ADVERTISEMENT

ಕೋಮಾ ಸರ್ಕಾರ ಶೀಘ್ರ ಶವಾಗಾರಕ್ಕೆ: ವೈ.ಎ.ನಾರಾಯಣಸ್ವಾಮಿ ವಾಗ್ದಾಳಿ

ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ಧ ಚಿಕ್ಕಬಳ್ಳಾಪುರದಲ್ಲಿ ವಿಧಾನ ಪರಿಷತ್‌ ಸದಸ್ಯ

​ಪ್ರಜಾವಾಣಿ ವಾರ್ತೆ
Published 21 ಜೂನ್ 2019, 11:11 IST
Last Updated 21 ಜೂನ್ 2019, 11:11 IST
ಚಿಕ್ಕಬಳ್ಳಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ವಿಧಾನ ಪರಿಷತ್‌ ಸದಸ್ಯ ವೈ.ಎ.ನಾರಾಯಣಸ್ವಾಮಿ ಅವರು ವಿದ್ಯಾರ್ಥಿನಿಯರ ಅಹವಾಲು ಆಲಿಸಿದರು
ಚಿಕ್ಕಬಳ್ಳಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ವಿಧಾನ ಪರಿಷತ್‌ ಸದಸ್ಯ ವೈ.ಎ.ನಾರಾಯಣಸ್ವಾಮಿ ಅವರು ವಿದ್ಯಾರ್ಥಿನಿಯರ ಅಹವಾಲು ಆಲಿಸಿದರು   

ಚಿಕ್ಕಬಳ್ಳಾಪುರ: ‘ಕೋಮಾ ಸ್ಥಿತಿಯಲ್ಲಿರುವ ರಾಜ್ಯ ಸಮ್ಮಿಶ್ರ ಸರ್ಕಾರ ಯಾವಾಗ ಶವಾಗಾರಕ್ಕೆ ಸ್ಥಳಾಂತರಗೊಳ್ಳುತ್ತದೋ ಗೊತ್ತಿಲ್ಲ. ಈಗಾಗಲೇ ಸರ್ಕಾರದ ಶವ ಹೊರಲು ನಾಯಕರು ಸಿದ್ಧವಾಗಿ ನಿಂತಿದ್ದಾರೆ’ ಎಂದು ವಿಧಾನ ಪರಿಷತ್‌ ಸದಸ್ಯ ವೈ.ಎ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಹಲಗೆ ಬಾರಿಸಲು, ಸಿದ್ದರಾಮಯ್ಯ ಊರುಗೋಲು ಹಿಡಿಯಲು ಮತ್ತು ಕುಮಾರಸ್ವಾಮಿ, ರೇವಣ್ಣ, ಪರಮೇಶ್ವರ್, ಡಿ.ಕೆ.ಶಿವಕುಮಾರ್ ಅವರು ಸರ್ಕಾರದ ಹೆಣ ಹೊರಲು ಸಿದ್ಧವಾಗಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ರಾಜ್ಯದಲ್ಲಿ ಇವತ್ತು ಸರ್ಕಾರ ಬದುಕಿಲ್ಲ. ಸತ್ತಿದೆ. ಆಡಳಿತ ಯಂತ್ರ ಸಂಪೂರ್ಣ ನೆಲ ಕಚ್ಚಿದೆ. ಕಿತ್ತಾಟದಲ್ಲಿ, ಶಾಸಕರನ್ನು ಖಷಿ ಪಡಿಸುವುದರಲ್ಲಿ ಜನರನ್ನು ಕಡೆಗಣಿಸಿದ್ದಾರೆ. ಇಬ್ಬರು ಪಕ್ಷೇತರ ಶಾಸಕರನ್ನು ಸಚಿವರನ್ನಾಗಿ ಮಾಡಿದರೂ ಈವರೆಗೆ ಅವರಿಗೆ ಯಾವುದೇ ಖಾತೆ ಕೊಟ್ಟಿಲ್ಲ. ಅವರು ಖಾತೆ ಇಲ್ಲದ ಸಚಿವರೇ ಅಥವಾ ಯಾವ ಖಾತೆ ಕೊಡಬೇಕು ಎಂದು ಲಾಭ ನಷ್ಟ ಲೆಕ್ಕಾಚಾರ ಹಾಕುತ್ತಿದ್ದಾರಾ? ನನಗೆ ಅರ್ಥವಾಗುತ್ತಿಲ್ಲ’ ಎಂದರು.

