ADVERTISEMENT

ಶಿಡ್ಲಘಟ್ಟ | ಭಣಗುಡುವ ಅರಳಿಕಟ್ಟೆ ಈಗ ನೆನಪು ಮಾತ್ರ

ಡಿ.ಜಿ.ಮಲ್ಲಿಕಾರ್ಜುನ
Published 18 ಅಕ್ಟೋಬರ್ 2025, 6:26 IST
Last Updated 18 ಅಕ್ಟೋಬರ್ 2025, 6:26 IST
ದಿಬ್ಬೂರಹಳ್ಳಿ ರಸ್ತೆಯಲ್ಲಿ ಆನೆಮಡುಗು ದಾರಿಯಲ್ಲಿರುವ ಪುರಾತನ ಅಶ್ವತ್ಥಕಟ್ಟೆ
ದಿಬ್ಬೂರಹಳ್ಳಿ ರಸ್ತೆಯಲ್ಲಿ ಆನೆಮಡುಗು ದಾರಿಯಲ್ಲಿರುವ ಪುರಾತನ ಅಶ್ವತ್ಥಕಟ್ಟೆ   

ಶಿಡ್ಲಘಟ್ಟ: ಕಾಲ ಆಧುನಿಕವಾದಂತೆ ಅರಳಿಕಟ್ಟೆಗಳು ಅಪ್ರಸ್ತುತವಾಗಿವೆ. ಹಿಂದೆ ಭಕ್ತಿ ಮತ್ತು ಹಳ್ಳಿ ವ್ಯವಹಾರಗಳ ವೇದಿಕೆಗಳಾಗಿದ್ದ ಅರಳಿಕಟ್ಟೆಗಳೀಗ ಭಣಗುಡುತ್ತಿವೆ.

ಅಶ್ವತ್ಥಕಟ್ಟೆಗಳು ಗ್ರಾಮೀಣ ಜನರ ಪಂಚಾಯಿತಿ ಕಟ್ಟೆಗಳಾಗಿದ್ದವು. ಅಲ್ಲಿ ದೇವರು ನೆಲೆಸಿರುವರೆಂಬ ನಂಬಿಕೆಯಿಂದ ಹಿಂದೆ ಬಹುತೇಕ ವ್ಯಾಜ್ಯಗಳನ್ನು ಹಿರಿಯರು ಅಲ್ಲೇ ನೆರವೇರಿಸುತ್ತಿದ್ದರು. ಬಡವರ ಮದುವೆಗಳನ್ನು ಅಲ್ಲಿಯೇ ನಡೆಸಲಾಗುತ್ತಿತ್ತು. ಮದುವೆ ದಿಬ್ಬಣಕ್ಕೂ ಅದುವೇ ಪ್ರಶಸ್ತವಾದ ಸ್ಥಳವಾಗಿತ್ತು.

ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ರಸ್ತೆಯಲ್ಲಿ ಬಶೆಟ್ಟಹಳ್ಳಿ ಹಾಗೂ ಆನೆಮಡುಗು ರಸ್ತೆಗಳ ಸಂಪರ್ಕ ತಾಣದಲ್ಲಿ ಪೂರ್ವ ಮತ್ತು ಪಶ್ಚಿಮ ದಿಕ್ಕಿನಲ್ಲಿ ಹಳೆಯ ಅಶ್ವತ್ಥಕಟ್ಟೆಗಳಿವೆ. 

ADVERTISEMENT

ಅಶ್ವತ್ಥವೃಕ್ಷವನ್ನು ಅರಳಿ, ಪೀಪಲ್, ಬೋಧಿವೃಕ್ಷ ಎಂಬ ಬೇರೆಬೇರೆ ಹೆಸರಿನಿಂದ ಕರೆಯುತ್ತಾರೆ. ಅದು ಭಾರತೀಯರಿಗೆ ಪವಿತ್ರವೆಂದು ಪರಿಗಣಿತವಾದ ಮರ. ಈ ಮರದ ಕೆಳಗೆ ಧ್ಯಾನ ನಿರತರಾಗಿರುವಾಗಲೇ ಗೌತಮಬುದ್ಧರಿಗೆ ಜ್ಞಾನೋದಯವಾಯಿತು ಎಂಬ ಪ್ರತೀತಿಯಿದೆ.

