ADVERTISEMENT

ಅನಾಥರಿಗೆ ಆಶ್ರಯ ತಾಣವಾದ ಸಂತೆ ಕಟ್ಟೆ

ಬಿ.ಕಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2018, 6:56 IST
Last Updated 10 ಏಪ್ರಿಲ್ 2018, 6:56 IST

ಬಾಳೆಹೊನ್ನೂರು: ಪಟ್ಟಣದ ಜಯಪುರ ರಸ್ತೆಯ ಸುದರ್ಶಿನಿ ಚಿತ್ರಮಂದಿರದ ಬಳಿ ತಾಲ್ಲೂಕು ಪಂಚಾಯಿತಿ ಜಾಗದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನಿರ್ಮಿಸಿರುವ ಸಂತೆ ಕಟ್ಟೆ ಅನಾಥರ ಆಶ್ರಯ ತಾಣವಾಗಿದ್ದು, ಸಂಪೂರ್ಣ ಶಿಥಿಲಗೊಂಡಿದೆ.

ನರಸಿಂಹರಾಜಪುರ ತಾಲ್ಲೂಕು ಪಂಚಾಯಿತಿಗೆ ಒಳಪಡುವ ಬಿ.ಕಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2006ರಲ್ಲಿ ₹6ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಹರಾಜು ಕಟ್ಟೆಯಲ್ಲಿ ಬೆರಳಣಿಕೆಯಷ್ಟು ದಿನ ಮಾತ್ರ ಸಂತೆ ನಡೆದಿದ್ದು ಬಿಟ್ಟರೆ ನಂತರ ಆ ಜಾಗ ಸಂಪೂರ್ಣ ಹಾಳುಬಿದ್ದಿದೆ. ಈಗ ಅನಾಥರು, ಭಿಕ್ಷುಕರು ಜೂಜುಕೋರರು, ಗಾಂಜಾ ಗಿರಾಕಿಗಳು ಆಶ್ರಯ ತಾಣವಾಗಿದ್ದು, ಸಂಪೂರ್ಣವಾಗಿ ಕೊಳಕು ತುಂಬಿದೆ.

ಹರಾಜು ಕಟ್ಟೆ ಆರಂಭವಾದಾಗ ಪ್ರತಿ ಭಾನುವಾರ ಮಾರುಕಟ್ಟೆ ರಸ್ತೆಯಲ್ಲಿ ಸಂತೆ ನಡೆಯುತ್ತಿದ್ದು, 150ಕ್ಕೂ ಹೆಚ್ಚು ಅಂಗಡಿಗಳು ತೆರೆಯುತ್ತವೆ. ಹೇರೂರು, ಮಾಗುಂಡಿ, ಮೇಲ್ಪಾಲ್, ಸೀಗೋಡು, ಗಡಿಗೇಶ್ವರ ಗ್ರಾಮಗಳ ಜನರು ಖರೀದಿಗಾಗಿ ಇಲ್ಲಿಗೆ ಬರಲಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಅಂಗಡಿಗಳನ್ನು ತೆರೆದು ಮಾರಾಟಕ್ಕೆ ಬರುವ ವ್ಯಾಪಾರಿಗಳಿಗೆ ಮೂಲ ಸೌಕರ್ಯಗಳಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ADVERTISEMENT

‘ಮಳೆಗಾಲದಲ್ಲಿ ರಸ್ತೆ ಹಾಗೂ ಚರಂಡಿಯ ಮೇಲೆ ತುಂಬಿ ಹರಿಯುವ ನೀರಿನಿಂದಾಗಿ ವ್ಯಾಪಾರಿಗಳಿಗೆ ತೊಂದರೆಯಾಗಿದ್ದು, ಗ್ರಾಹಕರು ಸರಿಯಾಗಿ ವ್ಯವಹಾರ ನಡೆಸಲು ಸಾಧ್ಯವಾಗದೆ ಪಂಚಾಯಿತಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಬಿ.ಕಣಬೂರು ಗಾಮ ಪಂಚಾಯಿತಿ ಸಂತೆ ವ್ಯಾಪಾರಿಗಳಿಂದ ಪ್ರತಿವಾರ ನಿಗದಿತ ಶುಲ್ಕ ವಸೂಲಿ ಮಾಡುತ್ತಿದ್ದರೂ ಮೂಲ ಸೌಲಭ್ಯ ಕಲ್ಪಿಸಿಲ್ಲ’ ಎಂಬುದು ವ್ಯಾಪಾರಿಗಳ ಅಳಲಾಗಿತ್ತು.

