
ಬಾಗೇಪಲ್ಲಿ: ವಿಶ್ವಕ್ಕೆ ಶಾಂತಿ, ಪ್ರೀತಿಯ ಸಂದೇಶ ಸಾರಿದ ಯೇಸು ಕ್ರಿಸ್ತರ ಜನ್ಮದಿನಾಚರಣೆಯನ್ನು ಪಟ್ಟಣ ಹಾಗೂ ಗ್ರಾಮಗಳ ಚರ್ಚ್‍ಗಳಲ್ಲಿ ಗುರುವಾರ ಕೈಸ್ತ ಸಮುದಾಯದವರು ಮತ್ತು ಅನುಯಾಯಿಗಳು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಿದರು.
ಪಟ್ಟಣದ ಹೊಸ ಜೀವನ ನಿಲಯ ಚರ್ಚ್, ಇವ್ವಾಂಜೆಲಿಕಲ್ ಚರ್ಚ್, ಪಾತಬಾಗೇಪಲ್ಲಿ ರಸ್ತೆಯ ಚರ್ಚ್ ಸೇರಿದಂತೆ ಗ್ರಾಮೀಣ ಭಾಗದ ಚರ್ಚ್‍ಗಳನ್ನು ಕ್ರಿಸ್ಮಸ್ ದಿನದ ಪ್ರಯುಕ್ತ ವಿದ್ಯುತ್ ದೀಪಗಳು, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಚರ್ಚ್‍ಗಳ ಒಳಗೆ, ಹೊರಗೆ ಕ್ರಿಸ್ಮಸ್ ಗಿಡಗಳು ಮತ್ತು ನಕ್ಷತ್ರ ಆಕಾರದ ಆಕಾಶ ಬುಟ್ಟಿಗಳನ್ನು ಇರಿಸಲಾಗಿತ್ತು. ಯೇಸುಶಿಲುಬೆಗೆ ಬಣ್ಣ ಬಣ್ಣದ ಅಲಂಕಾರ ಮಾಡಲಾಗಿತ್ತು. ಚರ್ಚ್‍ಗಳ ಮುಂದೆ ಹುಲ್ಲಿನ ಮನೆಯಲ್ಲಿ ಬಾಲಯೇಸು, ಮೇರಿ, ಸಾಂತ್ರಾಸ್‍ನ ಬಣ್ಣ ಬಣ್ಣದ ಅಲಂಕಾರಿಕ ಬೊಂಬೆಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.
ಪಟ್ಟಣ ಸೇರಿದಂತೆ ವಿವಿಧ ಕಡೆಗಳಿಂದ ಯೇಸುಕ್ರಿಸ್ತರ ಭಕ್ತರು ಚರ್ಚ್‍ಗಳಿಗೆ ಬಂದು ಯೇಸುಶಿಲುಬೆ ಮುಂದೆ ಮೊಂಬತ್ತಿಗಳನ್ನು ಬೆಳಗಿಸಿದರು. ಬೈಬಲ್‍ನ ಸಂದೇಶದ ವಾಕ್ಯಗಳನ್ನು ಪಠಿಸಿದರು. ಮಹಿಳೆಯರು, ಮಕ್ಕಳು, ಯುವಕ, ಯುವತಿಯರು ಹೊಸ ಉಡುಪುಗಳು ಧರಿಸಿದ್ದರು. ಯೇಸು, ಬಾಲಯೇಸು, ಮೇರಿ, ಸಂತ್ರಾಸ್‍ರವರ ಹಾಡುಗಳನ್ನು ಹಾಡುತ್ತಾ, ಚಪ್ಪಾಳೆ ಹೊಡೆಯುತ್ತಾ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಪಟ್ಟಣದ ಹೊಸ ಜೀವನ ನಿಲಯದ ಚರ್ಚ್‍ನ ಪಾಸ್ಟರ್ ಎಚ್.ಎಸ್.ಪ್ರಕಾಶ್, ಬೈಬಲ್ ವಾಕ್ಯಗಳನ್ನು ಪಠಿಸಿ ವಿಶೇಷ ಪ್ರಾರ್ಥನೆ ಮಾಡಿದರು. ಮಹಿಳೆಯರು, ಹೆಣ್ಣುಮಕ್ಕಳು, ಯುವಕರು ಯೇಸುಕ್ರಿಸ್ತ, ಮೇರಿ ಅಮ್ಮನವರ ಹಾಡುಗಳನ್ನು ಹಾಡಿದರು. ‘ಹುಟ್ಟು ಕುರುಡನಮ್ಮ’... ಹಾಡಿಗೆ ಯುವಕನ ನೃತ್ಯ, ಮಹಿಳೆಯರ ಕೋಲಾಟ, ಯುವಕ, ಯುವತಿಯರ, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೆಳೆಯಿತು.
ಪಟ್ಟಣದ ಬೆಸ್ಕಾಂ ಕಚೇರಿ ಹಿಂಭಾಗದ ಚರ್ಚ್‍ಗಳಲ್ಲಿ ಫಾದರ್ ಬೈಬಲ್ ಸಂದೇಶ ಸಾರಿದರು. ಮಹಿಳೆಯರು, ಮಕ್ಕಳು ನೃತ್ಯ ಮಾಡಿದರು. ಯಸುಕ್ರಿಸ್ತರ ವಿಶೇಷ ಪ್ರಾರ್ಥನೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.