ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಂತ ಬುಧವಾರ ಆಯುಧ ಪೂಜೆ, ಗುರುವಾರ ವಿಜಯ ದಶಮಿಯನ್ನು ಶ್ರದ್ಧಾಭಕ್ತಿಯಿಂದ ಸಂಭ್ರಮದಿಂದ ಆಚರಿಸಲಾಯಿತು. ನಗರ ಮತ್ತು ಗ್ರಾಮೀಣ ಭಾಗದಲ್ಲಿನ ದೇವಾಲಯಗಳಲ್ಲಿ ಹಬ್ಬದ ಪ್ರಯುಕ್ತ ವಿಶೇಷ ಧಾರ್ಮಿಕ ಪೂಜಾ ಕೈಕಂರ್ಯಗಳು ಅದ್ಧೂರಿಯಾಗಿ ಜರುಗಿದವು.
ಗ್ರಾಮೀಣ ಪ್ರದೇಶದಲ್ಲಿ ಆಯುಧ ಪೂಜೆ ದಿನದಂದು ಮನೆ ಆವರಣವನ್ನು ಸ್ವಚ್ಛಗೊಳಿಸಿದ ಮಹಿಳೆಯರು, ಬಣ್ಣ ಬಣ್ಣದ ರಂಗೋಲಿ ಬಿಡಿಸಿದರು. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿನ ಜನರು ಮನೆಯಲ್ಲಿನ ಕೃಷಿ ಉಪಕರಣಗಳು, ವಾಹನಗಳನ್ನು ಸ್ವಚ್ಛಗೊಳಿಸಿ, ಬಾಳೆಕಂಬ ಕಟ್ಟಿ, ವಿವಿಧ ಹೂವಿನಿಂದ ಸಿಂಗರಿಸಿ ಪೂಜೆ ಸಲ್ಲಿಸಿದರು.
ಹಬ್ಬದ ಪ್ರಯುಕ್ತ ಭಕ್ತರು ದೇಗುಲಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ವಿಶೇಷವಾಗಿ ಮಕ್ಕಳು ಮತ್ತು ಮಹಿಳೆಯರು ಹಬ್ಬದ ಹೊಸ ಬಟ್ಟೆ ಧರಿಸಿ ಸಂಭ್ರಮಿಸಿದರು. ಬಳಿಕ ಹಬ್ಬದ ಸಿಹಿ ಊಟ ಸವಿದರು. ನಗರದ ಬಹುತೇಕ ದೇವಾಲಯಗಳಲ್ಲಿ ಆಯುಧ ಪೂಜೆ, ವಿಜಯದಶಮಿ ಹಬ್ಬದ ಪ್ರಯುಕ್ತ ದೇವರಿಗೆ ವಿಶೇಷವಾದ ಅಲಂಕಾರ ಮಾಡಲಾಗಿತ್ತು.
ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು, ಆಸ್ಪತ್ರೆಗಳು, ವಿವಿಧ ಸಂಘ ಸಂಸ್ಥೆಗಳ ಕಚೇರಿ, ಮಳಿಗೆಗಳನ್ನು ಬಾಳೆದಿಂಡು, ಹೂವಿನ ಅಲಂಕಾರ ಮಾಡುವ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು. ವಾಹನಗಳಿಗೂ ಪೂಜೆ ಸಲ್ಲಿಸಲಾಯಿತು. ನಗರದ ವಿವಿಧ ದೇವಾಲಯಗಳಲ್ಲಿ ಬನ್ನಿಪೂಜೆ ಸಲ್ಲಿಸುವ ಮೂಲಕ ದಸರಾ ಹಬ್ಬದ ಸಂಭ್ರಮ ಸಡಗರದಿಂದ ನಡೆಯಿತು.
ಇನ್ನೂ ಜಿಲ್ಲಾ ಕೇಂದ್ರದ ನಗರಸಭೆಯಲ್ಲಿ ಆಯುಧ ಪೂಜೆ ಆಚರಣೆ ಜೋರಾಗಿಯೇ ಕಂಡು ಬಂತು. ಜೆಸಿಬಿ, ಟ್ರಾಕ್ಟರ್, ಟಿಪ್ಪರ್, ಕಸ ಸಾಗಿಸುವ ವಾಹನಗಳನ್ನು ಸ್ವಚ್ಛಗೊಳಿಸಿ ನಗರಸಭೆ ಆವರಣದಲ್ಲಿ ನಿಲ್ಲಿಸಿ, ಅಲಂಕರಿಸಲಾಗಿತ್ತು. ಪೂಜೆ ನಂತರ ನಗರದ ಪ್ರಮುಖ ಬೀದಿಗಳಲ್ಲಿ ನಗರಸಭೆ ವಾಹನಗಳ ಮೆರವಣಿಗೆ ನಡೆಯಿತು.
ಬನ್ನಿ ಗಿಡಕ್ಕೆ ಪೂಜೆ: ವಿಜಯ ದಶಮಿ ಪ್ರಯುಕ್ತ ನಗರದ ವಾಪಸಂದ್ರದ ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿರುವ ಬನ್ನಿವೃಕ್ಷಕ್ಕೆ ತಾಲ್ಲೂಕು ಆಡಳಿತದಿಂದ ಪೂಜೆ ಸಲ್ಲಿಸಲಾಯಿತು. ಬನ್ನಿ ಗಿಡಕ್ಕೆ ಕತ್ತಿಯಿಂದ ಗಿಡ ಕಡಿಯುತ್ತಿದ್ದಂತೆ ಬನ್ನಿ ಎಲೆಗಾಗಿ ನೆರೆದಿದ್ದ ಜನರು ಮುಗಿ ಬಿದ್ದು ಮನೆಗೆ ಕೊಂಡೊಯ್ದು ಪೂಜೆ ಸಲ್ಲಿಸಿ, ನೆರೆಹೊರೆಯರಿಗೆ ಬನ್ನಿ ಎಲೆಯನ್ನು ವಿನಿಮಯ ಮಾಡಿಕೊಂಡರು.
ನಗರದ ಚಾಮುಂಡೇಶ್ವರಿ ದೇವಾಲಯ, ಗಂಗಮ್ಮ ದೇವಾಲಯ, ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯ, ಕೋದಂಡರಾಮಸ್ವಾಮಿ ದೇವಾಲಯ, ಪೇಟೆ ಆಂಜನೇಯಸ್ವಾಮಿ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳ ಉತ್ಸವ ಮೂರ್ತಿಗಳ ಮೆರವಣೆಗೆ ವಿಜೃಂಭಣೆಯಿಂದ ನಡೆಯಿತು.
ಗ್ರಾಮೀಣ ಪ್ರದೇಶಗಳಲ್ಲಿ ಮಾತಾ ಮಹೇಶ್ವರಮ್ಮ, ಗಂಗಮ್ಮ, ಸಪ್ಪಲಮ್ಮ, ಮುತ್ಯಾಲಮ್ಮ, ಸತ್ಯಮ್ಮ ಸೇರಿದಂತೆ ಹಲವು ದೇವರುಗಳ ಉತ್ಸವ ಮೂರ್ತಿಗಳ ಮೆರವಣಿಗೆ ಶ್ರದ್ಧಾಭಕ್ತಿಯಿಂದ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.