ADVERTISEMENT

ಐದು ವರ್ಷಗಳ ಒಳಗೆ ವೇದ ಗ್ರಾಮ ಸ್ಥಾಪನೆ: ಸದ್ಗುರು ಮಧುಸೂದನ ಸಾಯಿ ಘೋಷಣೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 2:10 IST
Last Updated 27 ಸೆಪ್ಟೆಂಬರ್ 2025, 2:10 IST
ಮುದ್ದೇನಹಳ್ಳಿಯಲ್ಲಿ ನಡೆಯುತ್ತಿರುವ ಅತಿರುದ್ರ ಮಹಾ ಯಜ್ಞ, ನವರಾತ್ರಿ ಕಾರ್ಯಕ್ರಮದಲ್ಲಿ ಶ್ರೀಚಕ್ರ ಯಂತ್ರದ ರಂಗೋಲಿ ಭಕ್ತರನ್ನು ಆಕರ್ಷಿಸಿತು 
ಮುದ್ದೇನಹಳ್ಳಿಯಲ್ಲಿ ನಡೆಯುತ್ತಿರುವ ಅತಿರುದ್ರ ಮಹಾ ಯಜ್ಞ, ನವರಾತ್ರಿ ಕಾರ್ಯಕ್ರಮದಲ್ಲಿ ಶ್ರೀಚಕ್ರ ಯಂತ್ರದ ರಂಗೋಲಿ ಭಕ್ತರನ್ನು ಆಕರ್ಷಿಸಿತು    

ಚಿಕ್ಕಬಳ್ಳಾಪುರ: ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ವೇದ ಗ್ರಾಮ ರೂಪಿಸಬೇಕು ಎನ್ನುವುದು ಮನಸ್ಸಿನಲ್ಲಿದೆ. ಮುಂದಿನ 5 ವರ್ಷದೊಳಗೆ, ಮುಂದಿನ ಅತಿರುದ್ರ ಮಹಾಯಜ್ಞದ ವೇಳೆಗೆ ವೇದ ಗ್ರಾಮ ಸ್ಥಾಪನೆ ಮಾಡಲಾಗುತ್ತದೆ ಎಂದು ಸದ್ಗುರು ಮಧುಸೂದನ ಸಾಯಿ ಘೋಷಿಸಿದರು.

ಮುದ್ದೇನಹಳ್ಳಿಯಲ್ಲಿ ನಡೆಯುತ್ತಿರುವ ಅತಿರುದ್ರ ಮಹಾಯಜ್ಞ, ನವರಾತ್ರಿ ಹೋಮ ಹಾಗೂ ದುರ್ಗಾ ಪೂಜೆಯ 5ನೇ ದಿನವಾದ ಶುಕ್ರವಾರ ಮಾತನಾಡಿದರು.

ವೇದ ಗ್ರಾಮ ಎಂದರೆ ಬೇರೆ ಬೇರೆ ಕಡೆಯಿಂದ ವೇದ ಪಂಡಿತರನ್ನು ಕರೆದು ಇಲ್ಲಿ ಒಂದು ಗ್ರಾಮದ ರೀತಿ ಸೃಷ್ಟಿ ಮಾಡಬೇಕು. ಪ್ರಾಚೀನ ಕಾಲದಲ್ಲಿ ಹೇಗೆ ವೈದಿಕ ಗ್ರಾಮಗಳು ಇರುತ್ತಿದ್ದವು, ಅಗ್ರಹಾರಗಳು ಇರುತ್ತಿದ್ದವೋ ಅಂತಹ ಅಗ್ರಹಾರವನ್ನು ಇಲ್ಲಿ ಸೃಷ್ಟಿಮಾಡುವ ಬಗ್ಗೆ ಯೋಜಿಸುತ್ತಿದ್ದೇವೆ. ಇದಕ್ಕೆ ಬೇಕಿರುವ ಎಲ್ಲಾ ಸೌಲಭ್ಯಗಳನ್ನು ನಮ್ಮ ಸಂಸ್ಥೆಯ ಪರವಾಗಿ ನೀಡುತ್ತೇವೆ ಎಂದು ಹೇಳಿದರು.

