ಶಿಡ್ಲಘಟ್ಟ: ತಾಲ್ಲೂಕಿನ ತಲದುಮ್ಮನಹಳ್ಳಿ ಗ್ರಾಮದಲ್ಲಿ ಸಾರ್ವಜನಿಕ ನಲ್ಲಿಗಳಲ್ಲಿ ಮಣ್ಣು ಮಿಶ್ರಿತ ಹಳದಿ ಬಣ್ಣದ ನೀರು ಪೂರೈಕೆಯಾಗುತ್ತಿದೆ. ರೇಷ್ಮೆ ಕೃಷಿ, ಹೈನುಗಾರಿಕೆ ಮಾಡುತ್ತಿರುವ ಕುಟುಂಬ ಹೆಚ್ಚಿರುವ ಗ್ರಾಮದಲ್ಲಿ ಈ ಅಶುದ್ಧ ನೀರನ್ನು ದನಕರುಗಳಿಗೆ ಹಾಗೂ ದಿನ ನಿತ್ಯದ ಕೆಲಸ ಕಾರ್ಯಗಳಿಗೂ ಬಳಸಲಾಗುತ್ತಿಲ್ಲ.
ನಲ್ಲಿಗಳಲ್ಲಿ ಪೂರೈಕೆಯಾಗುತ್ತಿರುವ ನೀರಲ್ಲಿ ಮಣ್ಣು, ಹುಳು ಉಪ್ಪಟೆಗಳು ಪೂರೈಕೆಯಾಗುತ್ತಿದ್ದು ಗ್ರಾಮಸ್ಥರು ಅಶುದ್ಧ ನೀರನ್ನು ಬಳಸಲೂ ಆಗದೆ ಸುಮ್ಮನೆ ಇರಲೂ ಆಗದೆ ದಿನ ನಿತ್ಯ ಬಳಕೆ ನೀರಿಗಾಗಿ ಪರದಾಡುವಂತಾಗಿದೆ. ₹700 ಕೊಟ್ಟು ಟ್ಯಾಂಕರ್ ನೀರು ಹಾಕಿಸಿಕೊಳ್ಳುವಂತಾಗಿದೆ.
ಊರ ಹೊರಗೆ ಕೊಳವೆಬಾವಿಯಿದ್ದು ಕೊಳವೆ ಬಾವಿ ಪಕ್ಕದಲ್ಲೆ ನೀರಿನ ಕಾಲುವೆ ಹಾಗೂ ಹಳ್ಳವೊಂದಿದೆ. ಮಳೆಗಾಲದಲ್ಲಿ ಈ ಹಳ್ಳ ತುಂಬಿದ ನೀರು ಮತ್ತು ಕಾಲುವೆಯ ನೀರು ಕೊಳವೆಬಾವಿಯ ಇಂಗುಗುಂಡಿ ಮೂಲಕ ಕೊಳವೆಬಾವಿಗೆ ಸೇರಿ ನೀರಲ್ಲಿ ಮಿಶ್ರವಾಗುತ್ತಿದೆ.
ಈ ನೀರಲ್ಲಿ ಹೊಸ ಮಣ್ಣು ಸೇರಿ ನೀರು ಹಳದಿ ಬಣ್ಣಕ್ಕೆ ತಿರಗಿದ್ದು ನೀರಲ್ಲಿ ಸಣ್ಣಪುಟ್ಟ ಹುಳು ಕೂಡ ಉತ್ಪತ್ತಿಯಾಗಿ ನಲ್ಲಿಗಳಲ್ಲಿ ಹರಿದು ಬರುತ್ತಿದೆ.
ಕುಡಿಯುವ ನೀರಿಗಾಗಿ ಶುದ್ಧ ಕುಡಿಯುವ ನೀರಿನ ಘಟಕವಿದ್ದು ಯಾರು ಕೂಡ ಈ ನೀರನ್ನು ಕುಡಿಯಲು ಬಳಸುವುದಿಲ್ಲ. ಆದರೆ ಹಾಲು ನೀಡುವ ಎಮ್ಮೆ ಸೀಮೆ ಹಸು, ಕುರಿ ಮೇಕೆ ಆಕಳಿಗೆ ಈ ನೀರನ್ನು ಬಳಸಲಾಗುತ್ತಿದೆ. ಮನೆಯಲ್ಲಿ ಪಾತ್ರೆ ಪಗಡೆ ತೊಳೆಯಲು, ಸ್ನಾನ ಮಾಡಲು ಕೂಡ ಈ ನಲ್ಲಿ ನೀರನ್ನೆ ಬಳಕೆ ಮಾಡಲಾಗುತ್ತಿದೆ.