ಹಲವು ಔಷಧಿಗಳ ಆಗರವಾಗಿರುವ ಬೇವಿನ ಮರವನ್ನೂ ಅರಳಿಯೊಂದಿಗೆ ನೆಟ್ಟು ಅಡಿಯಲ್ಲಿ ನಾಗರಕಲ್ಲನ್ನು ಪ್ರತಿಷ್ಠಾಪಿಸಿ, ಕಟ್ಟೆ ಕಟ್ಟುವುದು ಹಿಂದೆ ಸಂಪ್ರದಾಯವಾಗಿತ್ತು. 

ಬೇಸಿಗೆಯಲ್ಲಿ ಜನರ ಹರಟೆಯ ತಾಣವಾಗಿ, ಮಕ್ಕಳಿಗೆ ಆಟವಾಡುವ ಸ್ಥಳವಾಗಿ, ಗ್ರಾಮೀಣ ಆಟಗಳಾದ ಹುಲಿಗಟ್ಟ, ಪಗಡೆ, ಚೌಕಾಬಾರ ಮುಂತಾದ ಆಟಗಳಿಗೆ ಕ್ರೀಡಾಂಗಣವಾಗಿ, ದನಕರುಗಳಿಗೆ ಮೇವು ತಿನ್ನಿಸುವ ಕಟ್ಟೆಯಾಗಿ, ಹೊಸ ಗಂಡು ಹೆಣ್ಣಿನ ಪ್ರಥಮ ಪೂಜಾ ಸ್ಥಾನವಾಗಿ, ಮದುಮಗನನ್ನು ಸಿಂಗರಿಸುವ ಸ್ಥಳವಾಗಿ, ಹಿರಿಯರಿಗೆ ನೆರಳಾಗಿ, ಕಿರಿಯರಿಗೆ ಕಾಲಕಳೆಯುವ ನೆಲೆಯಾಗಿ, ಪೂಜಿಸುವವರಿಗೆ ದೇವಾಲಯವಾಗಿ ಅಶ್ವತ್ಥಕಟ್ಟೆಯು ಬಳಕೆಯಾಗುತ್ತಿದ್ದವು.

ಆಧುನಿಕತೆ ಹಲವು ರೂಢಿ, ಜಾನಪದವನ್ನು, ಆಚರಣೆ, ಪ್ರಕೃತಿ, ಪರಿಸರವನ್ನು, ಮನುಷ್ಯರ ನಡುವಿನ ಸಂಬಂಧಗಳನ್ನು ನುಂಗುತ್ತಿದೆ. ಅರಳಿಕಟ್ಟೆಯು ಗ್ರಾಮೀಣರ ಬದುಕಿನಲ್ಲಿ ಹಾಸುಹೊಕ್ಕಾಗಿತ್ತು. ಈಗದು ಅದರ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿರುವುದು ದುರಂತ. ಆಧುನಿಕತೆ ಮನುಷ್ಯನ ಬದುಕಿನ ಗುಣಮಟ್ಟ ಹೆಚ್ಚಿಸಬೇಕೆ ಹೊರತು ಹಾಳು ಮಾಡದಿರಲಿ ಎನ್ನುತ್ತಾರೆ ಶಿಕ್ಷಕಿ ಮಾಲತಿ.

ದಿಬ್ಬೂರಹಳ್ಳಿ ರಸ್ತೆಯಲ್ಲಿ ಬಶೆಟ್ಟಹಳ್ಳಿ ಗೇಟಿನ ಬಳಿಯಿರುವ ಅಶ್ವತ್ಥಕಟ್ಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.