ADVERTISEMENT

ಇಲ್ಲಿ ರೂಪುಗೊಳ್ಳುವ, ಇಲ್ಲಿಗೆ ಬರುವ ಪಂಡಿತರ ಒಂದೇ ಕೆಲಸ ನಮ್ಮ ಸಾಂಸ್ಕೃತಿಕ, ಅಧ್ಯಾತ್ಮ, ವೇದ ಪರಂಪರೆಯನ್ನು ಅವರು ಉಳಿಸಬೇಕಷ್ಟೇ. ವೇದ ಗ್ರಾಮ ಸ್ಥಾಪನೆಯ ಸ್ಥಳವೂ ನನ್ನ ಮನಸ್ಸಿಲ್ಲಿದೆ ಎಂದರು.

ಎಲ್ಲೆಡೆ ‘ವೈದ್ಯೋ ನಾರಾಯಣ ಹರಿಃ’ ಅಂತ ಹೇಳುತ್ತಾರೆ. ನಮ್ಮ ಸಂಸ್ಥೆಯಲ್ಲಿ ‘ರೋಗಿ ನಾರಾಯಣೋ ಹರಿಃ’ ಎಂದು ಹೇಳುತ್ತಿದ್ದೇವೆ. ಅಂದರೆ ರೋಗಿಯ ರೂಪದಲ್ಲಿ ಭಗವಂತನೇ ಇಲ್ಲಿಗೆ ಬಂದಿದ್ದಾನೆ. ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ನಮ್ಮವರು ಬಂದಿದ್ದಾರೆಂಬ ಭಾವನೆಯಿಂದ ನೋಡಿಕೊಳ್ಳಬೇಕು. ನಮ್ಮ ಸಂಸ್ಥೆಯಲ್ಲಿ ಮಕ್ಕಳಿಗೆ ಕೂಡ ‘ವಿದ್ಯಾರ್ಥಿ ದೇವೋಭವ’ ಅಂತ ಹೇಳುತ್ತೇವೆ. ‘ಆಚಾರ್ಯ ದೇವೋ ಭವ’ ಎಲ್ಲಾ ಕಡೆ ಇರುತ್ತದೆ. ಆದರೆ ವಿದ್ಯಾರ್ಥಿಗಳನ್ನು ನಾವು ದೇವರ ಸಮಾನವಾಗಿ ನೋಡುತ್ತೇವೆ. ಎಲ್ಲರಿಗೂ ಸಮಾನವಾದ ಅವಕಾಶ ನೀಡುತ್ತಿದ್ದೇವೆ. ಇದೇ ನಿಜವಾದ ಪೂಜೆ ಎಂದರು.

ಶೃಂಗೇರಿ ಶಾರದಾ ಪೀಠದ ನಿವೃತ್ತ ಆಡಳಿತಾಧಿಕಾರಿ ಗೌರಿಶಂಕರ್ ನವರಾತ್ರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ನವರಾತ್ರಿ ಪ್ರಯುಕ್ತ ನಡೆಯುತ್ತಿರುವ ಅತಿರುದ್ರ ಮಹಾಯಜ್ಞ ಮತ್ತು ದುರ್ಗಾ ಪೂಜೆಯಲ್ಲಿ ಶ್ರೀಲಲಿತಾ ತ್ರಿಪುರ ಸುಂದರಿ ಮತ್ತು ಶ್ರೀಚಕ್ರ ಯಂತ್ರದ ರಂಗೋಲಿಗಳು ಭಕ್ತರನ್ನು ಆಕರ್ಷಿಸಿದವು. ಲಲಿತಾ ಹೋಮ, ಸುಹಾಸಿನಿ ಪೂಜೆ, ಕನ್ಯಾ ಪೂಜೆ, ಪೂರ್ಣಾಹುತಿ, ಬೆಂಗಾಲಿ ಶೈಲಿಯಲ್ಲಿ ದುರ್ಗಾ ಪೂಜೆ ಮತ್ತು ಆರತಿ ನೆರವೇರಿತು. ಪೂರ್ಣಾಹುತಿ ಮತ್ತು ಅಷ್ಟಾವಧಾನ ಸೇವೆ, ಚತುರ್ವೇದ ಪಾರಾಯಣ, ಸಂಗೀತ, ಪಂಚವಾದ್ಯ ಹಾಗೂ ನಾದಸ್ವರಗಳೊಂದಿಗೆ ಶಾಸ್ತ್ರೋಕ್ತವಾಗಿ ಶಿವಪೂಜೆ ನೆರವೇರಿತು.

ಸಂಸದ ಬಸವರಾಜ ಬೊಮ್ಮಾಯಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.