ADVERTISEMENT

ಬಿಜೆಪಿ ನೆಲೆ ವಿಸ್ತರಣೆಗೆ ನೆರವಾಗುವುದೇ ವಿದುರಾಶ್ವತ್ಥ?

ಸ್ವಾತಂತ್ರ್ಯ ಹೋರಾಟದ ನೆಲೆಯ ಮೇಲೆ ಬಿಜೆಪಿ ದೃಷ್ಟಿ

ಡಿ.ಎಂ.ಕುರ್ಕೆ ಪ್ರಶಾಂತ
Published 10 ಜೂನ್ 2022, 4:20 IST
Last Updated 10 ಜೂನ್ 2022, 4:20 IST
ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಗೌರಿಬಿದನೂರಿನಿಂದ ವಿದುರಾಶ್ವತ್ಥಕ್ಕೆ ನಡೆಸಿದ ಬೈಕ್ ರ‍್ಯಾಲಿ (ಸಂಗ್ರಹ ಚಿತ್ರ)
ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಗೌರಿಬಿದನೂರಿನಿಂದ ವಿದುರಾಶ್ವತ್ಥಕ್ಕೆ ನಡೆಸಿದ ಬೈಕ್ ರ‍್ಯಾಲಿ (ಸಂಗ್ರಹ ಚಿತ್ರ)   

ಚಿಕ್ಕಬಳ್ಳಾಪುರ: ಗೌರಿಬಿದನೂರು ತಾಲ್ಲೂಕಿನವಿದುರಾಶ್ವತ್ಥ ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದೇ ಪ್ರಸಿದ್ಧಿ. ಇಂತಿಪ್ಪ ಐತಿಹಾಸಿಕ ನೆಲಚಿಕ್ಕಬಳ್ಳಾಪುರ ಹಾಗೂ ನೆರೆಯ ಜಿಲ್ಲೆಗಳಲ್ಲಿ ಬಿಜೆಪಿಯ ಬಲ ವಿಸ್ತರಣೆಗೆ ನೆರವಾಗುವುದೇ... ಹೀಗೊಂದು ಚರ್ಚೆ ಜಿಲ್ಲೆಯ ರಾಜಕೀಯ ವಲಯದಲ್ಲಿ ಗರಿಗೆದರಿದೆ. ಅದರಲ್ಲಿಯೂ ಬಿಜೆಪಿ ಹಾಗೂ ಅದರ ಅಂಗ ಸಂಸ್ಥೆಗಳಲ್ಲಿ ಈ ಬಗ್ಗೆ ಹೆಚ್ಚಿನ ಚರ್ಚೆಗಳು ನಡೆದಿವೆ.

ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ ಜಿಲ್ಲೆಯಲ್ಲಿ ಬಿಜೆಪಿಗೆ ದೃಢವಾದ ನೆಲೆ ಇಲ್ಲ. ಈ ಮೂರು ಜಿಲ್ಲೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ. ಈ ಹಿಂದಿನ ವಿಧಾನಸಭಾ ಚುನಾವಣೆಗಳಲ್ಲಿಯೂ ಬಿಜೆಪಿ ಈ ಮೂರು ಜಿಲ್ಲೆಗಳಲ್ಲಿ ಉತ್ತಮ ಸಾಧನೆ ತೋರಿಲ್ಲ.

2023ರ ವಿಧಾನಸಭಾ ಚುನಾವಣೆಯಲ್ಲಿ ಈ ಮೂರು ಜಿಲ್ಲೆಗಳಲ್ಲಿ ಕಮಲ ಅರಳಿಸಬೇಕುಮತ್ತು ಗ್ರಾಮೀಣ ಮಟ್ಟದಲ್ಲಿ ಪಕ್ಷದ ಬೇರುಗಳನ್ನು ಗಟ್ಟಿಗೊಳಿಸಬೇಕು ಎನ್ನುವ ದೂರದೃಷ್ಟಿ ಬಿಜೆಪಿಗೆ ಇದ್ದಂತಿವೆ.