ADVERTISEMENT

‘ಮುಖ್ಯಮಂತ್ರಿ, ಸಮ್ಮಿಶ್ರ ಸರ್ಕಾರದಲ್ಲಿರುವ ನಾಯಕರಿಗೆ ರಾಜ್ಯದ ಹಿತಾಸಕ್ತಿಗಿಂತ ಸರ್ಕಾರ ಉಳಿಸಿಕೊಳ್ಳುವುದೇ ಮುಖ್ಯವಾಗಿದೆ. ಜನ ಏನಾದರೂ ಆಗಲಿ ಇರುವಷ್ಟು ದಿನ ರಾಜ್ಯವನ್ನು ಲೂಟಿ ಮಾಡಬೇಕು ಎನ್ನುವ ಮಟ್ಟಕ್ಕೆ ಬಂದಿದ್ದಾರೆ. ಇದು ಲೂಟಿಕೋರ, ಭ್ರಷ್ಟ ಮತ್ತು ಜನರಿಗೆ ಮೋಸ ಮಾಡುವ ಸರ್ಕಾರ’ ಎಂದು ಆರೋಪ ಮಾಡಿದರು.

‘ನಿಮ್ಮ ಕೈಯಲ್ಲಿ ಆದರೆ ರಾಜ್ಯ ಸರ್ಕಾರ ನಡೆಸಿಕೊಂಡು ಹೋಗಿ. ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ಮನೆ ಹೋಗಿ. ನಿರಂತರವಾಗಿ ಮೋಸ ಮಾಡುವವರಿಗೆ ಜನ ಈಗಾಗಲೇ ದಾರಿ ತೋರಿಸಿದ್ದಾರೆ. ಮುಂದಿನ ದಿನಗಳಲ್ಲಿ ಯಾರಿಗೂ ಉಳಿಗಾಲವಿಲ್ಲ. ದೇವೇಗೌಡರು ಹೇಳಿರುವುದರಲ್ಲಿ ಅರ್ಥವಿದೆ. ಅವರು ಹೇಳಿದಂತೆ ಈ ಸರ್ಕಾರ ಉಳಿಯಲು ಸಾಧ್ಯವಿಲ್ಲ. ಬೇಗ ಪತನವಾಗುತ್ತದೆ’ ಎಂದು ಹೇಳಿದರು.

‘ನಾವು ಬೇರೆ ಪಕ್ಷದ ಶಾಸಕರಿಗೆ ಬಿಜೆಪಿಗೆ ಬನ್ನಿ ಎಂದು ಕರೆದಿಲ್ಲ. ಕರೆಯುವುದೂ ಇಲ್ಲ. ವಿರೋಧ ಪಕ್ಷದಲ್ಲಿ ಕುಳಿತು, ಸರ್ಕಾರ ಮೂಗು ಗಟ್ಟಿಯಾಗಿ ಹಿಡಿದು ಜನರ ಸಮಸ್ಯೆ ಪರಿಹಾರ ಮಾಡುವ ತಾಕತ್ತು, ಶಕ್ತಿ ಇದೆ. ಆ ಕೆಲಸ ಮಾಡುತ್ತೇವೆ. ಕೆಲ ಶಾಸಕರು ನಮ್ಮನ್ನು ಗುರಿಯಾಗಿ ತೋರಿಸಿ, ಬ್ಲಾಕ್‌ಮೇಲ್ ಮಾಡಿ, ಬೆದರಿಸಿ ತಮ್ಮ ಬೇಳೆ ಬೇಯಿಸಿಕೊಂಡಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಈಗಾಗಲೇ ಲೋಕಸಭೆ ಚುನಾವಣೆಯಲ್ಲಿ ಸಮ್ಮಿಶ್ರ ಸರ್ಕಾರದ ಪಾಲುದಾರರಿಗೆ ಜನ ತಕ್ಕ ಪಾಠ ಕಲಿಸಿದ್ದಾರೆ. ಹೀಗಾಗಿ ರೈತರ ಸಾಲ ಮನ್ನಾ ಯೋಜನೆ ಕೈಬಿಡಲಿದ್ದಾರೆ. ಕುಮಾರಸ್ವಾಮಿ ಅವರು ಈ ಹಿಂದೆ ಗ್ರಾಮ ವಾಸ್ತವ್ಯ ಮಾಡಿದ ಸಂದರ್ಭದಲ್ಲಾದ ಅಭಿವೃದ್ಧಿ ಮತ್ತು 105 ಬಿಜೆಪಿ ಸದಸ್ಯರಿಗೆ ಎಷ್ಟು ಅನುದಾನ ಕೊಟ್ಟಿದ್ದಾರೆ ಎಂಬ ಬಗ್ಗೆ ಶ್ವೇತಪತ್ರ ಹೊರಡಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.