅಭಾವ ಸೃಷ್ಟಿಯಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. 

ಖಾಸಗಿ ರಸಗೊಬ್ಬರದ ಅಂಗಡಿ ಮುಂದೆ ಯಾವುದೇ ಅಹಿತರ ಘಟನೆಗಳು, ಗಲಾಟೆಗಳು ನಡೆಯದಂತೆ ಪೊಲೀಸ್ ಬಂದೋಬಸ್ತ್‌ನಲ್ಲಿ ಕೃಷಿ ಇಲಾಖೆ ಅಧಿಕಾರಿ ನಾರಾಯಣರೆಡ್ಡಿ ಸಮ್ಮುಖದಲ್ಲಿ ಯೂರಿಯಾ ಹಂಚಿಕೆ ಮಾಡಲಾಯಿತು. 

ಅಂಗಡಿ ಮುಂದೆ ನೂಕುನುಗ್ಗಲು:

ಪಟ್ಟಣದ ಹೊರವಲಯದ ಖಾಸಗಿ ರಸಗೊಬ್ಬರ ಅಂಗಡಿ ಮುಂದೆ ಶನಿವಾರ ಯೂರಿಯಾ ಚೀಲಗಳ ಖರೀದಿಗೆ ರೈತರ ಮಧ್ಯೆ ನೂಕುನುಗ್ಗಲು ಉಂಟಾಗಿತ್ತು. ಜೊತೆಗೆ ರೈತರು ಅಂಗಡಿ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಸರ್ಕಲ್ ಇನ್‌ಸ್ಪೆಕ್ಟರ್ ಪ್ರಶಾಂತ್ ರೈತರನ್ನು ಸಮಾಧಾನಪಡಿಸಿದರು. 250 ಮಂದಿ ರೈತರಿಗೆ ಟೋಕನ್ ವಿತರಿಸಿ ಸೋಮವಾರ ಬಂದು ರಸಗೊಬ್ಬರ ಯೂರಿಯಾ ಚೀಲ ಪಡೆಯುವಂತೆ ಸಲಹೆ ನೀಡಿದ್ದರು.  ಈ ಪ್ರಕಾರ ಸೋಮವಾರ ಬೆಳಗಿನ ಜಾವ 6 ಗಂಟೆಯಿಂದಲೇ ಖಾಸಗಿ ರಸಗೊಬ್ಬರ ಅಂಗಡಿ  ಮುಂದೆ ಯೂರಿಯಾ ಚೀಲಗಳನ್ನು ಖರೀದಿಸಲು ರೈತರು ಜಮಾಯಿಸಿದ್ದರು. ಪೊಲೀಸ್ ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ನಾಲ್ವರು ಪೊಲೀಸರು ಬಂದು ರೈತರನ್ನು ಸಾಲಿನಲ್ಲಿ ನಿಲ್ಲಿಸಿ ಯೂರಿಯಾ ವಿತರಿಸಲು ಅನುವು ಮಾಡಿಕೊಟ್ಟರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.