ಶಿಡ್ಲಘಟ್ಟ: ಅಪಘಾತ ಹಾಗೂ ತುರ್ತು ಸಂದರ್ಭಗಳಲ್ಲಿ ರಕ್ತ ಸಿಗದೆ ಬಹಳಷ್ಟು ಮಂದಿ ಮೃತಪಡುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿ ತಪ್ಪಿಸುವ ಉದ್ದೇಶದಿಂದ ಯುವಜನತೆ ಶಿಬಿರಗಳಲ್ಲಿ ಉಚಿತ ರಕ್ತದಾನ ಮಾಡುವ ಪ್ರವೃತ್ತಿ ರೂಢಿಸಿಕೊಳ್ಳಬೇಕು ಎಂದು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸುರೇಂದ್ರಗೌಡ ತಿಳಿಸಿದರು.
ತಾಲ್ಲೂಕಿನ ಚೀಮಂಗಲ ಗ್ರಾಮದ ಕುವೆಂಪು ಶತಮಾನೋತ್ಸವ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಭಾನುವಾರ ಬಿಜೆಪಿ ಹಾಗೂ ರಾಷ್ಟ್ರೋತ್ಥಾನ ರಕ್ತನಿಧಿಯ ಸಹಯೋಗದಲ್ಲಿ ಕ್ರಾಂತಿವೀರ ಚಂದ್ರಶೇಖರ್ ಆಜಾದ್ ಜನ್ಮದಿನಾಚರಣೆ ಹಾಗೂ ಕಾರ್ಗಿಲ್ ವಿಜಯೋತ್ಸವದ ಸವಿನೆನಪಿನಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
ಯುವಕರಲ್ಲಿ ರಾಷ್ಟ್ರಪ್ರೇಮ ಬೆಳಗಿಸುವ ಜತೆಗೆ ರಕ್ತ ಅವಶ್ಯ ಇರುವವರಿಗೆ ಸಕಾಲದಲ್ಲಿ ರಕ್ತ ದೊರೆಯುವಂತೆ ಮಾಡುವ ಉದ್ದೇಶದಿಂದ ಹಲವು ವರ್ಷಗಳಿಂದ ಬಿಜೆಪಿ ಹಾಗೂ ರಾಷ್ಟ್ರೋತ್ಥಾನ ರಕ್ತನಿಧಿ ಸಂಸ್ಥೆಯಿಂದ ಉಚಿತ ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡುತ್ತಿದೆ. ತಾಲ್ಲೂಕಿನ ಯುವಜನರಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಹೇಳಿದರು.
ಸುಮಾರು 95 ಯೂನಿಟ್ ರಕ್ತ ಸಂಗ್ರಹವಾಯಿತು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಮಲಿಂಗಪ್ಪ, ಮಾಜಿ ಶಾಸಕ ಎಂ.ರಾಜಣ್ಣ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಎಸ್.ರಾಘವೇಂದ್ರ, ಜಿಲ್ಲಾ ಕಾರ್ಯದರ್ಶಿ ಬಿ.ಸಿ.ನಂದೀಶ್, ಮುಖಂಡರಾದ ದಾಮೋದರ್, ಸುಜಾತಮ್ಮ, ಅರಕೆರೆ ಮುನಿರಾಜು, ಶ್ರೀಧರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.