ADVERTISEMENT

ಅಭಿವೃದ್ಧಿ ಆಧಾರದ ಮೇಲೆ ಮತ ಕೇಳಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 9:55 IST
Last Updated 25 ಫೆಬ್ರುವರಿ 2012, 9:55 IST

ನರಸಿಂಹರಾಜಪುರ: ಪಟ್ಟಣದ ವ್ಯಾಪ್ತಿಯಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕೈಗೊಂಡ ಅಭಿವೃದ್ಧಿ ಆಧಾರದ ಮೇಲೆ ಬರುವ ಲೋಕಸಭಾ ಚುನಾವಣೆಯಲ್ಲಿ ಮತಯಾಚನೆ ಮಾಡಬೇಕೆಂದು ಬಿಜೆಪಿ ಕ್ಷೇತ್ರಾಧ್ಯಕ್ಷ ವಿ.ನಿಲೇಶ್ ತಿಳಿಸಿದರು.

ಇಲ್ಲಿನ ಕೃಷಿಭನವನದ ಆವರಣದಲ್ಲಿ ಶುಕ್ರವಾರ ಲೋಕಸಭಾ ಚುನಾವಣೆಗೆ ಪೂರ್ವಭಾವಿ ತಯಾರಿಗೆ ನಡೆದ ಪಟ್ಟಣದ ಬಿಜೆಪಿ ಘಟಕದ ಪದಾಧಿಕಾರಿಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಸ್ತುತ ನಡೆಯುವ ಲೋಕ ಸಭಾ ಉಪ ಚುನಾವಣೆಯು ಮುಂಬರುವ ನಗರಸಭೆ, ಪಟ್ಟಣ ಪಂಚಾಯಿತಿ, ವಿಧಾನ ಸಭೆ ಚುನಾವಣೆಗಳಿಗೆ ಇದು ದಿಕ್ಸೂಚಿಯಾಗಲಿದ್ದು, ಈ ಎಲ್ಲಾ ಮುಂದಾಲೋಚನೆಗಳನ್ನಿಟ್ಟುಕೊಂಡು ಚುನಾವಣೆ ಎದುರಿಸ ಬೇಕಾಗಿದೆ. ಮಾರ್ಚ್ 18ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಸುನಿಲ್ ಕುಮಾರ್ ಅವರನ್ನು ಅತ್ಯಧಿಕ ಮತಗಳಿಂದ ಜಯಗಳಿಸಲು ಎಲ್ಲರೂ ಶ್ರಮಿಸಬೇಕಾಗಿದೆ ಎಂದರು.

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಪಿ.ಸಂಪತ್‌ಕುಮಾರ್ ಮಾತನಾಡಿ, ಕ್ಷೇತ್ರದ ಹಾಗೂ ಪಟ್ಟಣದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರು ಹೆಚ್ಚಿನ ಅನುದಾನ ತಂದಿದ್ದು ಈ ಅಭಿವೃದ್ಧಿ ಕಾಮಗಾರಿಗಳ ಆಧಾರದ ಮೇಲೆ ಚುನವಾಣೆಯಲ್ಲಿ ಮತಯಾಚನೆ ಮಾಡಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕೆಂದು ಹೇಳಿದರು. 
   
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಜೆಪಿ ನಗರ ಘಟಕದ ಅಧ್ಯಕ್ಷ ಎಚ್.ವೈ. ಮಂಜುನಾಥ್ ಲಾಡ್ ಮಾತನಾಡಿ, ಪಟ್ಟಣದ ವ್ಯಾಪ್ತಿಯಲ್ಲಿ ಪಕ್ಷದ ಕಾರ್ಯಕರ್ತರು ಒಗ್ಗಟ್ಟಿ ನಿಂದ ಕೆಲಸ ಮಾಡಿ ಸರ್ಕಾರದಿಂದ ನೀಡಿರುವ ಸೌಲಭ್ಯಗಳ ಆಧಾರ ಮೇಲೆ ಮತಯಾಚಿಸಬೇಕೆಂದರು.

ಬಿಜೆಪಿ ಯುವ ಮೋರ್ಚ ಅಧ್ಯಕ್ಷ ಬಿ.ಎಸ್.ಆಶೀಶ್‌ಕುಮಾರ್ ಮಾತನಾಡಿದರು.ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ ಸುರೇಶ್,ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಎಂ.ಪಿ.ಸನ್ನಿ, ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಜೆ.ಜಿ.ನಾಗರಾಜ್, ನಗರ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಇದ್ದರು.  
   
