ADVERTISEMENT

ಎಸ್ಟೇಟ್ ಮಾಲೀಕನ ವಿರುದ್ಧ ಆಕ್ರೋಶ :ರಸ್ತೆ ತೆರವಿಗೆ ಗ್ರಾಮಸ್ಥರ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2012, 9:50 IST
Last Updated 18 ಆಗಸ್ಟ್ 2012, 9:50 IST

ಮತಿಘಟ್ಟ(ಕಡೂರು): ಇತಿಹಾಸ ಪ್ರಸಿದ್ಧ ಬಾಳಗಲ್ಲು ಬೀರಲಿಂಗೇಶ್ವರನ ಗುಡ್ಡಕ್ಕೆ ರಸ್ತೆ ಒತ್ತುವರಿ ಮಾಡಿರುವವರ ವಿರುದ್ಧ ಶುಕ್ರವಾರ ನೂರಾರು ಭಕ್ತರು ರಸ್ತೆ ತೆರವು ಗೊಳಿಸುವಂತೆ ಆಗ್ರಹಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿರುವುದಾಗಿ 18 ಹರಿವಾಣದ ಗೌಡರ ಪರವಾಗಿ ಕೆ.ಎಂ.ಕೆಂಪರಾಜು ತಿಳಿಸಿದರು. 

ಬಾಳಗಲ್ಲು ಬೀರಲಿಂಗೇಶ್ವರ ಗುಡ್ಡದಲ್ಲಿರುವ ದೇವಾಲಯಕ್ಕೆ ಪ್ರತಿವರ್ಷ ಕಡೂರು ಸುತ್ತಮುತ್ತಲಿನ 250 ಕುಟುಂಬಗಳಿಗೆ ಸೇರಿದ ಭಕ್ತರು ಸನ್ನಿದಿಗೆ ತೆರಳಿ ಪೂಜೆ ಸಲ್ಲಿಸುವ ಸಂಪ್ರದಾಯ ಇದೆ. ನೂರಾರು ವರ್ಷಗಳಿಂದ ಬಂಡಿ ರಸ್ತೆ ಇದ್ದು, ಇದು ನಕಾಶೆಯಲ್ಲಿ ದಾಖಲಾಗಿದೆ.

ಸ್ಥಳೀಯರು ತಮ್ಮ ಜಮೀನುಗಳನ್ನು ಮಾರಾಟ ಮಾಡಿದ್ದರ ಹಿನ್ನೆಲೆಯಲ್ಲಿ ಉಳ್ಳವರ ಕೈ ಸೇರಿ ಎಸ್ಟೇಟ್‌ಗಳಾಗಿ ಪರಿವರ್ತಿಸಲಾಗಿದೆ. ಆದರೆ ಎಸ್ಟೇಟ್ ಮಾಲೀಕರು ಗುಡ್ಡಕ್ಕೆ ತೆರಳುವ ರಸ್ತೆಯನ್ನು ಸಂಪೂರ್ಣ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ದೂರಿದರು. 

ರಾಜಕೀಯ ಪ್ರಭಾವದ ವ್ಯಕ್ತಿ ಬಾಳಗಲ್ಲು ಗುಡ್ಡದಲ್ಲಿ ದೊರಕುವ ಕಪ್ಪು ಶಿಲೆ ವಿಗ್ರಹ ಕೆತ್ತನೆಗೆ ಉಪಯುಕ್ತ ಎಂಬುದನ್ನು ಅರಿತು ಗುಡ್ಡ ನಮಗೆ ಸೇರುತ್ತದೆ ಎಂದು ತಕರಾರು ಮಾಡುತ್ತಿದ್ದಾರೆ ಎಂದು ಸೇರಿದ್ದ ನೂರಾರು ಭಕ್ತರು ಆರೋಪಿಸಿದರು.

ನಕಾಶೆಯಲ್ಲಿರುವಂತೆ ಬೀರಲಿಂಗೇಶ್ವರ ಗುಡ್ಡಕ್ಕೆ ತೆರಳುವ ರಸ್ತೆಯನ್ನು ತಹಶೀಲ್ದಾರ್ ವಾರದೊಳಗೆ ಬಿಡಿಸಿಕೊಡಬೇಕು. ಇಲ್ಲವಾದರೆ ಒತ್ತುವರಿ ರಸ್ತೆಯನ್ನು 12 ಗ್ರಾಮಗಳ ಬುಡಕಟ್ಟಿನ ಭಕ್ತರು ಮತ್ತು 18 ಹರಿವಾಣದ ಬಳಗದವರು  ಹೋರಾಟ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆ ಸಹ ನೀಡಿದರು.

ಶ್ರೀಕಂಠ ಒಡೆಯರ್, ಗುತ್ತಿಗೆದಾರ ಹಿರಿಯಣ್ಣ, ಮಹೇಶ್ ಗೌಡ, ಶ್ರೀನಿವಾಸ್, ಕುಬೇರಪ್ಪ, ನಾರಾ ಯಣಪ್ಪ, ಹೇಮಂತ್ ಕುಮಾರ್, ನಾಗರಾಜು, ದೇವರಾಜು, ತಿಮ್ಮೆಗೌಡ, ಗೋವಿಂದಪ್ಪ, ಗಂಗಯ್ಯ ಹಾಗೂ ನೂರಾರು ಭಕ್ತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.