ಶಿಡ್ಲಘಟ್ಟ: ಮೇಲೂರಿನ ಭೂದೇವಿ ಸೌಮ್ಯ ಚನ್ನಕೇಶವಸ್ವಾಮಿ ಮತ್ತು ತಿರುಮಲಸ್ವಾಮಿ ದೇವಾಲಯ, ಉತ್ತರ ಪಿನಾಕಿನಿ ನದಿ ತಟದಲ್ಲಿ ನೆಲೆಸಿರುವ ಶ್ರೀಭೂನೀಳಾ ಸಮೇತ ವೆಂಕಟರಮಣಸ್ವಾಮಿ, ಬೆಳ್ಳೂಟಿ ಗೇಟ್‌ನ ಶ್ರೀಲಕ್ಷ್ಮಿ ವೆಂಕಟೇಶ್ವರಸ್ವಾಮಿ, ಚಿಕ್ಕದಾಸರಹಳ್ಳಿಯ ಗುಟ್ಟದ ಮೇಲಿನ ಶ್ರೀಭೂನೀಳಾ ಸಮೇತ ಬ್ಯಾಟರಾಯಸ್ವಾಮಿ ದೇವಾಲಯ, ಭಟ್ರೇನಹಳ್ಳಿಯ ಸಾಯಿ ಮಂದಿರ ಸೇರಿದಂತೆ ಬಹುತೇಕ ದೇವಾಲಯಗಳಲ್ಲಿ ವೈಕುಂಠ ಏಕಾದಶಿಯನ್ನು ಸಡಗರ, ಸಂಭ್ರಮ, ಭಕ್ತಿಭಾವದಿಂದ ಆಚರಿಸಲಾಯಿತು.
ಬೆಳಗ್ಗಿನಿಂದಲೆ ವಿಶೇಷ ಪೂಜೆ ಪುನಸ್ಕಾರ ಹೋಮ ಹವನಗಳನ್ನು ನಡೆಸಿ ಮಹಾ ಮಂಗಳಾರತಿ ಮಾಡಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು. ಭಕ್ತರು ಪೂಜೆಯಲ್ಲಿ ಭಾಗವಹಿಸಿ ಸಪ್ತ ಧ್ವಾರಗಳನ್ನು ದಾಟಿ ಸ್ವಾಮಿಯ ದರ್ಶನ ಪಡೆದು ಭಕ್ತಿಯ ಭಾವ ಮೆರೆದರು.
ತಿರುಪತಿ ತಿಮ್ಮಪ್ಪನ ಲಡ್ಡು ಮಾದರಿಯಲ್ಲಿ ಈ ದೇವಾಲಯಗಳಲ್ಲೂ ಲಡ್ಡುಗಳನ್ನು ಪ್ರಸಾದವನ್ನಾಗಿ ವಿತರಿಸಲಾಯಿತು. ಬೆಳಗ್ಗಿನಿಂದಲೆ ದೇವಾಲಯಗಳಲ್ಲಿ ಭಕ್ತರು ಭಗವಂತನ ದರ್ಶನಕ್ಕೆ ತೆರಳಿದ್ದು ಸಂಜೆಯವರೆಗೂ ದೇವಾಲಯಗಳಲ್ಲಿ ಭಕ್ತರ ಸಾಲು ಕಂಡು ಬಂತು.
ಕ್ಷೇತ್ರದ ಶಾಸಕ ಬಿ.ಎನ್.ರವಿಕುಮಾರ್, ಕಾಂಗ್ರೆಸ್ ಮುಖಂಡ ರಾಜೀವ್ ಗೌಡ, ಮಾಜಿ ಶಾಸಕ ಎಂ.ರಾಜಣ್ಣ ಮೊದಲಾದ ಪ್ರಮುಖರು ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ ಭಗವಂತನ ದರ್ಶನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.