ನೀತಿ ಸಂಹಿತೆ ಪಾಲನೆಗೆ  ಆಗ್ರಹ
ಚಿಕ್ಕಮಗಳೂರು:   ಲೋಕಸಭಾ ಉಪ ಚುನಾ ವಣೆಗೆ ಅಭ್ಯರ್ಥಿ ಅಂತಿಮಗೊಳಿಸಲು ಜಿಲ್ಲಾ ಸಮಿತಿಗೆ ರಾಷ್ಟ್ರೀಯ ಮತ್ತು ರಾಜ್ಯ ಘಟಕದ ಅಧ್ಯಕ್ಷರು ಅಧಿಕಾರ ನೀಡಿದ್ದರೂ  ಆಯ್ಕೆ ವಿಷ ಯವನ್ನು ರಾಜ್ಯದ ವರಿಷ್ಠ ಮಂಡಳಿಗೆ ವಿವೇಚನೆಗೆ ಬಿಡಲು ಜಿಲ್ಲಾ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಜಾತ್ಯತೀತ ಜನತಾದಳ ಜಿಲ್ಲಾಧ್ಯಕ್ಷ ಎಚ್.ಎಚ್.ದೇವರಾಜ್ ತಿಳಿಸಿದರು.

 ಅಭ್ಯರ್ಥಿ ಹೆಸರನ್ನು ಗೌಪ್ಯವಾಗಿಡಲು ಜಿಲ್ಲಾ ಸಮಿತಿಗೆ ಪಕ್ಷದ ವರಿಷ್ಠರು ಸೂಚಿಸಿ ದ್ದರಿಂದ  ರಾಜ್ಯ ಮುಖಂಡರ ತೀರ್ಮಾನಕ್ಕೆ ಬದ್ಧವಾಗಿರಲು ಜಿಲ್ಲಾ ಮುಖಂಡರು ನಿರ್ಧರಿಸಿದ್ದಾರೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬೇರೆ ಪಕ್ಷದ ಮುಖಂಡರನ್ನು ಕರೆತರಲು ವರಿಷ್ಠರು ನಿರ್ಧರಿಸಿದ್ದಾರೆಂಬ ವಿಷಯವನ್ನು ಅಲ್ಲ ಗಳೆದ ಅಧ್ಯಕ್ಷರು, ಪಕ್ಷದ ಮುಖಂಡರೇ ಉಪ ಚುನಾವಣೆಗೆ  ಸ್ಪರ್ಧಿಸಲಿದ್ದಾರೆಂದು ತಿಳಿಸಿದರು. ಸ್ಥಳೀಯ ಶಾಸಕರು ಗ್ರಾಮ ವಾಸ್ತವ್ಯದ ನೆಪದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ್ದಾರೆಂದು ಆರೋಪಿಸಿದರು.

ನೀತಿ ಸಂಹಿತೆ ಉಲ್ಲಂಘಿಸಿದವರ ವಿರುದ್ಧ ಚುನಾವಣಾಧಿಕಾರಿಗಳು ಮೊಕದ್ದಮೆ ದಾಖಲು ಮಾಡಲು ಮುಂದಾಬೇಕೆಂದು ಒತ್ತಾಯಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಪಕ್ಷಕ್ಕೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿರುವುದರಿಂದ ಲೋಕಸಭಾ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ. ಈ ಚುನಾವಣೆಯಲ್ಲಿ ಪಕ್ಷಕ್ಕೆ ಹಲವಾರು ವಿಷಯಗಳಿವೆ. ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಯಾವುದೇ ವಿಷಯಗಳಿಲ್ಲವೆಂದರು.

ಪಕ್ಷದ ಜಿಲ್ಲಾ ಮಹಾ ಪ್ರಧಾನಕಾರ್ಯದರ್ಶಿ ಚಂದ್ರಪ್ಪ, ಉಪಾಧ್ಯಕ್ಷ ಮಂಜಪ್ಪ, ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾ ಕಾರ್ಯದರ್ಶಿ ರೆಹಮಾನ್, ಮುಖಂಡ ಮಾನುಮೀರಾಂಡ,  ಹೊಲದಗದ್ದೆ ಗಿರೀಶ್ ಇದ್ದರು.    
ಕಾಂಗ್ರೆಸ್ ಕಾರ್ಯಕರ್ತರ ಸಭೆ ನಾಳೆ

ನರಸಿಂಹರಾಜಪುರ: ಇದೇ 26 ರಂದು ಬಾಳೆಹೊನ್ನೂರಿನ ಬಸ್ ನಿಲ್ದಾಣದ ಸಮೀಪದ ಗಣಪತಿ ಪೆಂಡಾಲ್‌ನಲ್ಲಿ ಬರುವ ಉಡುಪಿ- ಚಿಕ್ಕ ಮಗಳೂರು ಲೋಕಸಭಾ  ಉಪ ಚುನಾವಣೆ ಬಗ್ಗೆ ಚರ್ಚಿಸಲು ಬಾಳೆಹೊನ್ನೂರು ಬ್ಲಾಕ್‌ನ 3 ಹೋಬಳಿಗಳ ಗ್ರಾಮ ಪಂಚಾಯಿತಿ ಹಾಗೂ ಬೂತ್ ಸಮಿತಿ  ಪದಾಧಿಕಾರಿಗಳ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಬಾಳೆಹೊನ್ನೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಪಿ.ಅಂಶುಮಂತ್ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದೆ.

 ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಸಭೆಗೆ ಆಗಮಿಸಿ ಕಾಂಗ್ರೆಸ್ ಅಭ್ಯರ್ಥಿ ಜಯ        ಪ್ರಕಾಶ್ ಹೆಗ್ಡೆ ಅವರ ಗೆಲುವಿಗೆ ಸೂಕ್ತ ಸಲಹೆ ನೀಡಬೇಕೆಂದು ಬಾಳೆಹೊನ್ನೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬುಬಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

`ಅಭಿವೃದ್ಧಿ ಕಾರ್ಯಗಳೇ ಶ್ರೀರಕ್ಷೆ~

ಬಾಳೆಹೊನ್ನೂರು: ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಉಪ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳೇ ಶ್ರೀರಕ್ಷೆಯಾಗಲಿವೆ ಎಂದು ಶಾಸಕ ಡಿ.ಎನ್.ಜೀವರಾಜ್ ತಿಳಿಸಿದರು.
ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ನಡೆದ ಬಾಳೆಹೊನ್ನೂರು ಮತ್ತು ಖಾಂಡ್ಯ ಹೋಬಳಿ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

ಜನಸಾಮಾನ್ಯರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದ ಅವರು, ಚುನಾವಣೆ ವೇಳೆ ಕಾರ್ಯಕರ್ತರು ಒಗ್ಗೂಡಿ ಶ್ರಮಿಸುವ ಮೂಲಕ ಪಕ್ಷವನ್ನು ಬಲಪಡಿಸಬೇಕು ಎಂದರು.
ಇದೇ 26 ರಂದು ಕೊಪ್ಪದ ಪುರಭವನದಲ್ಲಿ ಕ್ಷೇತ್ರ ಸಮಾವೇಶ ನಡೆಯಲಿದ್ದು, ಲೋಕಸಭಾ ಅಭ್ಯರ್ಥಿಯಾಗಿ ಆಯ್ಕೆಗೊಂಡಿರುವ ಸುನಿಲ್ ಕುಮಾರ್ ಮತ್ತು ಮುಖಂಡರು ಭಾಗವಹಿ ಸಲಿದ್ದಾರೆ ಎಂದು ತಿಳಿಸಿದರು.

ಸಭೆಯಲ್ಲಿ ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ನೀಲೇಶ್, ಖಾಂಡ್ಯ ಹೋಬಳಿ ಬಿಜೆಪಿ ಅಧ್ಯಕ್ಷ ಹುಯಿಗೆರೆ ವಾಸು, ಬಾಳೆಹೊನ್ನೂರು ಹೋಬಳಿ ಬಿಜೆಪಿ ಅಧ್ಯಕ್ಷ ಕೆ.ಕೆ.ವೆಂಕಟೇಶ್, ತಾಲ್ಲೂಕು ಬಿಜೆಪಿ ಉಪಾಧ್ಯಕ್ಷ ಭಾಸ್ಕರ್‌ವೆನಿಲ್ಲಾ, ಕ್ಷೇತ್ರ ರೈತ ಮೋರ್ಚಾ ಅಧ್ಯಕ್ಷ ಕೆ.ಟಿ.ವೆಂಕಟೇಶ್ ಇದ್ದರು.

ಪಕ್ಷೇತರ ಅಭ್ಯರ್ಥಿ ನಾಮಪತ್ರ 
ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಗೆ ಮಂಗಳೂರಿನ ಸುಪ್ರಿತಾ ಕುಮಾರ್ ಪೂಜಾರಿ ಅವರು ಪಕ್ಷೇತರ ಅಭ್ಯರ್ಥಿ ಯಾಗಿ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿ ಎಂ.ಟಿ.ರೇಜು   ತಿಳಿಸಿದ್ದಾರೆ.

ಜೆಡಿಯು ಅಭ್ಯರ್ಥಿ ಸ್ಪರ್ಧೆ
ಮಂಗಳೂರು: ಉಡುಪಿ- ಚಿಕ್ಕಮಗಳೂರು ಲೋಕಸಭಾ ಉಪ ಚುನಾವಣೆಯಲ್ಲಿ ಸಂಯುಕ್ತ ಜನತಾ ದಳದ ಅಭ್ಯರ್ಥಿಯಾಗಿ ಸುಪ್ರೀತ್ ಕುಮಾರ್ ಪೂಜಾರಿ ಸ್ಪರ್ಧಿ ಸುವರು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.