ನೂತನ ಸಂತೆ ಕಟ್ಟೆ ನಿರ್ಮಾಣ: ಸಂತೆ ಕಟ್ಟೆಯ ಅವ್ಯವಸ್ಥೆಯನ್ನು ಗಮನಿಸಿ ಕೊಪ್ಪದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ₹79 ಲಕ್ಷ ವೆಚ್ಚದಲ್ಲಿ ನರಸಿಂಹರಾಜಪುರ ರಸ್ತೆಯ ದೋಬಿ ಹಳ್ಳದ ಬಳಿ ನೂತನ ಸಂತೆ ಕಟ್ಟೆ ನಿರ್ಮಾಣ ಮಾಡಲಾಗಿದೆ. ಎಪಿಎಂಸಿ ಮಾಜಿ ಅಧ್ಯಕ್ಷ ಓಣಿತೋಟ ರತ್ನಾಕರ್ ಅವರು ಹಣ ಮಂಜೂರು ಮಾಡಿಸಿದ್ದು, ಕಾಮಗಾರಿ ಪೂರ್ಣಗೊಂಡು ಲೋಕಾರ್ಪಣೆ ಮಾಡಲಾಗಿದೆ.

ಕೇವಲ 48 ವ್ಯಾಪಾರಿಗಳು ಮಾತ್ರ ಇಲ್ಲಿ ವ್ಯವಹಾರ ನಡೆಸಬಹುದಾಗಿದ್ದು, ಉಳಿದ ವ್ಯಾಪಾರಿಗಳಿಗೆ ಸ್ಥಳದ ಅಭಾವ ಉಂಟಾಯಿತು. ಆದ್ದರಿಂದ ಇದೂವರೆಗೂ ಇಲ್ಲಿ ವಹಿವಾಟು ಆರಂಭಗೊಂಡಿಲ್ಲ.ಅಲ್ಲದೇ ಮಾರುಕಟ್ಟೆ ಹಳ್ಳದ ಬದಿಯ ಹೊಂಡದಲ್ಲಿದ್ದು ಅಲ್ಲಿಗೆ ವ್ಯಾಪಾರಿಗಳು ಹಾಗೂ ಗ್ರಾಹಕರು ತೆರಳಲು ಸೌಲಭ್ಯಗಳಿಲ್ಲ.

‘ಚುನಾವಣೆ ನಂತರ ಕ್ರಮ’

‘ಸಂತೆಕಟ್ಟೆಗೆ ತೆರಳುವ ಮಾರ್ಗದಲ್ಲಿ ಮೆಟ್ಟಿಲು ನಿರ್ಮಾಣ ಕಾಮಗಾರಿ ಬಾಕಿ ಉಳಿದಿದ್ದು, ಆ ಜಾಗದಲ್ಲೇ ಹೆಚ್ಚಿನ ಸಂತೆ ಕಟ್ಟೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಎಪಿಎಂಸಿ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದು, ಪಾಳು ಬಿದ್ದ ಮಾರುಕಟ್ಟೆಯ ಜಾಗವನ್ನು ಬೇರೆ ಉದ್ದೇಶಕ್ಕೆ ಬಳಸುವ ಕುರಿತು ಚಿಂತಿಸಲಾಗುತ್ತಿದೆ’ ಎಂದು ಬಿ.ಕಣಬೂರು ಗ್ರಾಮ ಪಂಚಾಯಿತಿ  ಅಭಿವೃದ್ದಿ ಅಧಿಕಾರಿ ಸೋಮಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಎಚ್.ಎಸ್‌.ಸತೀಶ್‌ ಜೈನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.