ಶಿಡ್ಲಘಟ್ಟ: ಮಳೆ ಬೀಳುತ್ತಿದ್ದಂತೆಯೇ ಹೊರಹೊಮ್ಮುವ ಮಣ್ಣಿನ ಸುಗಂಧ ಎಂಥವರನ್ನೂ ಉಲ್ಲಸಿತಗೊಳಿಸುತ್ತದೆ. ಈ ಸಂದರ್ಭದಲ್ಲಿ ನಿಸರ್ಗದಲ್ಲೂ ಹಲವು ಬದಲಾವಣೆ ಕಂಡುಬರುತ್ತದೆ. ಗೆದ್ದಲು ಗೂಡಿನಿಂದ ಈಸುಳ್ಳಿಗಳು ಹೊರಬರುತ್ತಿವೆ.
ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಮಳೆಬಿದ್ದ ಮರುದಿನ ಗೆದ್ದಲು ಗೂಡಿನಿಂದ ಹೊರಬಂದ ಈಸುಳ್ಳಿಗಳ ಭೇಟೆಗೆ ಕಾಗೆ, ಗೊರವಂಕ ಮೊದಲಾದ ಹಕ್ಕಿಗಳು, ನಾಯಿ, ಅಳಿಲುಗಳು ಸಹ ಕಾದಿದ್ದು ತಿನ್ನುತ್ತಿದ್ದವು.
ಸಾಮಾನ್ಯವಾಗಿ ಬೇಸಿಗೆ ಮುಗಿದು, ಮೊದಲ ಮಳೆ ಬೀಳುತ್ತಿದ್ದಂತೆ ರೆಕ್ಕೆ ಹೊಂದಿದ ಪುಟ್ಟ ಕೀಟಗಳು ಸಾವಿರಾರು ಸಂಖ್ಯೆಯಲ್ಲಿ ಬೆಳಕಿನ ಬಳಿ ಬರುತ್ತವೆ. ಮಳೆಹುಳು ಎಂದು ಕರೆಯಲ್ಪಡುವ ಇವುಗಳು ರೆಕ್ಕೆ ಮೂಡಿದ ಗೆದ್ದಲುಗಳು. ಹೊಸ ಸಂಸಾರ ಹೂಡಲು ತಯಾರಾಗುವ ವಯಸ್ಸಿಗೆ ಬಂದ ಗೆದ್ದಲುಗಳಿಗೆ ರೆಕ್ಕೆ ಮೂಡುತ್ತದೆ. ತಂಪಾದ ವಾತಾವರಣವಿದ್ದಾಗ ಅವು ಗೂಡಿನಿಂದ ಹೊರಗೆ ಹಾರುತ್ತವೆ. ಇದು ಅವುಗಳ ಜೀವನದ ಮೊದಲ ಮತ್ತು ಕೊನೆಯ ಹಾರಾಟ. ಸೂಕ್ತ ಸಂಗತಿಯನ್ನು ಹುಡುಕಲು ನಡೆಸುವ ಹಾರಾಟವಿದು. ಸೂಕ್ತ ಸಂಗಾತಿ ಸಿಕ್ಕೊಡನೆ ಭೂಮಿಗಿಳಿದು ತಮ್ಮ ರೆಕ್ಕೆ ಕಳಚಿಕೊಳ್ಳುವ ಇವು ಸೂಕ್ತ ಸ್ಥಳ ಹುಡುಕಿ ಚಿಕ್ಕಗೂಡು ನಿರ್ಮಿಸಿ ಕೂಡುತ್ತವೆ. ನಂತರ ಹೆಣ್ಣು ಮೊಟ್ಟೆ ಇಡಲು ಪ್ರಾರಂಭಿಸುತ್ತದೆ.
ತನ್ನ ವಿಶಿಷ್ಟ ಗುಣಗಳಿಂದ ಪರಿಸರದಲ್ಲಿ ಮುಖ್ಯಪಾತ್ರ ವಹಿಸುವಂತಹ ಜೀವಿ ಗೆದ್ದಲು ಹುಳುವು ಮಾನವರಿಗಿಂತಲೂ ಎಷ್ಟೋ ಮೊದಲಿನಿಂದಲೇ ಭೂಮಿಯಲ್ಲಿ ಜೀವಿಸುತ್ತಿವೆ. ಮರಮಟ್ಟುಗಳ ಮೇಲೆ, ಒಣಗಿ ಬಿದ್ದ ದಿಮ್ಮಿಗಳ ಕೆಳಗೆ, ಭೂಮಿಯೊಳಗೆ ಇವು ತಮ್ಮ ಗೂಡು ಕಟ್ಟಿಕೊಳ್ಳುತ್ತವೆ. ಕೆಲವು ಜಾತಿಯ ಗೆದ್ದಲುಗಳು ಇಪ್ಪತ್ತು ಅಡಿಗಳಿಗಿಂತಲೂ ಹೆಚ್ಚು ಎತ್ತರವಾಗಿ ತಮ್ಮ ಗೂಡಿಗೆ ಚಿಮಣಿಯಂತೆ ಹುತ್ತವನ್ನು ನಿರ್ಮಿಸುತ್ತವೆ.
