ADVERTISEMENT

ಅವತಿ ಪಂಚಾಯಿತಿ: ಸಮಸ್ಯೆ ಸರಮಾಲೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2011, 8:35 IST
Last Updated 22 ಫೆಬ್ರುವರಿ 2011, 8:35 IST

ಚಿಕ್ಕಮಗಳೂರು: ಆವತಿ ಪಂಚಾಯಿತಿಗೆ ಶಾಶ್ವತ ಕಾರ್ಯದರ್ಶಿ, ಅಭಿವೃದ್ಧಿ ಅಧಿಕಾರಿಗಳನ್ನು ನೇಮಿಸಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೇಮಕವಾದಾಗಿನಿಂದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದೇ ಮುಖ್ಯ ಕೆಲಸವಾಗಿದೆ. ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಈ ಮಾತುಗಳು ಕೇಳಿ ಬಂದವು.

ಆವತಿ ಪಂಚಾಯಿತಿಗೆ ಕಾರ್ಯದರ್ಶಿಗಳು ಮತ್ತು ಅಭಿವೃದ್ಧಿ ಅಧಿಕಾರಿಗಳಿಲ್ಲ. ವಾಸ ದೃಢೀಕರಣ ಪತ್ರಕ್ಕೆ ಸುತ್ತಮುತ್ತಲ ಗ್ರಾಮಸ್ಥರು ಕಾದುಕುಳಿತುಕೊಳ್ಳಬೇಕಾಗಿದೆ. ಪ್ರಭಾರಿ ಕಾರ್ಯದರ್ಶಿಗಳನ್ನು ನೇಮಕ ಮಾಡಿದ್ದರೂ ಆಗಮ್ಮೊ, ಈಗೊಮ್ಮೆ ಬರುತ್ತಾರೆ. ಒಂದು ಪ್ರಮಾಣ ಪತ್ರಕ್ಕೆ ಇಡೀ ದಿನ ಕಾಯಬೇಕಾಗಿದೆ ಎಂದು ಪಂಚಾಯಿತಿ ಅಧ್ಯಕ್ಷರು ಹಾಗೂ ಜನಪ್ರತಿನಿಧಿಗಳು ಸಭೆ ಗಮನಕ್ಕೆ ತಂದರು.

ಈಗಾಗಲೇ ಈ ಪಂಚಾಯಿತಿಗೆ ಪ್ರಭಾರಿ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ. ಸಮಸ್ಯೆ ಬಗೆಹರಿಸುವಂತೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ಗಮನ ಸೆಳೆಯಲಾಗಿದೆ  ಎಂದು ತಾ.ಪಂ  ಅಧಿಕಾರಿಗಳು ಉತ್ತರಿಸಿದರು.ಬಸ್ಕಲ್ ಪಂಚಾಯಿತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ ಎಂದು ಆ ಭಾಗದ ಸದಸ್ಯರು ತಿಳಿಸಿದರು. ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸಮಯ ಮೀಸಲಿಡಲಾಗಿದೆ. ಬೇರೆ ಯಾವ ಕೆಲಸ ಮಾಡಲು ಸಾಧ್ಯವಾಗಿಲ್ಲ. ಕೈಪಂಪ್ ಹಾಕಿದರೆ ಚೈನ್ ಹಾಳಾಗುತ್ತಿದ್ದು, ಅದನ್ನು ದುರಸ್ತಿ ಪಡಿಸುವುದರೊಳಗೆ ವಾಷರ್ ಹೋಗುತ್ತೆ ಸಾರ್ ಎಂದು ಅಭಿವೃದ್ಧಿ ಅಧಿಕಾರಿ ಹೇಳಿದರು.

ಹರಿಹರದಹಳ್ಳಿ ಪಂಚಾಯಿತಿಯಲ್ಲಿ ಕಂದಾಯ ಸರಿಯಾಗಿ ವಸೂಲು ಮಾಡಲಾಗುತ್ತಿಲ್ಲ ಎಂದು ಸದಸ್ಯರು ತಿಳಿಸಿದರು. ಬಿಲ್ ಕಲೆಕ್ಟರ್ ಸರಿಯಾಗಿ ಕೆಲಸ ನಿರ್ವಹಿಸಲು ವಿಫಲವಾದರೆ ಅವರ ವಿರುದ್ಧ ನಿರ್ಣಯ ಕೈಗೊಳ್ಳುವ ಅಧಿಕಾರಿ ಪಂಚಾತಿಗೆ ಇದೆ ಎಂದು ಅಧಿಕಾರಿಗಳು ತಿಳಿಸಿದರು.ತಾಲ್ಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾಸಭೆಗೆ ಪಂಚಾಯಿತಿ ಅಧ್ಯಕ್ಷರನ್ನು ಆಹ್ವಾನಿಸಬೇಕು. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರ ಗೌರವಧನ ಹೆಚ್ಚಳಗೊಳಿಸಬೇಕೆಂದು ಮಹೇಶ್ ಎಂಬುವರು ಒತ್ತಾಯಿಸಿದರು. ಒಂದು ಅವಧಿಗೆ ಐದು ಪಂಚಾಯಿತಿ ಅಧ್ಯಕ್ಷರನ್ನು ಸಭೆಗೆ ಆಹ್ವಾನಿಸಲಾಗುವುದು ಎಂದು ತಾ.ಪಂ. ಅಧ್ಯಕ್ಷ ಕನಕರಾಜು ಅರಸ್ ಉತ್ತರಿಸಿದರು. ಗೌರವಧನ ಹೆಚ್ಚಳಗೊಳಿಸುವಂತೆ ಮುಖ್ಯಮಂತ್ರಿಯನ್ನು ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಒಕ್ಕೂಟದಿಂದ ಒತ್ತಾಯಿಸಲಾಗುವುದೆಂದು ಒಕ್ಕೂಟದ ಅಧ್ಯಕ್ಷ ಕವೀಶ್ ಹೇಳಿದರು.

ಯಾವುದೇ ಕಾರಣಕ್ಕೂ ಕಡತಗಳಿಗೆ ಮನೆಯಲ್ಲಿ ಸಹಿ ಹಾಕಬೇಡಿ, ಕಚೇರಿಗೆ ಬಂದು ಪರಿಶೀಲಿಸಿ ಸಹಿ ಹಾಕುವುದು ಒಳ್ಳೆಯದೆಂದು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಅಧ್ಯಕ್ಷರಿಗೆ ಸಲಹೆ ನೀಡಿದರು.ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಗುಡಿಸಲು ಮನೆಗಳ ಪಟ್ಟಿ ತಯಾರಿಸಿ ಆದಷ್ಟು ಬೇಗ ಕಚೇರಿಗೆ ಸಲ್ಲಿಸುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮನವಿ ಮಾಡಿದರು.

ಪಂಚಾಯಿತಿಯಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳು ಅಧ್ಯಕ್ಷರು, ಉಪಾಧ್ಯಕ್ಷರ ಗಮನಕ್ಕೆ ಬರುತ್ತಿಲ್ಲ. ಕಾರ್ಯದರ್ಶಿಗಳು ಮತ್ತು ಅಭಿವೃದ್ಧಿ ಅಧಿಕಾರಿಗಳ ಸಭೆಗೆಂದು ನಗರಕ್ಕೆ ಬರುವ ಪರಿಪಾಠ ಬೆಳೆಸಿಕೊಂಡಿದ್ದಾರೆ ಇವುಗಳಿಗೆ ಅಧಿಕಾರಿಗಳು ಕಡಿವಾಣ ಹಾಕಬೇಕೆಂಬ ಮಾತುಗಳು ಕೇಳಿಬಂದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.