ಶಿಡ್ಲಘಟ್ಟ: ತಾಲ್ಲೂಕಿನ ಬಚ್ಚನಹಳ್ಳಿಯಲ್ಲಿ ಅಪರೂಪದ 16ನೇ ಶತಮಾನದ ಹಂದಿಬೇಟೆ ವೀರಗಲ್ಲು ಶಾಸನ ಪತ್ತೆಯಾಗಿದೆ.
ಪುರಾತತ್ವ ಇಲಾಖೆಯಿಂದ ಶಿಡ್ಲಘಟ್ಟ ತಾಲ್ಲೂಕಿನ ಗ್ರಾಮವಾರು ಸರ್ವೆಗಾಗಿ ಆಗಮಿಸಿದ್ದ ಶಾಸನತಜ್ಞ ಕೆ.ಧನಪಾಲ್ ಮತ್ತು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಅವರು ಬಚ್ಚನಹಳ್ಳಿಯಲ್ಲಿ ಮೂರು ದೊಡ್ಡ ಗಾತ್ರದ ವೀರಗಲ್ಲು ಶಾಸನಗಳನ್ನು ಹುಡುಕಿದ್ದು, ಅವುಗಳಲ್ಲಿ ಒಂದರಲ್ಲಿ ಹಂದಿಬೇಟೆಯ ಚಿತ್ರಣವಿದೆ.
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಇದುವರೆಗೂ ದೊರೆತಿರುವ ಮೊದಲ ಹಂದಿಬೇಟೆ ವೀರಗಲ್ಲು ಇದಾಗಿದೆ. ಇದು ಪಾರಂಪರಿಕ ಬೇಟೆ ಪದ್ಧತಿಯನ್ನು ನೆನಪಿಸುವಂತಹ ವಿಶೇಷವಾದ ಸ್ಮಾರಕ ಶಿಲ್ಪವಾಗಿದೆ.
ಹಂದಿಬೇಟೆಯ ಈ ವೀರಗಲ್ಲು ಶಾಸನವು ಎಂಟು ಅಡಿ ಉದ್ದ ನಾಲ್ಕುವರೆ ಅಡಿ ಅಗಲವಿದೆ. ಈ ಕಲ್ಲಿನ ಮೇಲ್ಭಾಗ ಮತ್ತು ಕೆಳಭಾಗದಲ್ಲಿ ಶಾಸನವಿದ್ದು ಇದರಲ್ಲಿ ಬೇಟೆಯಲ್ಲಿ ಹೋಗಿ ಸತ್ತ ವೀರರ ಹೆಸರುಗಳಿವೆ. ತೊಪ್ಪಯ, ತೆಂಪಯ, ಹೊನ್ನಯ್ಯ, ಪೊದ್ಲಪ್ಪ ಹಾಗೂ ನಾಗಯ ಎಂಬ ಐವರು ಮರಣ ಹೊಂದಿದ್ದಾರೆ ಎಂದು ಶಾಸನದ ಪಠ್ಯದಿಂದ ತಿಳಿದುಬರುತ್ತದೆ.
ಶಿಲ್ಪದಲ್ಲಿ ನಾಗಯ್ಯ ವೀರನು ಹಂದಿಯ ಹಣೆಗೆ ಬಾಣ ಬಿಟ್ಟಿದ್ದು ಅವನ ಪ್ರೀತಿಯ ನಾಯಿಗಳಲ್ಲಿ ಒಂದು ಹಂದಿಯ ಬೆನ್ನ ಮೇಲೆ ಎರಗಿ ಕತ್ತಿನ ಭಾಗಕ್ಕೆ ಹಿಡಿದರೆ, ಮತ್ತೊಂದು ನಾಯಿ, ಹಂದಿಯ ವೃಷಣಕ್ಕೆ ಬಾಯಿ ಹಾಕಿ ಹಿಡಿದಿದೆ. ಹಾಗೆಯೇ ವೀರಗಲ್ಲಿನಲ್ಲಿ ನಾಲ್ವರು ಮಹಿಳೆಯರ ಶಿಲ್ಪವಿದ್ದು ಬಹುಶಃ ಈ ನಾಲ್ವರು ತನ್ನ ಪತಿಯ ಜೊತೆಗೆ ಸಹಗಮನ ಮಾಡಿರಬಹುದಾದ ಸಾಧ್ಯತೆಯಿದೆ. ಇದು 16ನೇ ಶತಮಾನಕ್ಕೆ ಸೇರಿದ್ದು ಎಂದು ಶಾಸನತಜ್ಞ ಕೆ.ಧನಪಾಲ್ ಅಭಿಪ್ರಾಯಪಟ್ಟರು.
ಇದೇ ಜಾಗದಲ್ಲಿ ಮತ್ತೆರಡು ದೊಡ್ಡದಾದ ವೀರಗಲ್ಲು ಶಾಸನಗಳಿದ್ದು ಯುದ್ಧಕ್ಕೆ ಹೊರಡುವ ಮುಂಚಿನ ದೃಶ್ಯವನ್ನು ಅವು ಸೂಚಿಸುವಂತಿದೆ. ಒಂದರಲ್ಲಿ ಪಾರ್ತಿವ ಸಂವತ್ಸರದ ಕಾಲದ ವಿಜಯನಗರ ಅರಸ ತಿರುಮಲರಾಜನ ಉಲ್ಲೇಖವಿದೆ ಹಾಗೂ ಶಿಲ್ಪಶೈಲಿಯ ದೃಷ್ಟಿಯಿಂದ ಬಹು ವಿಶೇಷವಾದ ಸ್ಮಾರಕವಾಗಿದೆ.
ಮತ್ತೊಂದು ವೀರಗಲ್ಲಿನಲ್ಲಿ ವೀರ, ಆತನ ಸತಿಯ ಸ್ಮಾರಕ, ಶಿವಲಿಂಗದ ಮುಂದೆ ನಂದಿಯ ಕೆತ್ತನೆ ಇರುವ ಶಿಲ್ಪವಿದೆ. ಶಾಸನ ತಿಳಿಸುವಂತೆ ಇದೇ ಊರಿನ ಪಕ್ಕದ ಗ್ರಾಮವಾದ ತಲಕಾಯಬೆಟ್ಟದ ಉಲ್ಲೇಖವಿದೆ. ಹಾಗಾಗಿ ಈ ಸ್ಮಾರಕಶಿಲ್ಪಗಳು ಶಿಡ್ಲಘಟ್ಟ ಇತಿಹಾಸಕ್ಕೆ ಹೊಸ ತಿರುವನ್ನು ನೀಡುವ ಸೂಚನೆ ನೀಡುತ್ತಿದ್ದು ಇನ್ನು ಹೆಚ್ಚಿನ ಅಧ್ಯಯನ ಮಾಡಲಾಗುತ್ತಿದೆ ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಬಿ.ಎಸ್.ನಾರಾಯಣಸ್ವಾಮಿ, ವೆಂಕಟರಮಣಪ್ಪ, ಬೀರಪ್ಪ, ಎಸ್.ನಾರಾಯಣಸ್ವಾಮಿ, ಶ್ರೀನಾಥ್, ನರಸಮ್ಮ, ನಂಜುಂಡಪ್ಪ, ಮುನಿಯಪ್ಪ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.