ADVERTISEMENT

ಗುಡಿಬಂಡೆ: ದಿನೇ ದಿನೆ ಬತ್ತುತ್ತಿರುವ ಕೊಳವೆಬಾವಿ, ನೀರಿನ ಬವಣೆ

ಅಂತರ್ಜಲ ಕುಸಿತ: ನಡು ಬೇಸಿಗೆಯಲ್ಲೇ ಜೀವಜಲಕ್ಕಾಗಿ ಎಲ್ಲೆಡೆ ಹಾಹಾಕಾರ

ಜೆ.ವೆಂಕಟರಾಯಪ್ಪ
Published 28 ಏಪ್ರಿಲ್ 2020, 4:07 IST
Last Updated 28 ಏಪ್ರಿಲ್ 2020, 4:07 IST
ಗುಡಿಬಂಡೆ ತಾಲ್ಲೂಕಿನ ಮಿಂಚನಹಳ್ಳಿ ಗ್ರಾಮದಲ್ಲಿ ಟ್ಯಾಂಕರ್‌ ನೀರಿಗಾಗಿ ಅಂತರ ಕಾಯ್ದುಕೊಳ್ಳದೆ ಸರದಿಯಲ್ಲಿ ನಿಂತ ಗ್ರಾಮಸ್ಥರು
ಗುಡಿಬಂಡೆ ತಾಲ್ಲೂಕಿನ ಮಿಂಚನಹಳ್ಳಿ ಗ್ರಾಮದಲ್ಲಿ ಟ್ಯಾಂಕರ್‌ ನೀರಿಗಾಗಿ ಅಂತರ ಕಾಯ್ದುಕೊಳ್ಳದೆ ಸರದಿಯಲ್ಲಿ ನಿಂತ ಗ್ರಾಮಸ್ಥರು   

ಗುಡಿಬಂಡೆ: ತಾಲ್ಲೂಕಿನ 12 ಗ್ರಾಮಗಳಲ್ಲಿ ನಡು ಬೇಸಿಗೆಯಲ್ಲಿಯೇ ಕುಡಿಯುವ ನೀರಿಗೆ ಹಾಹಾಕಾರ ತಲೆದೋರಿದೆ. ತಾಲ್ಲೂಕಿನ 125 ಹಳ್ಳಿಗಳ ಪೈಕಿ ಸಾಕಷ್ಟು ಕಡೆಗಳಲ್ಲಿ ಜನ–ಜಾನುವಾರು ನೀರಿಗಾಗಿ ಪರದಾಡುವ ಸ್ಥಿತಿ ತಲೆದೋರಿದೆ.

ತಾಲ್ಲೂಕಿನಲ್ಲಿ ಸದ್ಯ 156 ಕೊಳವೆ ಬಾವಿಗಳಿಂದ ನೀರಿನ ಸರಬರಾಜು ಮಾಡಲಾಗುತ್ತಿದೆ. ಇದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಗಾಯದ ಮೇಲೆ ಬರೆಯಂತೆ ಇರುವ ಕೊಳವೆಬಾವಿಗಳಲ್ಲೇ ಅಂತರ್ಜಲ ಕುಸಿತದಿಂದಾಗಿ 26 ಕೊಳವೆಬಾವಿಗಳು ಬತ್ತಿ ಹೋಗಿವೆ. 20 ಬಾವಿಗಳಲ್ಲಿನ ನೀರಿನ ಸಂಗ್ರಹ ದಿನೇ ದಿನೆಕುಸಿತಗೊಳ್ಳುತ್ತಿರುವುದು ಅಧಿಕಾರಿಗಳಿಗೆ ಆತಂಕ ಮೂಡಿಸಿದೆ.

