ADVERTISEMENT

ಶಿಡ್ಲಘಟ್ಟ | ಕಾಳನಾಯಕನಹಳ್ಳಿಯ ಸರ್ಕಾರಿ ಶಾಲೆಗೆ ಗ್ರಾಮಸ್ಥರ ಸಹಕಾರ

ಖಾಸಗಿಯಾಗಿ ಶಾಲಾ ವಾಹನ ಹೊಂದಿರುವ ಕಾಳನಾಯಕನಹಳ್ಳಿ ಶಾಲೆ

ಡಿ.ಜಿ.ಮಲ್ಲಿಕಾರ್ಜುನ
Published 5 ಏಪ್ರಿಲ್ 2025, 8:00 IST
Last Updated 5 ಏಪ್ರಿಲ್ 2025, 8:00 IST
ವಿದ್ಯಾರ್ಥಿಗಳಿಂದ ವಿಜ್ಞಾನದ ಪ್ರಯೋಗ
ವಿದ್ಯಾರ್ಥಿಗಳಿಂದ ವಿಜ್ಞಾನದ ಪ್ರಯೋಗ   

ಶಿಡ್ಲಘಟ್ಟ: ತಾಲ್ಲೂಕಿನ ಕಾಳನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಎಸ್‌ಡಿಎಂಸಿ ಮತ್ತು ಪೋಷಕರ ಸಹಕಾರದೊಂದಿಗೆ ಖಾಸಗಿಯಾಗಿ ಶಾಲಾ ವಾಹನವನ್ನು ಹೊಂದಿರುವ ವಿಶಿಷ್ಟವಾದ ಶಾಲೆಯಾಗಿದೆ. ಶಾಲೆಯು ಹೊಂದಿರುವ ವಾಹನದಿಂದಾಗಿ ಸುತ್ತಮುತ್ತಲಿನ 20 ಹಳ್ಳಿಗಳಿಂದ ಶಾಲೆಗೆ ಮಕ್ಕಳು ಬರುವಂತಾಗಿದೆ.

ಕಾಳನಾಯಕನಹಳ್ಳಿಯ ಸರ್ಕಾರಿ ಶಾಲೆಯ ವಿಶೇಷತೆಗಳು ಹಲವು. 1926ರಲ್ಲಿ ಸ್ಥಾಪನೆಯಾದ ಈ ಶಾಲೆಗೆ 2016-17 ಸಾಲಿನಿಂದ ಸರ್ಕಾರದಿಂದ ಮಾನ್ಯತೆ ಪಡೆದು ಎಲ್‌ಕೆಜಿ ಯಿಂದ 8ನೇ ತರಗತಿಯವರೆಗೆ ಆಂಗ್ಲ ಮಾಧ್ಯಮ ಆರಂಭಿಸಲಾಗಿದೆ. ಒಂದು ಸಾವಿರಕ್ಕೂ ಅಧಿಕ ಪುಸ್ತಕಗಳನ್ನು ಹೊಂದಿರುವ ಉತ್ತಮ ಗ್ರಂಥಾಲಯ ಇಲ್ಲಿದೆ. ನುರಿತ ಅನುಭವವುಳ್ಳ ಎಲ್ಲಾ ವಿಷಯಾಧಾರಿತ ಹನ್ನೊಂದು ಮಂದಿ ಶಿಕ್ಷಕರಿದ್ದಾರೆ. ಪ್ರತ್ಯೇಕ ಶಾಲಾ ಸಮವಸ್ತ್ರ, ಇಲಾಖೆಯ ಪಠ್ಯ ಬೋಧನೆ ಜೊತೆಗೆ ಪೂರಕವಾಗಿ ಖಾಸಗಿ ಪಠ್ಯಪುಸ್ತಕಗಳ ಅಳವಡಿಕೆ, ಸುಸಜ್ಜಿತ ಕಟ್ಟಡ ಮತ್ತು ಆಟದ ಮೈದಾನವಿದೆ. ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ, ಪ್ರತ್ಯೇಕ ವಿಷಯಗಳ ಪ್ರಯೋಗಾಲಯದ ಮೂಲಕ ಮಕ್ಕಳಿಗೆ ಪ್ರಾಯೋಗಿಕ ಬೋಧನೆ ಇದೆ.

ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಾಂಸ್ಕೃತಿಕ ಚಟುವಟಿಕೆ, ಶಾಲಾ ವಾರ್ಷಿಕೋತ್ಸವ, ಯೋಗ ತರಗತಿ, ವಸ್ತು ಪ್ರದರ್ಶನ, ಕ್ರೀಡಾ ಚಟುವಟಿಕೆ, ಪಠ್ಯ ಬೋಧನೆ ಜೊತೆಗೆ ಸ್ಪೋಕನ್ ಇಂಗ್ಲಿಷ್, ಕಂಪ್ಯೂಟರ್ ತರಗತಿ ನಡೆಸಲಾಗುತ್ತದೆ. ಶಾಲೆಯ ಹಿರಿಯ ವಿದ್ಯಾರ್ಥಿ ಅಜಿತ್ ಕುಮಾರ್ ಅವರು ಎನ್.ಎಂ.ಎಂ.ಎಸ್ ಮತ್ತು ನವೋದಯ ಪರೀಕ್ಷೆಗಳಿಗೆ ತರಬೇತಿ ನೀಡುತ್ತಾರೆ. ಪ್ರತಿಭಾ ಕಾರಂಜಿ, ಕಲಿಕಾ ಹಬ್ಬ, ಗಣಿತ ಕಲಿಕಾ ಆಂದೋಲನ ಮುಂತಾದ ಸ್ಪರ್ಧೆಗಳಲ್ಲಿ ಈ ಶಾಲೆಯ ಮಕ್ಕಳು ಉತ್ತಮ ಪ್ರದರ್ಶನ ನೀಡುತ್ತಿರುತ್ತಾರೆ.

ADVERTISEMENT

ಎಲ್‌ಕೆಜಿ ಮತ್ತು ಯುಕೆಜಿ ಮಕ್ಕಳಿಗೆ ಗ್ರಾಜುಯೇಷನ್ ಡೇ, ಪೋಷಕರಿಗೆ ಕ್ರೀಡಾ ಸ್ಪರ್ಧೆ, ಮಕ್ಕಳ ಸಂತೆ, ಆರೋಗ್ಯ ಜಾಗೃತಿ ಮುಂತಾದ ಕಾರ್ಯಕ್ರಮಗಳ ಮೂಲಕ ಮಕ್ಕಳೊಂದಿಗೆ ಪೋಷಕರನ್ನೂ ಶಾಲೆಯೊಂದಿಗೆ ಜೋಡಿಸಿಕೊಳ್ಳಲಾಗುತ್ತಿದೆ. ಇದಕ್ಕೆ ಪೂರಕವಾಗಿ ಶಾಸಕ ಬಿ.ಎನ್.ರವಿಕುಮಾರ್ ಅವರಿಂದ ಶಾಲೆಗೆ ಕೊಠಡಿ ಮತ್ತು ಆಸನದ ವ್ಯವಸ್ಥೆಯನ್ನೂ ಮಾಡಿಸಿಕೊಂಡಿದ್ದಾರೆ.

ಶಾಲೆಯಲ್ಲಿ ಪ್ರಸ್ತುತ 200 ವಿದ್ಯಾರ್ಥಿಗಳಿದ್ದಾರೆ. ಸಮರ್ಥ ಹಾಗೂ ಅನುಭವಿ ಶಿಕ್ಷಕರಿದ್ದಾರೆ. ಪೋಷಕರು ಹಾಗೂ ಗ್ರಾಮಸ್ಥರ ಸಹಕಾರವೂ ನಮಗಿದೆ. ಶಾಲೆಯ ದಾಖಲಾತಿ ಹೆಚ್ಚಿಸಿಕೊಳ್ಳಲು ಕೆಲವು ಅವಶ್ಯಕತೆಗಳಿವೆ. ಇಲಾಖಾ ವತಿಯಿಂದ ಪಿ.ಎಂ.ಶ್ರೀ ಯೋಜನೆಗೆ ಒಳಪಡಿಸುವುದು, ಇನ್ನೊಂದು ವಾಹನದ ವ್ಯವಸ್ಥೆ, ಇಲಾಖೆಯಿಂದ ಇನ್ನೂ ಹೆಚ್ಚಿನ ಭೌತಿಕ ಸಂಪನ್ಮೂಲಗಳನ್ನು ಒದಗಿಸಿಕೊಡಬೇಕು ಎಂದು ಮುಖ್ಯಶಿಕ್ಷಕಿ ಟಿ.ಕೆ.ಮಂಜುಳಮ್ಮ ಹೇಳಿದರು.

ಮಕ್ಕಳ ವೇಷ ಭೂಷಣಗಳು
ಮಕ್ಕಳ ವೇಷ ಭೂಷಣಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.