ADVERTISEMENT

ಯಡಿಯೂರಪ್ಪಗೆ ನನ್ನನ್ನು ಟೀಕಿಸುವ ನೈತಿಕತೆ ಇಲ್ಲ: ಸಿದ್ದರಾಮಯ್ಯ

ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2019, 11:21 IST
Last Updated 2 ಡಿಸೆಂಬರ್ 2019, 11:21 IST
ಚಿಕ್ಕಬಳ್ಳಾಪುರ ತಾಲ್ಲೂಕಿನ ಮಂಚನಬಲೆಯಲ್ಲಿ ನಡೆದ ರೋಡ್‌ ಶೋದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮತ ಯಾಚನೆ ಮಾಡಿದರು.
ಚಿಕ್ಕಬಳ್ಳಾಪುರ ತಾಲ್ಲೂಕಿನ ಮಂಚನಬಲೆಯಲ್ಲಿ ನಡೆದ ರೋಡ್‌ ಶೋದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮತ ಯಾಚನೆ ಮಾಡಿದರು.   

ಚಿಕ್ಕಬಳ್ಳಾಪುರ: ‘ಹಿಂಬಾಗಿಲ ಮೂಲಕ ಬಂದು ಶಾಸಕರನ್ನು ಖರೀದಿಸಿ ಮುಖ್ಯಮಂತ್ರಿಯಾಗುವ ಯಡಿಯೂರಪ್ಪ ಅವರಿಗೆ, 122 ಸ್ಥಾನಗಳನ್ನು ಗೆದ್ದು ಐದು ವರ್ಷ ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಮುಗಿಸಿದ ನನ್ನನ್ನು ಟೀಕಿಸಲು ನೈತಿಕತೆ ಇಲ್ಲ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಎಂ.ಅಂಜನಪ್ಪ ಅವರ ಪರ ಸೋಮವಾರ ಪ್ರಚಾರಕ್ಕೆ ಬಂದ ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ‘ಯಡಿಯೂರಪ್ಪ ಅವರು 2008ರಲ್ಲಿ 9 ಶಾಸಕರನ್ನು ಕೊಂಡುಕೊಂಡು ಮುಖ್ಯಮಂತ್ರಿ ಆದರು. ಈ ಬಾರಿ 17 ಶಾಸಕರಿಗೆ ಒಬ್ಬೊಬ್ಬರಿಗೆ ₹25, ₹30 ಕೋಟಿ ಕೊಟ್ಟು ವ್ಯಾಪಾರ ಮಾಡಿಕೊಂಡು, ಪಕ್ಷಾಂತರ ಮಾಡಿಸಿ ಮುಖ್ಯಮಂತ್ರಿಯಾದರು. ಯಾವಾಗ ಅವರು ಮುಂಬಾಗಿಲಿನಿಂದ ಬಂದಿದ್ದರು? ಅವರಂತೆ ನಾನು ಹಿಂಬಾಗಿಲ ರಾಜಕಾರಣ ಮಾಡಿಲ್ಲ’ ಎಂದು ತಿಳಿಸಿದರು.

‘ಉಪ ಚುನಾವಣೆ ಬಳಿಕ ಕಾಂಗ್ರೆಸ್‌, ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರುತ್ತದೆ’ ಎಂಬ ಕಾಂಗ್ರೆಸ್ ಮುಖಂಡ ವೀರಪ್ಪ ಮೊಯಿಲಿ ಅವರ ಹೇಳಿಕೆ ಕುರಿತಂತೆ ಸಿದ್ದರಾಮಯ್ಯ, ‘ದೇವೇಗೌಡರೇ ಕಾಂಗ್ರೆಸ್‌ ಜತೆ ಮೈತ್ರಿ ಆಗಲ್ಲ ಎಂದು ಹೇಳಿದ್ದಾರೆ. ಆದ್ದರಿಂದ ನಾವು ಆಗಲ್ಲ ಎಂದು ಹೇಳುತ್ತೇವೆ’ ಎಂದ ಅವರು, ‘ನಂಜನಗೂಡು ಉಪ ಚುನಾವಣೆಯಲ್ಲಿ ಶ್ರೀನಿವಾಸ್‌ ಪ್ರಸಾದ್ ಏನಾದರು? ಸೋತು ಸುಣ್ಣವಾದರು. ರಮೇಶ್ ಜಾರಕಿಹೊಳಿ ಬಳಿ ಏನು ಅಸ್ತ್ರ ಇದೆಯಪ್ಪಾ? ಪಕ್ಷ ಬಿಟ್ಟು ಓಡಿಹೋದವರ ಬಳಿ ಯಾವ ಅಸ್ತ್ರ ಇದೆ?’ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