ಕಳೆದ ಇಪ್ಪತ್ತು ಇಪ್ಪತ್ತೈದು ದಿನಗಳಿಂದಲೂ ಅಶುದ್ಧ ನೀರು ಪೂರೈಕೆಯಾಗುತ್ತಿದ್ದು ಈ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯರಿಗೆ ದೂರಿದ್ದಾರೆ. ಈ ಸಮಸ್ಯೆ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯರಿಗೆ ಎಲ್ಲವೂ ಗೊತ್ತಿದ್ದರೂ ಉಪಯೋಗವಾಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಗ್ರಾಮದ ಮಧ್ಯೆ ರಾಷ್ಟ್ರೀಯ ಹೆದ್ದಾರಿ 234 ರಸ್ತೆ ಹಾದು ಹೋಗಲಿದ್ದು ರಸ್ತೆಯ ಮೇಲ್ಭಾಗದ ಮನೆಗಳಿಗೆ ಮಾತ್ರ ಈ ಸಮಸ್ಯೆ ಕಾಡುತ್ತಿದೆ. ಅಶುದ್ಧ ನೀರು ಪೂರೈಕೆಯಾಗುತ್ತಿರುವ ಕೊಳವೆಬಾವಿಯಿಂದ ಈ ಭಾಗದ ಮನೆಗಳಿಗೆ ನೀರು ಪೂರೈಕೆಯಾಗುತ್ತಿದೆ. ರಸ್ತೆ ಕೆಳಭಾಗದ ಮನೆಗಳಿಗೆ ಬೇರೆ ಕೊಳವೆ ಬಾವಿಗಳಿಂದ ನೀರು ಪೂರೈಕೆಯಾಗುತ್ತಿದ್ದು ಸಮಸ್ಯೆ ಏನಿಲ್ಲ. ಇಪ್ಪತ್ತೈದು ದಿನಗಳಿಂದಲೂ ಅಶುದ್ಧ ನೀರು ಪೂರೈಕೆ ನಿಂತಿಲ್ಲ. ಗ್ರಾಮಸ್ಥರ ಗೋಳು ಕೂಡ ನಿಂತಿಲ್ಲ.
ಗ್ರಾಮದಲ್ಲಿ ನಾಲ್ಕು ಕೊಳವೆಬಾವಿಗಳಿದ್ದು ಹೊಸದಾಗಿ ಜಲ ಜೀವನ್ ಮಿಷನ್‌ನಡಿಯೂ ಒಂದು ಕೊಳವೆಬಾವಿ ಕೊರೆಸಿದ್ದು ಅದರಲ್ಲೂ ನೀರು ಇದೆ. ಮನೆ ಮನೆಗೂ ನಲ್ಲಿಗಳನ್ನು ಅಳವಡಿಸಿದೆ. ಪೈಪ್ ಸಂಪರ್ಕವನ್ನು ನೀಡಿದೆ. ಕೊಳವೆಬಾವಿ ಕೊರೆಸಿ ಒಂದೂವರೆ ವರ್ಷ ಆಗಿದೆ. ಆದರೆ ಇದುವರೆಗೂ ಬೆಸ್ಕಾಂನಿಂದ ವಿದ್ಯುತ್ ಸಂಪರ್ಕ ನೀಡಿಲ್ಲ. ಜಲ ಜೀವನ್ ಮಿಷನ್‌ನಡಿ ಕೊರೆದ ಕೊಳವೆಬಾವಿಗೆ ವಿದ್ಯುತ್ ಸಂಪರ್ಕ ಕೊಟ್ಟರೆ ಆ ಕೊಳವೆಬಾವಿಯಿಂದ ನೀರು ಪೂರೈಸಲಾಗುವುದು. ಆಗ ಹಳದಿ ಬಣ್ಣದ, ಮಣ್ಣು ಮಿಶ್ರಿತ ನೀರು ಪೂರೈಕೆ ಸಮಸ್ಯೆ ಇಲ್ಲವಾಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು.
ಲೀಕೇಜ್‌ನಿಂದ ಸಮಸ್ಯೆ ಊರ ಹೊರಗೆ ಇರುವ ಕೊಳವೆ ಬಾವಿ ಪಕ್ಕದಲ್ಲೆ ನೀರಿನ ಕಾಲುವೆ ಹಾಗೂ ಹಳ್ಳವೊಂದಿದೆ. ಸಾಲದ್ದಕ್ಕೆ ಇಂಗುಗುಂಡಿ ನಿರ್ಮಿಸಿದ್ದು ಇಂಗುಗುಂಡಿಯ ಕೇಸಿಂಗ್ ಪೈಪ್ ಲೀಕೇಜ್‌ನಿಂದ ಸಮಸ್ಯೆ ಉಂಟಾಗಿದೆ. ದುರಸ್ತಿ ಮಾಡಿಸುವವರೆಗೂ ಕೊಳವೆ ಬಾವಿ ಮೋಟರ್‌ನ್ನು ಆನ್ ಮಾಡದೇ ಆಫ್ ಮಾಡಿ ಇಡಲಾಗಿತ್ತು. ಯಾರೋ ಮೋಟಾರ್ ಆನ್ ಮಾಡಿದ್ದರಿಂದ ಮಣ್ಣು ಮಿಶ್ರಿತ ನೀರು ನಲ್ಲಿ ಮೂಲಕ ಪೂರೈಕೆಯಾಗಿದೆ. ಪ್ರತಿನಿತ್ಯ ಮಳೆ ಸುರಿಯುತ್ತಿರುವುದರಿಂದ ಕೇಸಿಂಗ್ ತೆಗೆಯುವ ವಾಹನ ಅಲ್ಲಿಗೆ ಹೋಗಲಾಗುತ್ತಿಲ್ಲ. ಮಳೆ ನಿಂತ ತಕ್ಷಣ ಕೇಸಿಂಗ್ ತೆಗೆದು ದುರಸ್ತಿ ಮಾಡಿಸಲು ಕ್ರಮ ಜರುಗಿಸಲಾಗುವುದು. ಪವಿತ್ರ ದೇವರಾಜ್ ದೇವರಮಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.