ADVERTISEMENT

ಮಲೆನಾಡು ಭಾಗದಲ್ಲಿ ಬಿಜೆಪಿ ಗಟ್ಟಿಗೊಳ್ಳಲು ದತ್ತಪೀಠದ ವಿಚಾರವು ಪ್ರಮುಖವಾಗಿ ಒದಗಿಬಂದಿತ್ತು. ಇದೇ ಮಾದರಿಯಲ್ಲಿ ಬಿಜೆಪಿ ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನೆಲೆ ವಿಸ್ತರಣೆಗೆ ವಿದುರಾಶ್ವತ್ಥದ ಮೇಲೆ ದೃಷ್ಟಿ ನೆಟ್ಟಿದೆ ಎಂದು ರಾಜಕೀಯ ಮುಖಂಡರು ವಿಶ್ಲೇಷಿಸುತ್ತಿದ್ದಾರೆ.

ಇಲ್ಲಿಯವರೆಗೂವಿದುರಾಶ್ವತ್ಥದ ವೀರಸೌಧದ ಚಿತ್ರಪಟ ಗ್ಯಾಲರಿ ಯಾವುದೇ ವಿವಾದಕ್ಕೆ ಒಳಗಾಗಿರಲಿಲ್ಲ. ಆದರೆ, ಈಗ ಇಲ್ಲಿನ ಚಿತ್ರಗಳು ಬದಲಾಗಬೇಕು ಎಂದು ಆರ್‌ಎಸ್‌ಎಸ್, ಬಿಜೆಪಿ, ಬಜರಂಗದಳದ ಕಾರ್ಯಕರ್ತರು ಆಗ್ರಹಿಸುತ್ತಿದ್ದಾರೆ. ಗ್ಯಾಲರಿಯಲ್ಲಿರುವ ವೀಕ್ಷಕರ ಸಹಿ ಪುಸ್ತಕದಲ್ಲಿಯೂ ಚಿತ್ರಗಳು ಬದಲಾವಣೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಕಳೆದ ಒಂದು ತಿಂಗಳಲ್ಲಿ ಆರ್‌ಎಸ್‌ಎಸ್, ಬಜರಂಗದಳ, ವಿಶ್ವಹಿಂದೂ ಪರಿಷತ್ ಮತ್ತು ಬಿಜೆಪಿ ಮುಖಂಡರು ಚಿತ್ರಪಟ ಗ್ಯಾಲರಿಗೆ ಪದೇ ಪದೇ ಭೇಟಿ ನೀಡುತ್ತಿದ್ದಾರೆ.ಬಿಜೆಪಿ ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಸಂದೀಪ್ ಹಾಗೂ ಕಾರ್ಯಕರ್ತರು ಗೌರಿಬಿದನೂರಿನಿಂದ ವಿದುರಾಶ್ವತ್ಥಕ್ಕೆ ಇತ್ತೀಚೆಗೆ ಬೈಕ್ ರ‍್ಯಾಲಿ ಸಹ ನಡೆಸಿದ್ದರು. ಈ ರ‍್ಯಾಲಿಯಲ್ಲಿ ಹೊರ ಜಿಲ್ಲೆಗಳ ಕಾರ್ಯಕರ್ತರು ಸಹ ಭಾಗಿಯಾಗಿದ್ದರು.

ಸಾವರ್ಕರ್ ಜನ್ಮದಿನ ಹಾಗೂ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಿಜೆಪಿಯು ಬೈಕ್ ರ‍್ಯಾಲಿ ಹಮ್ಮಿಕೊಂಡಿತ್ತು. ಇದರಲ್ಲಿ ರಾಜಕೀಯವಿಲ್ಲ ಎಂದು ಬಿಜೆಪಿ ಯುವ ಘಟಕದ ಮುಖಂಡರು
ನುಡಿಯುತ್ತಾರೆ.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರವನ್ನು ಹೊರತುಪಡಿಸಿ ಜಿಲ್ಲೆಯಲ್ಲಿ ಬಿಜೆಪಿಗೆ ಗ್ರಾಮೀಣ ಭಾಗಗಳಲ್ಲಿ ಉತ್ತಮ ನೆಲೆ ಇರುವುದು ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ. ಈ ಕ್ಷೇತ್ರವು ಮಧುಗಿರಿ, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೂ ಹೊಂದಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.