ತಾಲ್ಲೂಕಿನ ಮಂಚನಬಲೆಯಲ್ಲಿ ನಡೆದ ರೋಡ್‌ ಶೋದಲ್ಲಿ ಮಾತನಾಡಿದ ಸಿದ್ದರಾಮಯ್ಯ, ‘2013ರಲ್ಲಿ ನಾನು, ಪರಮೇಶ್ವರ್ ಅವರು ಕೊನೆಯ ಕ್ಷಣದಲ್ಲಿ ಅಂಜನಪ್ಪ ಅವರಿಗೆ ಟಿಕೆಟ್‌ ತಪ್ಪಿಸಿ ಸುಧಾಕರ್‌ಗೆ ನೀಡಿದೆವು. ಜಿಲ್ಲಾ ಪಂಚಾಯಿತಿಯ ಎಲ್ಲ ಸದಸ್ಯರ ವಿರೋಧದ ನಡುವೆ ಕಷ್ಟಪಟ್ಟು ಅವರ ಅಪ್ಪನನ್ನು ಅಧ್ಯಕ್ಷನನ್ನಾಗಿ ಮಾಡಿದೆ. ಕೇಳಿದ್ದಕ್ಕೆಲ್ಲ ಅನುದಾನ ಕೊಟ್ಟೆ. ಸಮ್ಮಿಶ್ರ ಸರ್ಕಾರದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷನನ್ನಾಗಿ ಮಾಡಿಸಿದೆ. ಆದರೆ, ಆತ ಕೊನೆಗೆ ನನಗೆ ಚೂರಿ ಹಾಕಿದ’ ಎಂದು ಹೇಳಿದರು.

‘ರಾಜಕೀಯದಲ್ಲಿ ಸ್ವಲ್ಪವಾದರೂ ನಿಯತ್ತು, ಉಪಕಾರ ಸ್ಮರಣೆ ಇರಬೇಕು. ಈ ಮನುಷ್ಯನಿಗೆ ಯಾವುದೂ ಇಲ್ಲ. ಯಾವ ಸಮಯದಲ್ಲಾದರೂ ಯಾರಿಗೆ ಬೇಕಾದರೂ ಬೆನ್ನಿಗೆ ಚೂರಿ ಹಾಕುತ್ತಾನೆ. ಸುಪ್ರೀಂ ಕೋರ್ಟ್ ಕೂಡ ಇವರನ್ನು ಅನರ್ಹರು, ಶಾಸಕರಾಗಲು ನಾಲಾಯಕ್ ಎಂದು ತೀರ್ಮಾನ ಮಾಡಿದೆ. ಅವರೀಗ ನಿಮ್ಮ ಮುಂದೆ ಬಂದಿದ್ದಾರೆ. ಅವರನ್ನು ನೀವು ಶಾಶ್ವತವಾಗಿ ಅನರ್ಹರನ್ನಾಗಿ ಮಾಡಿ ಮನೆಗೆ ಕಳುಹಿಸಬೇಕು. ಇಂತಹವರು ರಾಜಕಾರಣದಲ್ಲಿ ಇರಬಾರದು’ ಎಂದು ತಿಳಿಸಿದರು.

ಕಾಂಗ್ರೆಸ್ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಪಲ್ಲಂ ರಾಜು, ಶಾಸಕರಾದ ಕೃಷ್ಣ ಬೈರೇಗೌಡ, ಎನ್.ಎಚ್‌.ಶಿವಶಂಕರರೆಡ್ಡಿ, ವಿ.ಮುನಿಯಪ್ಪ, ಎಸ್‌.ಎನ್.ಸುಬ್ಬಾರೆಡ್ಡಿ, ಅಭ್ಯರ್ಥಿ ಎಂ.ಅಂಜನಪ್ಪ ಅವರು ರೋಡ್‌ ಶೋದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.