ಮರ, ಒಣಗಿದ ಮರ, ಕೊಳೆಯುತ್ತಿರುವ ಮರ, ಕೊಳೆಯುತ್ತಿರುವ ಶಾಖಾಹಾರಿ ಪ್ರಾಣಿಗಳ ಸಗಣಿ ಮುಂತಾದವು ಇವುಗಳ ಆಹಾರ. ಮರಮಟ್ಟುಗಳಲ್ಲಿರುವ ಸೆಲ್ಯುಲೋಸ್ ಇದರ ಮುಖ್ಯ ಅಹಾರ.
ರೆಕ್ಕೆ ಬಂದ ಗೆದ್ದಲು ಹುಳುಗಳನ್ನು ಗ್ರಾಮೀಣರು ಈಸುಳ್ಳಿಗಳು ಎನ್ನುತ್ತಾರೆ. ಇವೆಂದರೆ ಕೋತಿ, ಕಾಗೆ, ಕೌಜುಗ, ಗೊರವಂಕ ಮುಂತಾದ ಹಕ್ಕಿಗಳಿಗೂ ಪ್ರಿಯ. ಹುತ್ತದಲ್ಲಿ ಗೆದ್ದಲು ಹುಳುಗಳು ಎಲ್ಲ ಕಾಲದಲ್ಲೂ ಇರುವುವಾದರೂ ಅವಕ್ಕೆ ರೆಕ್ಕೆ ಬಂದು, ಬಲಿತು ಈಸುಳ್ಳಿಗಳಾದಾಗ ಮಾತ್ರ ಬೇಟೆಯಾಡಿ ತಿನ್ನುವ ಅಭ್ಯಾಸವೂ ಗ್ರಾಮೀಣರಲ್ಲಿದೆ.
‘ಈಸುಳ್ಳಿಗಳು ಒಳ್ಳೆಯ ರುಚಿಯ ಖಾದ್ಯ ಎಂಬ ಖ್ಯಾತಿಯಿದೆ. ಇದನ್ನು ಹುರುಳಿಯಂತೆ ಹುರಿದು ತಿನ್ನುತ್ತಾರೆ. ನವಿರಾದ ಖಾರದೊಂದಿಗೆ ಬೆಳ್ಳುಳ್ಳಿ ಅರೆದು ಹಾಕಿ ಹುರಿಯುವರು. ಇದರಲ್ಲಿರುವ ಕೊಬ್ಬು ಕರಗಿ ಮಸಾಲೆಯೊಂದಿಗೆ ಹುಳು ಬೇಯುವುದರಿಂದ ಹುರಿಯಲು ಎಣ್ಣೆಯ ಅಗತ್ಯವಿರದು. ಹಿಂದೆ ಹುತ್ತದಲ್ಲಿನ ರಾಣಿ ಹುಳುವನ್ನು ಪ್ರೋಟೀನು ಅಂಶವಿರುವುದೆಂದು ಮಕ್ಕಳಿಗೆ ನುಂಗಿಸುತ್ತಿದ್ದರು. ಮೊದಲೆಲ್ಲಾ ಈಸುಳ್ಳಿಗಳನ್ನು ಹಿಡಿದು ತಿನ್ನುವುದನ್ನು ನಾವೂ ನೋಡಿದ್ದೆವು. ಆದರೆ ಈಗ ಕಡಿಮೆಯಾಗಿದೆ. ಬೆಳಗ್ಗೆ ಹೊಲದ ಕಡೆ ಹೋದಾಗ ಹೊರಬರುತ್ತಿರುವ ಈಸುಳ್ಳಿಗಳನ್ನು ಹಲವಾರು ಹಕ್ಕಿಗಳು ಹಿಡಿದು ತಿನ್ನುತ್ತಿದ್ದವು’ ಎಂದು ಅಪ್ಪೇಗೌಡನಹಳ್ಳಿಯ ತ್ಯಾಗರಾಜ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.