ತಾಲ್ಲೂಕಿನ ಕೊಂಡಾವಲಹಳ್ಳಿ, ಜೆ.ಪಿ.ನಗರ, ಜಂಗಾಲಹಳ್ಳಿ, ಮೇಡಿಮಾಕಲಹಳ್ಳಿ, ಮಿಂಚನಹಳ್ಳಿ, ಬೋಗೇನಹಳ್ಳಿ, ಪುಲವಮಾಕಲಹಳ್ಳಿ, ರಾಮಗಾನಹಳ್ಳಿ, ಬಾಲೇನಹಳ್ಳಿ, ಕೊಂಡರೆಡ್ಡಿಹಳ್ಳಿ, ಚಿಂತಕಾಯಲಹಳ್ಳಿ, ಅಂಬಾಪುರ ನೀರಿಗೆ ತೀವ್ರ ಸಮಸ್ಯೆಯಾಗಿದೆ.

ADVERTISEMENT

ಈ ಪೈಕಿ ಮೂರು ಹಳ್ಳಿಗಳಿಗೆ ಟ್ಯಾಂಕರ್ ನೀರು ಮತ್ತು ಒಂಬತ್ತು ಗ್ರಾಮಗಳಿಗೆ ಬಾಡಿಗೆ ಪಡೆದ ಖಾಸಗಿ ಕೊಳವೆ ಬಾವಿಗಳ ಸಹಾಯದಿಂದ ನೀರು ಮತ್ತು ನೈರ್ಮಲ್ಯ ಇಲಾಖೆ ನೀರು ಸರಬರಾಜು ಮಾಡುತ್ತ, ಸಮಸ್ಯೆ ತಹಬದಿಗೆ ತರುವ ಪ್ರಯತ್ನ ಮಾಡುತ್ತಿದೆ.

ಏಪ್ರೀಲ್ ತಿಂಗಳ ಪ್ರಾರಂಭದಿಂದಲೇ 33 – 35 ಡಿಗ್ರಿ ಸೆಲ್ಸಿಯಸ್ ಉಷ್ಟಾಂಶದಿಂದ ಬೇಸಿಗೆ ಬಿಸಿಲ ಧಗೆ ಹೆಚ್ಚಾಗಿದ್ದು, ಇದೇ ಉಷ್ಟಾಂಶ ಮುಂದುವರೆದರೆ ಇನ್ನೂ 20 ಕೊಳವೆ ಬಾವಿಗಳು ಬತ್ತುವ ಸಾಧ್ಯತೆ ಇದೆ. ಒಂದೊಮ್ಮೆ, ಮುಂಗಾರು ಮಳೆ ಕೂಡ ಜೂಜಾಟವಾಡಿದರೆ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿಗೂ ತಾತ್ವಾರ ಬರಲಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸುತ್ತಾರೆ.

ಪಟ್ಟಣದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮನೆಗಳು, 10 ಸಾವಿರ ಜನಸಂಖ್ಯೆ ಇದೆ. ನಗರದಲ್ಲೂ ಕೊಳವೆ ಬಾವಿ ನೀರಿನ ಸಮಸ್ಯೆ ತಲೆದೋರಿದ್ದು, ಅಮಾನಿ ಬೈರಸಾಗರ ಕೆರೆಯ ನೀರನ್ನು ಶುದ್ಧೀಕರಿಸಿ ಪಟ್ಟಣಕ್ಕೆ ಸರಬರಾಜು ಮಾಡುತ್ತಿದೆ. ಇದರಿಂದಾಗಿ ಜನರಿಗೆ ಅಷ್ಟಾಗಿ ನೀರಿಗೆ ಸಮಸ್ಯೆಯ ಬಿಸಿ ತಟ್ಟಿಲ್ಲ.

ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗಾಗಿ ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ 80 ಕಡೆಗಳಲ್ಲಿ ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲಾಗಿದೆ. ಅವುಗಳಲ್ಲಿ ಕೆಲವು ತಾಂತ್ರಿಕ ದೋಷದಿಂದ ಧೂಳು ತಿನ್ನುತ್ತಿವೆ. ಲಾಕ್‌ಡೌನ್‌ ಕಾರಣಕ್ಕೆ ರಿಪೇರಿ ಕಾರ್ಯ ಕೂಡ ವಿಳಂಬವಾಗಿ ಜನರು ಶುದ್ಧ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.