ADVERTISEMENT

ಪುರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ

ಮಳೆ, ಚರಂಡಿ ಮಿಶ್ರಿತ ನೀರು ಹರಿಸಿದ ಆರೋಪ

​ಪ್ರಜಾವಾಣಿ ವಾರ್ತೆ
Published 8 ಜುಲೈ 2020, 8:59 IST
Last Updated 8 ಜುಲೈ 2020, 8:59 IST
ಸಂಪ್‌ಗೆ ಪುರಸಭೆಯಿಂದ ಕಲುಷಿತ ನೀರು ಸರಬರಾಜು ಮಾಡಿರುವುದು
ಸಂಪ್‌ಗೆ ಪುರಸಭೆಯಿಂದ ಕಲುಷಿತ ನೀರು ಸರಬರಾಜು ಮಾಡಿರುವುದು   

ಬಾಗೇಪಲ್ಲಿ: ಪುರಸಭೆಯವರು ಪಟ್ಟಣದ 22 ಹಾಗೂ 23ನೇ ವಾರ್ಡ್‌ಗಳಿಗೆ ಮಳೆ ಹಾಗೂ ಚರಂಡಿಯ ಕಲುಷಿತ, ದುರ್ವಾಸನೆ ಮಿಶ್ರಿತ ನೀರು ಹರಿಸಿದ್ದರಿಂದ ಪುರಸಭೆಯ ಕುಡಿಯುವ ನೀರು ಸರಬರಾಜು ಅಧಿಕಾರಿಗಳ ವಿರುದ್ಧ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ವಾರದಿಂದ ಪ್ರತಿನಿತ್ಯ ಪಟ್ಟಣದಲ್ಲಿ ಮಳೆಯಾಗುತ್ತಿದೆ. ಪರಗೋಡು ಚಿತ್ರಾವತಿ ಬ್ಯಾರೇಜಿನಿಂದ ಕುಡಿಯುವ ನೀರನ್ನು ಸರಬರಾಜು ಮಾಡಲಾಗಿದೆ. ಪಟ್ಟಣದ ಸಂತೆಮೈದಾನದ ರಸ್ತೆಯಲ್ಲಿ ಕುಡಿಯುವ ನೀರಿನ ಶುದ್ಧಿಕರಣ ಘಟಕ ನಿರ್ಮಿಸಲಾಗಿದೆ.

ಇದೇ ಘಟಕದಲ್ಲಿ ಈ ಹಿಂದೆ ಯಂತ್ರೋಪಕರಣ ಬಳಸಿ ನೀರಿಗೆ ಆಲಂಗಳು ಹಾಕಿ ಶುದ್ಧಿಕರಣ ಮಾಡಿ ಸರಬರಾಜು ಮಾಡುತ್ತಿದ್ದರು. ಆದರೆ ಶುದ್ಧಿಕರಣ ಘಟಕದಲ್ಲಿ ಸಮರ್ಪಕವಾಗಿ ಪಂಪ್ ಮೋಟಾರ್, ಯಂತ್ರೋಪಕರಣಗಳು ಕೆಲಸ ಮಾಡದೇ ಇರುವುದರಿಂದ, ಮಳೆಯ ನೀರನ್ನು ನೇರವಾಗಿ ಸರಬರಾಜು ಮಾಡಲಾಗಿದೆ ಎಂದು ಆರೋಪಿಸಿದರು.

ADVERTISEMENT

ಪುರಸಭೆಯಲ್ಲಿ ಇದೀಗ ಖಾಯಂ ಮುಖ್ಯಾಧಿಕಾರಿ ಇಲ್ಲ. ಗುಡಿಬಂಡೆಯ ಅಧಿಕಾರಿಯೊಬ್ಬರು ಪ್ರಭಾರಿ ಮುಖ್ಯಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಳೆದ 15 ವರ್ಷಗಳಿಂದ ಕಚೇರಿಯಲ್ಲಿ ಕಾಯಂ ಎಂಜಿನಿಯರ್‌ಗಳೇ ಇಲ್ಲ. ಇದೀಗ ಚಿಕ್ಕಬಳ್ಳಾಪುರದ ನಗರಸಭೆಯ ಎಂಜಿನಿಯರ್ ಅವರನ್ನು ಇಲ್ಲಿನ ಪುರಸಭೆಗೆ 3 ದಿನ ಪ್ರಭಾರಿಯಾಗಿ ನಿಯೋಜಿಸಲಾಗಿದೆ. ಕುಡಿಯುವ ನೀರಿನ ಸರಬರಾಜು ನಿರ್ವಹಣೆಯನ್ನು ಇಲ್ಲಿನ ಕಚೇರಿಯಲ್ಲಿ ಹೊರಗುತ್ತಿಗೆ ನೌಕರರೊಬ್ಬರೇ ಮಾಡುತ್ತಿದ್ದಾರೆ. ಮಳೆಯ ನೀರಿಗೆ ಚರಂಡಿ ಮಿಶ್ರಿತ ನೀರು ಮನೆಗಳ ಸಂಗ್ರಹಣಾ ನೀರಿನ ಗುಂಡಿ(ಸಂಪ್) ಗಳಿಗೆ ಸರಬರಾಜು ಆಗಿದೆ. ಗುಂಡಿಗಳಲ್ಲಿ ನೀರು ಕಲುಷಿತದಿಂದ ಕೂಡಿದೆ. ನೀರು ದುರ್ವಾಸನೆ ಬರುತ್ತಿರುವುದರಿಂದ ಮೂಗು ಮುಚ್ಚಿಕೊಂಡು ಮನೆಗಳಲ್ಲಿ ವಾಸ ಮಾಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.